
ನವದೆಹಲಿ: ನೀಟ್ ಯುಜಿ ಮರುಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ ಟೆಲಿಗ್ರಾಂ ಆಪ್ಗೆ ತಾತ್ಕಾಲಿಕ ನಿರ್ಬಂಧ ಹೇರಿದೆ ಎನ್ನಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಟೆಲಿಗ್ರಾಂ ಸಂಸ್ಥೆ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಈ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯ ಅವರ ಏಕ ಸದಸ್ಯ ಪೀಠ ಬುಧವಾರ ತುರ್ತು ವಿಚಾರಣೆಗೆ ಸ್ವೀಕರಿಸಿದ್ದು, ಇಂದು ಮಧ್ಯಾಹ್ನವೇ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸುಳ್ಳು ಸುದ್ದಿಗಳಿಗೆ ತಡೆ ನೀಡಲು ಎನ್ಟಿಎ ಶಿಫಾರಸು ಮಾಡಿತ್ತು. ಅದರಂತೆ ಜೂನ್ 22ರವರೆಗೆ ಟೆಲಿಗ್ರಾಂ ಸೇವೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿದುಬಂದಿದೆ.
ಮರುಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎನ್ಟಿಎ ಮಹಾ ನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ, ಟೆಲಿಗ್ರಾಂ ಸಿಇಒ ಪಾವೆಲ್ ಡುರೊವ್ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ತಾತ್ಕಾಲಿಕ ನಿಷೇಧವೂ ಸರಿಯಾದ ಕ್ರಮವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

































