33.1 C
Udupi
Wednesday, April 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 107

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೦೮ ಮಹಾಭಾರತ

ದೃಷ್ಟದ್ಯುಮ್ನನಿತ್ತ ಕರೆ ಕೇಳಿ ಬ್ರಾಹ್ಮಣರೆಲ್ಲರೂ ಮುಖ ಮುಖ ನೋಡತೊಡಗಿದರು. ಕ್ಷಾತ್ರ ವೀರ ಬಿಲ್ಗಾರರು ಲಕ್ಷ್ಯ ಭೇದನ ಕನಿಷ್ಟ ಪ್ರಯತ್ನವನ್ನೂ ಮಾಡಲಾಗದೆ ಕೈ ಸೋತಿರುವಾಗ ಧಾರ್ಮಿಕ ವಿಧಿ ವಿಧಾನ ನಿರತರಾದ ನಮ್ಮಿಂದ ಏನಾದೀತು? ಎಂಬ ಭಾವನೆ ಮುಖಭಾವದಲ್ಲೇ ವ್ಯಕ್ತವಾಗುತ್ತಿತ್ತು. ಋಷಿಗಳು ಮಾತ್ರ ಪ್ರಸನ್ನವದನರಾಗಿ ಏನೋ ಮಂಗಳಕರ ಕಲ್ಯಾಣವಾಗಲಿದೆ ಎಂಬುದನ್ನು ಅರಿತವರಂತೆ ಹಸನ್ಮುಖರಾಗಿ ಕಾತರದ ದೃಷ್ಟಿಯಿಂದ ಕಾಯುತ್ತಿದ್ದರು. ಅದೇ ಸಮಯಕ್ಕೆ ಅರ್ಜುನ ಸನ್ನೆಯ ಮೂಲಕ ಅಣ್ಣ ಧರ್ಮರಾಯನ ಸಮ್ಮತಿ ಪಡೆದನು. ಧೌಮ್ಯರೂ ಅರ್ಜುನ ಮುಂದುವರಿಯಲು ಸೂಚಕರಂತೆ ಶಿರ ಅಲುಗಿದರು. ಪಾರ್ಥ ಅರೆಕ್ಷಣ ಕಣ್ಮುಚ್ಚಿ ಧ್ಯಾನಿಸಿ ಮಹಾದೇವ ಶಿವ ಪರಮಾತ್ಮನಿಗೆ ನಮಿಸಿದನು. ಗುರು ದ್ರೋಣರನ್ನು ಸ್ಮರಿಸಿ ವಂದಿಸಿದನು. ಮಾತೆ ಕುಂತಿದೇವಿ, ಪಿತ ಪಾಂಡು ಚಕ್ರವರ್ತಿ, ಅನುಗ್ರಹದಾತ ದೇವೇಂದ್ರರಿಗೆ ಪ್ರಣಾಮ ಸಲ್ಲಿಸಿದನು. ಅಜ್ಜ ಭೀಷ್ಮರನ್ನು ಬೇಡಿ ಮಾನಸ ಆಶೀರ್ವಾದ ಬೇಡಿದನು. ಬಳಿಕ ಮನಸ್ಸಿನ ಏಕಾಗ್ರತೆ ಸಾಧಿಸಿ ಮೇಲೆದ್ದು ನಿಂತನು.

ಕ್ಷತ್ರಿಯ ರಾಜ ಮಹರಾಜರು ಈ ವಿಪ್ರನನ್ನು ನೋಡಿದರು. ಗಡ್ಡಬಿಟ್ಟ, ಯಜ್ಞೋಪವಿತ ಧರಿಸಿದ, ಉತ್ತರೀಯ ಹೊದ್ದುಕೊಂಡು ಕಚ್ಚೆ ಬಿಗಿದು ನಿಂತ ಬ್ರಾಹ್ಮಣನನ್ನು ಕಂಡು ಈತನಿಗೂ ಒಂದು ಹುಚ್ಚು ಭ್ರಮೆಯ ಆಸೆಯೇ! ಎಂದು ಅಪಹಾಸ್ಯ ಮಾಡಿ, ನಾವು ಕ್ಷತ್ರಿಯರಿಗಾಗದ ಸಾಧನೆ ಈ ವಿಪ್ರ ಮಾಡಿದರೆ, ದ್ರೌಪದಿಗಿನ್ನು ಬ್ರಾಹ್ಮಣ ಗಂಡ! ಎಂದು ವ್ಯಂಗ್ಯವಾಡುತ್ತಾ ಗೊಳ್ಳೆಂದು ನಕ್ಕರು.

