27.7 C
Udupi
Sunday, April 26, 2026
spot_img
spot_img
HomeBlogನವೋಲ್ಲಾಸ ದಿನ - 7(ಕಾಳರಾತ್ರಿ ದೇವಿ ಅವತಾರ

ನವೋಲ್ಲಾಸ ದಿನ – 7(ಕಾಳರಾತ್ರಿ ದೇವಿ ಅವತಾರ

ಹೆಸರಿನ ಹಿನ್ನೆಲೆ ಪೂರ್ವಕಥೆ, ಉಪಾಸನೆ ಮತ್ತು ಮಹತ್ವ

ಪ್ರಜ್ವಲಾ ಶೆಣೈ, ಕಾರ್ಕಳ

ದುರ್ಗೆಯ ನಾನಾ ಅವತಾರಗಳನ್ನು ಆಕೆಯ ಅಪಾರ ಶಕ್ತಿ ಮಹಿಮೆಯನ್ನು ಒಂಭತ್ತು ದಿನಗಳಲ್ಲಿ ಪೂಜಿಸುವ ಮಹಾಪರ್ವವೇ ನವರಾತ್ರಿ. ಭೂಲೋಕದಲ್ಲಿ ರಾಕ್ಷಸರ ಅಟ್ಟಹಾಸವು ಮಿತಿಮೀರಿ ಅಧರ್ಮ
ತಾಂಡವವಾಡುತ್ತಿರುವಾಗ ದುರ್ಗಾಮಾತೆ ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಣೆಗೆ ವಿವಿಧ ರೂಪಗಳಲ್ಲಿ ಬಂದು ಒಬ್ಬೊಬ್ಬ ರಾಕ್ಷಸನ ಸಂಹಾರ ಮಾಡಿದಳು ಎನ್ನುವುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.ಈ ಎಲ್ಲಾ ಕಾರಣಗಳಿಂದಲೇ ನವರಾತ್ರಿ ವಿಶಿಷ್ಟವಾಗಿದೆ.

ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿ ಅವತಾರ
ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ದುರ್ಗಾದೇವಿಯ ಭಯಾನಕ ರೂಪವಾದ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಕರಾಳ ರಾತ್ರಿಯನ್ನು ಸಂಕೇತಿಸುವ ಕಾಳರಾತ್ರಿಯನ್ನು ದುರ್ಗೆಯ ಅತ್ಯಂತ ಕ್ರಿಯಾತ್ಮಕ ರೂಪವೆಂದು ಬಣ್ಣಿಸಲಾಗಿದೆ. ದುರ್ಗೆಯ ಅತ್ಯಂತ ಭೀಕರ ರೂಪವಾದ ಕಾಳರಾತ್ರಿಗೆ ಮೂರು
ಕಣ್ಣುಗಳು ಹಾಗೂ ನಾಲ್ಕು ಕೈಗಳಿವೆ ಎಂದು ಹೇಳಲಾಗಿದೆ. ಒಂದು ಕೈಯಲ್ಲಿ ವರದಮುದ್ರೆ ಇನ್ನೊಂದು ಕೈಯಲ್ಲಿ ಅಭಯಮುದ್ರೆ ಹಾಗೂ ಉಳಿದ ಎರಡು ಕೈಗಳಲ್ಲಿ ಸಲಾಕೆ ಹಾಗೂ ಖಡ್ಗವನ್ನು ಹಿಡಿದಿರುವ ಕಾಳರಾತ್ರಿಯ ರೂಪವು ಅತ್ಯಂತ ರೌದ್ರವಾಗಿದೆ. ಆಕೆಯ ದೇಹದ ಬಣ್ಣವು ಗಾಢ ಕಪ್ಪು ಬಣ್ಣವನ್ನು ಹೊಂದಿದ್ದು ತಲೆಕೂದಲನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಕೊರಳಲ್ಲಿ ರುಂಡಮಾಲೆಯನ್ನು ಧರಿಸಿರುವ ದೇವಿ ಭಯಾನಕವಾಗಿ ಕಾಣಿಸುತ್ತಾಳೆ. ಕತ್ತೆಯ ಮೇಲೆ ವಿರಾಜಮಾನಳಾಗಿರುವ ದೇವಿಯ ಉಸಿರಾಟದಲ್ಲಿ ಅಗ್ನಿ ಜ್ವಾಲೆ ಹೊಮ್ಮುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.


