
ಕಾರ್ಕಳ: ತಾಲೂಕಿನ ಆನೆಕೆರೆಯ ಸಮೀಪ ಇರುವ ಸಿಗಡಿಕೆರೆ ಕೆರೆಯಲ್ಲಿ ಮೀನುಗಳು ಅಸಹಜವಾಗಿ ಸಾಯುತ್ತಿರುವ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಇದು ಕಿಡಿಗೇಡಿಗಳ ಕೃತ್ಯವೇ ಅಥವಾ ನೀರಿನ ಮಾಲಿನ್ಯದ ಪರಿಣಾಮವೇ ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಕೆರೆಗೆ ಪ್ಲಾಸ್ಟಿಕ್ ಬಾಟಲಿ ಹಾಗೂ ಇತರ ತ್ಯಾಜ್ಯಗಳನ್ನು ಎಸೆಯುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕೆಲವರು ಮೀನುಗಾರಿಕೆ ಉದ್ದೇಶದಿಂದ ವಿಷಕಾರಿ ಪದಾರ್ಥಗಳನ್ನು ನೀರಿಗೆ ಸೇರಿಸಿದ್ದಾರೇನೋ ಎಂಬ ಶಂಕೆಯೂ ವ್ಯಕ್ತವಾಗಿದೆ. “ರಾತ್ರಿ ವೇಳೆಯಲ್ಲಿ ಸಣ್ಣ ಹಾಗೂ ದೊಡ್ಡ ಮೀನುಗಳು ಸತ್ತು ದಡಕ್ಕೆ ತೇಲಿಬರುತ್ತಿವೆ,” ಎಂದು ಮಾಜಿ ಪುರಸಭೆ ಸದಸ್ಯ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಈ ಕೆರೆಯಲ್ಲಿ ವಿವಿಧ ಜಾತಿಯ ಮೀನುಗಳು ಕಂಡುಬರುತ್ತವೆ. ಹಿಂದಿನ ದಿನಗಳಲ್ಲಿ ಶಾಸಕ ಸುನಿಲ್ ಕುಮಾರ್ ಅವರ ಮುಂದಾಳತ್ವದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ನೀರಿನ ಶುದ್ಧತೆ ಮತ್ತು ಭೂಗರ್ಭ ಜಲಮಟ್ಟ ಹೆಚ್ಚಲು ಸಹಾಯವಾಗಿತ್ತು. ಇಂದಿಗೂ ಇದು ಈ ಪ್ರದೇಶದ ಪ್ರಮುಖ ಜಲಮೂಲವಾಗಿದೆ.

