ಅರ್ಜುನ ಮಾತ್ರ ಯಾವುದನ್ನೂ ಪರಿಗಣಿಸದೆ ಎದ್ದು ನಿಂತವನು ತನ್ನ ಮೇಲು ಹೊದಿಕೆ ಉತ್ತರೀಯವನ್ನು ಬಿಗಿದು ಕಟಿಗೆ ಕಟ್ಟಿಕೊಂಡನು. ಬ್ರಾಹ್ಮಣರಿಗಂತೂ ಅತಿಸಂತೋಷ. ನಮ್ಮಲ್ಲೂ ಒಬ್ಬ ಸ್ಪರ್ಧಾಳು ಎದ್ದು ನಿಂತು, ನೀಡಿದ ಪಂಥಾಹ್ವಾನ ಸ್ವೀಕರಿಸಿ ಮಾನ ಉಳಿಸಿದನಲ್ಲಾ ಎಂಬ ಸಡಗರ. ಈತನಿಂದ ಲಕ್ಷ್ಯಭೇದನ ಆಗದೇ ಇದ್ದರೂ ನಮ್ಮ ಕುಲಕ್ಕೆ ಅಪಮಾನವಾಗದು. ಕಾರಣ ಕ್ಷತ್ರಿಯರೇ ಕೈಸೋತು ಕುಳಿತಿದ್ದಾರೆ, ಬ್ರಾಹ್ಮಣರೇನು ಧನುರ್ಬಾಣ ಪ್ರವೀಣರಾಗಿರಬೇಕೆಂದು ಏನೂ ಇಲ್ಲವಲ್ಲ. ಹಾಗೆಂದು ಈತನ ತೇಜಸ್ಸು, ವರ್ಚಸ್ಸು, ಕಣ್ಣಿನ ತೀಕ್ಷ್ಣತೆ, ಅಜಾನುಬಾಹು, ಗಾಂಭೀರ್ಯತೆ ನೋಡಿದರೆ ಏನೋ ವಿಶೇಷವೂ, ಸಾಧಿಸಿಯಾನೋ ಎಂಬ ಭಾವನೆಯೂ ಮೂಡುತ್ತಿದೆ. ಒಂದೊಮ್ಮೆ ಹಾಗೆ ಸಾಧಿಸಿದರೆ ನಮ್ಮ ಕುಲಕ್ಕೆ ಮಹಾ ಕೀರ್ತಿ ಒದಗಲಿದೆ. ಹೀಗೆಲ್ಲಾ ತರ್ಕಿಸಿ ಜಯಘೋಷದೊಂದಿಗೆ, ದೇವತಾ ಪ್ರಾರ್ಥನೆಗೈಯುತ್ತಾ ಪ್ರೇರಕರಾದರು.

ಅರ್ಜುನ ಎದ್ದು ಹೊರಡುವ ಮೊದಲು ಒಮ್ಮೆ ಸಭಾಂಗಣ ಪೂರ್ತಿ ದೃಷ್ಟಿ ಹಾಯಿಸಿದ. ಮುಗುಳ್ನಗು ಸೂಸುತ್ತಾ ಕುಳಿತಿದ್ದ ಕೃಷ್ಣನ ಕಣ್ಣಿಗೆ ಕಣ್ಣು ನೆಟ್ಟು ನೇರ ದೃಷ್ಟಿಯ ಮೌನ ಸಂಭಾಷಣೆಯಲ್ಲೆ ಭಾವನಿಗೆ ಮುಖಭಾವದಲ್ಲೇ ಎನಗೆ ದೇವನೂ ನೀನೆಂದು ಸ್ತುತಿಸಿ ವಂದಿಸಿ ಬಲಗಾಲು ಮುಂದಿಟ್ಟು ಹೆಜ್ಜೆ ಬೆಳೆಸಿದನು.

