
ಕಾರ್ಕಳ: ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಸುನಿಲ್ ಕುಮಾರ್ ಮಳೆಗಾಲದ ವೇಳೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ತುರ್ತು ಸಂದರ್ಭಗಳಲ್ಲಿ ಸಂಘ-ಸಂಸ್ಥೆಗಳ ಸಹಕಾರವನ್ನೂ ಪಡೆಯುವಂತೆ ಸೂಚಿಸಿದರು.
ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿ, ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯ ತಡೆಗಟ್ಟಲು 24 ಗ್ಯಾಂಗ್‌ಮೆನ್‌ಗಳನ್ನು ನೇಮಕ ಮಾಡಲಾಗಿದ್ದು, ಅರಣ್ಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಅಗ್ನಿಶಾಮಕ ಇಲಾಖೆ ಪ್ರವಾಹ ಪರಿಸ್ಥಿತಿಗೆ ಸಿದ್ಧತೆ ಮಾಡಿಕೊಂಡಿದ್ದು, ಬೋಟ್ ಹಾಗೂ ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧ ಲಭ್ಯತೆ, ಕಲುಷಿತ ನೀರಿನ ಶುದ್ಧೀಕರಣ ಹಾಗೂ ಆರೋಗ್ಯ ಇಲಾಖೆಯ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದು, ಜೊತೆಗೆ ಅನಧಿಕೃತ ರಸ್ತೆ ಬದಿ ನಿರ್ಮಾಣ ತೆರವು, ಶಾಲಾ ಆವರಣದಲ್ಲಿನ ಅಪಾಯಕಾರಿ ಮರಗಳ ತೆರವು ಹಾಗೂ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಅಗತ್ಯವಿದ್ದಲ್ಲಿ ,ಕಿರು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಸಭೆಯಲ್ಲಿ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುಮಾರ್, ಹೆಬ್ರಿ ತಹಶೀಲ್ದಾರ್ ಪ್ರದೀಪ್ ಕುಡೇರ್ಕರ್ ಹಾಗೂ ತಾ.ಪಂ ಇಒ ಪ್ರಶಾಂತ್ ರಾವ್ ಉಪಸ್ಥಿತರಿದ್ದರು.





















































































