
ಬೆಂಗಳೂರು: ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷದಲ್ಲಿ ಪ್ರಮುಖ ಹುದ್ದೆಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳೇನು ಸ್ಥಾನಮಾನ ಕೊಡಿಸುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷದ ನಾಯಕರು ಹುದ್ದೆ ನೀಡುತ್ತಾರೆ ಎಂದು
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಾವು ಮಾಡುವ ಕೆಲಸ ಮತ್ತು ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಸೂಕ್ತ ಹುದ್ದೆಗಳನ್ನು ನೀಡುತ್ತಾರೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳು ಸ್ಥಾನಮಾನ ಕೊಡಿಸುವುದಿಲ್ಲ. ಇದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸದ್ಯಕ್ಕೆ ನಮಗೆ ಪಕ್ಷ ಸಂಘಟನೆ ಮುಖ್ಯ. ಪಕ್ಷ ಸಂಘಟಿಸಿ, ಉಳಿಸಿ, ಬೆಳೆಸುವ ಕೆಲಸವಾಗಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬುದ್ಧಿವಾದ ಹೇಳಿದ್ದಾರೆ. ಯಾರೂ ಬಹಿರಂಗ ಚರ್ಚೆ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ. ಪಕ್ಷದ ಬಗ್ಗೆ ಯಾರಿಗಾದರೂ ಸಮಸ್ಯೆಗಳಿದ್ದರೆ, ಹೈಕಮಾಂಡ್ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.





