ಮೃಗರಾಜನಂತಹ ನಡೆಯ ಗಂಭೀರತೆ, ಕಾಂತಿ ಪ್ರಭೆ ಒಮ್ಮೆಗೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿತು. ಬ್ರಾಹ್ಮಣ ರೂಪಿನ ಭಾರ್ಗವನೋ ಎಂಬಂತೆಯೂ ಭ್ರಮೆ ಹುಟ್ಟಿಸಿತು ಆ ರೂಪ ತೇಜಸ್ಸು. ದ್ರುಪದನಿಗೆ ದ್ರೋಣನ ಅಪರಾವತರವೋ ಇದು ಎಂಬಂತೆ ಭಾಸವಾಗಿ ಒಮ್ಮೆ ಕಣ್ಣುಜ್ಜಿಕೊಂಡು ನೋಡುವಂತಾಯಿತು. ಒಮ್ಮೆಗೆ ಸಭಾಂಗಣ ಸ್ತಬ್ಧಗೊಂಡು ನೀರವ ಮೌನತಳೆಯಿತು.

ಸ್ಪರ್ಧಾ ಮಂಟಪವೇರಿ ಕೈ ಮುಗಿದು ನಿಂತನು ಅರ್ಜುನ ಮತ್ತೊಮ್ಮೆ ಪರಮೇಶ್ವರ ಶಿವಪರಮಾತ್ಮನನ್ನು ಧ್ಯಾನಿಸಿ, ಗುರು ದ್ರೋಣಾಚಾರ್ಯರನ್ನು ಸ್ಮರಿಸಿದ. ದಿವ್ಯ ಧನುಸ್ಸಿಗೆ ನಮಿಸಿ ಪಂಚಶರ ತುಂಬಿದ್ದ ತೂಣಿರವನ್ನು ಬಲಭುಜದ ಬೆನ್ನಿಗೆ ಬಿಗಿದು ಕಟ್ಟಿದನು. ಎರಡೂ ಕೈಗಳಿಂದ ಕಿಂಧುರ ಧನುವನ್ನು ಸ್ಪರ್ಶಿಸಿ ಕರಗಳನ್ನು ಕಣ್ಣುಗಳಿಗೊತ್ತಿ ಕರ ಜೋಡಿಸಿ ಶಿರಬಾಗಿ ನಮಿಸಿದನು. ನಡು ಬಿಲ್ಲಿಗೆ ಕೈಯಿಟ್ಟು ಮೇಲೆತ್ತಿ ಕ್ಷಾತ್ರ ಕ್ರಮದಲ್ಲೇ ಬಾಗಿ ಬಗ್ಗಿಸಿ ಪ್ರತ್ಯಂಚವನ್ನು ಬಿಗಿದು ಕಟ್ಟಿದ. ಹೆದೆಯೇರಿಸಿ ಬಿಲ್ಲಿನ ನಾಣನ್ನು ಹಿಡಿದೆಳೆದು ಬಿಟ್ಟಾಗ ಉಂಟಾದ ಧನುಷ್ಠೇಂಕಾರದ ತರಂಗಗಳು ಅರ್ಜುನನ ಧನುರ್ವಿದ್ಯೆಯ ಗುಣಧ್ವನಿಯಂತೆ ನಾಲ್ಕೂ ದಿಕ್ಕಿನ ದಿಗ್ದಿಗಂತಗಳನ್ನು ವ್ಯಾಪಿಸಿತು. ಕರ್ಣನಿಗೆ ಟೇಂಕಾರದ ಧ್ವನಿ, ಕ್ರಮಗಳನ್ನು ಕಂಡು ಇವನ್ಯಾರು ಅರ್ಜುನನೋ? ಎಂಬಂತೆ ಭಾಸವಾಗಿ ತೀಕ್ಷ್ಣವಾಗಿ ನೋಡತೊಡಗಿದ. ಇತ್ತ ಅರ್ಜುನ ಐದೂ ಶರಗಳನ್ನು ಬೆರಳ ಸಂದುಗಳಲ್ಲಿ ಜೋಡಿಸಿ ಹಿಡಿದು ಧನುವೇರಿಸಿ ವೇಗ ಗತಿಯ ನಿಯಂತ್ರಣ ಏಕಾಗ್ರತೆ ಸಾಧಿಸ ತೊಡಗಿದನು. ಗಿರ್ರನೆ ತಿರುಗುತ್ತಿದ್ದ ಯಂತ್ರದ ಬಿಂಬವನ್ನೇ ದಿಟ್ಟಿಸಿ ನೋಡುತ್ತಾ, ಯಂತ್ರದ ರಂಧ್ರವನ್ನು, ಅದರ ಚಲನಾ ಗತಿಗಮನವನ್ನು ಮತಿಯೊಳಗೆ ಕಲ್ಪಿಸಿ ಏಕಾಗ್ರ ಚಿತ್ತದಿಂದ ಕಾಯುತ್ತಾ ಧನುವಿನ ಪ್ರತ್ಯಂಚವನ್ನು ಜಗ್ಗಿ ಎಳೆಯುತ್ತಾ ತುಸು ಬಿಡುತ್ತಾ ಪ್ರಯೋಗ ಮುನ್ನ ಗತಿಯ ಹಿಡಿತ ಸಾಧಿಸುತ್ತಾ ಬಿಂಬದಲ್ಲಿ ಯಂತ್ರ ರಂಧ್ರದ ನಿಖರ ಚಲನೆಯ ವೇಗವನ್ನು ಆಧರಿಸಿ ಸರ್ರನೆ ಬಾಣಗಳನ್ನು ಪ್ರಯೋಗಿಸಿದನು. ಚಿಮ್ಮಿದ ಶರಗಳು ಯಂತ್ರ ರಂಧ್ರಗಳನ್ನು ಏಕಕಾಲದಲ್ಲಿ ಭೇದಿಸಿ ಹೊಕ್ಕು ಮತ್ಸ್ಯ ಲಾಂಛನದ ನೀಲಿ ಅಕ್ಷಿಯ ಮಣಿಯನ್ನು ಪುಡಿಗಟ್ಟಿ ಚುಚ್ಚಿ ಲಾಂಛನವನ್ನು ಕೆಳಗುರುಳಿಸಿ ಪಂಚಶರಗಳೊಂದಿಗೆ ಕಳಚಿ ಬಿದ್ದಿತು.

ಒಮ್ಮೆಲೇ ಜಯಭೇರಿ, ವಾದ್ಯಘೋಷ, ಮಂಗಳವಾದ್ಯಗಳು, ಶಂಖನಾದ ಏಕಕಾಲದಲ್ಲಿ ಮೊಳಗತೊಡಗಿದವು. ಅರ್ಜುನ ಮಾತ್ರ ಒಂದು ಕೈಯಲ್ಲಿ ಮೇಲೆತ್ತಿ ಹಿಡಿದ ಧನುವನ್ನು ಕೆಳಗಿಳಿಸದೆ ಮತ್ತೂ ಗುರಿಯನ್ನೇ ತದೇಕ ಚಿತ್ತದಿಂದ ನೋಡುತ್ತಾ ನಿಂತ ಭಂಗಿ, ಇನ್ನೂ ಕಂಪಿಸುತ್ತಿರುವ ಬಿಲ್ಲಿನ ನಾಣು, ಬಿಲ್ಲಿನ ನಡು ಬಿಗಿ ಹಿಡಿದ ಮುಷ್ಟಿಯಿಂದ ಭುಜದವರೆಗಿನ ಆ ಬಲಿಷ್ಟ ತೋಳು, ವಿಶಾಲ ವಕ್ಷಸ್ಥಳ! ಅರೇ ನೋಡುವುದೇನು? ವೀರಾದಿ ವೀರರನ್ನೇ ನಿಬ್ಬೆರಗಾಗಿಸುವ ಅಂಗ ಸೌಷ್ಟವದ ಅಪ್ರತಿಮ ಧನುರ್ಧಾರಿಯ ನಿಲುಮೆ. ಕ್ಷತ್ರಿಯರು ಕುಳಿತ ಆಸನದಲ್ಲೇ ಹಿಂದೆ ದೂಡಲ್ಪಟ್ಟವರಂತೆ ಬಾಣದ ಜೊತೆ ಕತ್ತೆತ್ತಿ ನೋಡಿ, ಹಾಗೆಯೇ ಲಕ್ಷ್ಯ ಭೇದಿಸಿ ಬಿದ್ದ ಶರಪುಂಜದ ಜೊತೆ ದೃಷ್ಟಿಯೂ ನೆಲನೋಟಕರನ್ನಾಗಿಸಿ ದ್ವಂದ್ವ ಭಾವ ಪ್ರಕಟಿಸುತಿತ್ತು. ಅಂದರೆ ನಾವು ಮಾಡಲಾಗದ್ದನ್ನು ಓರ್ವ ಕೇವಲ ವಿಪ್ರ ಮಾಡಿದನೇ? ಸಾಧ್ಯವೇ? ಎಂಬ ಪ್ರಶ್ನಾರ್ಥಕ ಭಾವವೂ ಮಿಳಿತವಾಗಿತ್ತು.

ದ್ರೌಪದಿ ತನ್ನ ಪಿತ ದ್ರುಪದನ ಅಪ್ಪಣೆ, ಕುಲ ಪುರೋಹಿತರ ಮಂತ್ರ ಘೋಷ ದೃಷ್ಟದ್ಯುಮ್ನನ ಮುಂದಾಳತ್ವದಲ್ಲಿ ಸ್ವಯಂವರ ಪೀಠದಿಂದೆದ್ದು ಮದಗಜಗಮನೆಯಂತೆ ಬಳುಕುತ್ತಾ ಅರ್ಜುನನ ಬಳಿ ಬಂದು ನಿಂತಳು. ಕಣ್ಣೆತ್ತಿ – ಕತ್ತೆತ್ತಿ ನೋಡಿದ ಅರ್ಜುನನ ಕೊರಳಿಗೆ ವರಣಮಾಲಿಕೆ ದ್ರೌಪದಿಯ ಸುಕೋಮಲ ಕರಗಳಿಂದ ಧರಿಸಲ್ಪಟ್ಟಿತು. ಬಾಗಿ ಅರ್ಜುನನ ಪಾದದ್ವಯಗಳಿಗೆ ನಮಿಸಿ ಶಿರಬಾಗಿ ನಿಂತಳು ದ್ರುಪದಜೆ ಪಾಂಚಾಲಿ. ಮಂದ ಮಾರುತನ ಜೊತೆ ಪುಷ್ಪವೃಷ್ಟಿಯೂ ಗಗನದಿಂದಿಳಿಯುತ್ತಿವೆ. ದೇವಾತಾನುಗ್ರದ ಸೇಸೆಯಂತೆ ಅರ್ಜುನ ದ್ರೌಪದಿಯ ಶಿರಸ್ಸಿನ ಮೇಲುದುರುತ್ತಿವೆ. ಭೀಮ ಸೇನ ಮಾತ್ರ ತಕ್ಷಣ ಆಶೀರ್ವದಿಸಲು ಬಂದ ಬ್ರಾಹ್ಮಣನಂತೆ ಅರ್ಜುನನ ಬಳಿ ಬಂದು ನಿಂತನು.

ಆದರೆ, ಆಗ ಅಲ್ಲಿ ನೆರೆದಿದ್ದ ಕ್ಷತ್ರಿಯರು ಮಾತ್ರ ಅಪಮಾನದಿಂದ ಭ್ರಮನಿರಸನಕ್ಕೊಳಗಾದವರಂತೆ ಬೊಬ್ಬಿರಿದು ತಮ್ಮ ತಮ್ಮ ಆಯುಧಗಳನ್ನೆತ್ತಿ ಹಿಡಿದರು. ದ್ರುಪದನ ರಕ್ಷಾ ಪಡೆ ಅಪಾಯದ ಸೂಚನೆಯರಿತು ದೃಷ್ಟದ್ಯುಮ್ನನ ಆದೇಶದಂತೆ ನೂತನ ವಧುವರರ ರಕ್ಷೆಗಾಗಿ ಸುತ್ತುವರಿದು ನಿಂತಿತು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page