ಕಾಳರಾತ್ರಿ ದೇವಿ ಹೆಸರಿನ ಹಿನ್ನೆಲೆ ಮತ್ತು ಪೂರ್ವ ಕಥೆ

ದುರ್ಗೆಯ ಏಳನೇ ಅವತಾರವಾದ ಕಾಳರಾತ್ರಿ ಹೆಸರು ಆಕೆಯ ರೂಪದಿಂದಲೇ ಬಂದಿದೆ.ಆಕೆಯ ಕತ್ತಲೆ ಯಂತಹ ಕಪ್ಪುದೇಹದಿಂದಲೆ ಕಾಳರಾತ್ರಿ ಹೆಸರು ಬಂತು.ಕಾಲ ಎಂದರೆ ಸಮಯ ಹಾಗೂ ಸಾವು ಎಂಬುವುದರ ಸೂಚಕವೂ ಹೌದು.
ದಂತಕತೆಯ ಪ್ರಕಾರ ರಾಕ್ಷಸನಾದ ಶುಂಭ, ನಿಶುಂಭ ಮತ್ತು ರಕ್ತ ಬೀಜಾಸುರರ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರಿತ್ತು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಬಳಿ ಕಾಪಾಡುವಂತೆ ಮೊರೆ ಹೋಗುವರು. ಶಿವನು ತನ್ನ ಅರ್ಧಾಂಗಿ ಪಾರ್ವತಿಗೆ ರಾಕ್ಷಸರನ್ನು ಸಂಹರಿಸಲು ಕೇಳುತ್ತಾನೆ. ಪಾರ್ವತಿಯು ತನ್ನ ದುರ್ಗಾವತಾರ ತಾಳಿ ಶುಂಭ, ನಿಶುಂಭರನ್ನು ವಧಿಸುತ್ತಾಳೆ. ಆದರೆ ರಕ್ತ ಬೀಜಾಸುರನನ್ನು ಕೊಂದ ಬಳಿಕ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಾಂತರ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ಅರಿತ ದುರ್ಗಾಮಾತೆ ತನ್ನ ತೇಜಸ್ಸಿನಿಂದ ಕಾಳರಾತ್ರಿ ಅವತಾರ ತಾಳಿ ಆತನ ದೇಹದಿಂದ ಹೊರಬಂದ ರಕ್ತವನ್ನು ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ರಕ್ತಬೀಜಾಸುರನನ್ನು ಕೊಂದು ಮದದಿಂದ ನರ್ತಿಸುವಳು. ಹೀಗೆ ಅಸುರರನ್ನು ಶಿಕ್ಷಿಸಲು ಕಾಳರಾತ್ರಿ ಅವತಾರ ಜನ್ಮತಾಳಿತು.
ಕಾಳರಾತ್ರಿ ದೇವಿ ಉಪಾಸನೆ ಮತ್ತು ಮಹತ್ವ

ಯಾ ದೇವಿ ಸರ್ವಭೂತೇಷು
ಕಾಳರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ

ಎನ್ನುವ ಮಂತ್ರದಿಂದ ಕಾಳರಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಗೆ ಅರಿಶಿನ ,ಕುಂಕುಮ ಅಕ್ಷತೆ, ವಸ್ತ್ರ ಇತ್ಯಾದಿ ಉಪಚಾರಗಳಿಂದ
ಸಂಪನ್ನಗೊಳಿಸಲಾಗುತ್ತದೆ. ಈಕೆಗೆ ನಿಂಬೆ ಹಣ್ಣಿನಿಂದ ಮಾಡಿದ
ಹಾರವನ್ನೂ ಅರ್ಪಿಸಲಾಗುತ್ತದೆ.ಬೆಲ್ಲದ ಭಕ್ಷ್ಯಗಳು ಆಕೆಗೆ ಅತ್ಯಂತ ಪ್ರಿಯ ಹಾಗಾಗಿ ದೇವಿಗೆ ಪ್ರಿಯವಾದ ಬೆಲ್ಲದ ಖಾದ್ಯ ಮತ್ತು ಖಿಚಡಿಯನ್ನು ನೈವೇದ್ಯವಾಗಿ ಅರ್ಪಿಸಿ ತನ್ನ ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.
ತಾಯಿ ಕಾಳರಾತ್ರಿಯು ಅಂಧಕಾರವನ್ನು ಹೊಡೆದೋಡಿಸಿ ಧನಾತ್ಮಕ ಬೆಳಕನ್ನು ನೀಡುತ್ತಾಳೆ. ಅಸುರರ ಪಾಲಿಗೆ ದುಃಸ್ವಪ್ನವಾಗಿ ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತೃ ಸ್ವರೂಪಿಣಿಯಾಗಿ ಕಾಣಿಸುತ್ತಾಳೆ. ದೇವಿಯು ದುಷ್ಟರನ್ನು ಶಿಕ್ಷಿಸಿ ಶಿಷ್ಟರಿಗೆ ಶುಭಫಲ ನೀಡುವ ಕಾರಣ ಈಕೆಗೆ ಶುಭಂಕರಿ ಎಂದು ಕರೆಯುತ್ತಾರೆ. ಮೃತ್ಯು ಭಯದಿಂದ ನರಳುವವರು, ಅನಾರೋಗ್ಯ ಪೀಡಿತರು ಈಕೆಯನ್ನು ಭಕ್ತಿಯಿಂದ ಪ್ರಾರ್ಥಿಸಿದರೆ ಭಯ ಹಾಗೂ ರೋಗಗಳನ್ನು ನಾಶಪಡಿಸಿ, ಅಕಾಲಿಕ ಮರಣದಿಂದ ರಕ್ಷಿಸುತ್ತಾಳೆ ಎನ್ನುವ ನಂಬಿಕೆ ಇದೆ. ಕಾಳರಾತ್ರಿಯನ್ನು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.ನವರಾತ್ರಿಯ ಏಳನೇ ದಿನದ ಅವತಾರ ಕಾಳರಾತ್ರಿ ದೇವಿ ತನ್ನನ್ನು ಪೂಜಿಸುವ ಸರ್ವರಿಗೂ ಶುಭ ಫಲವನ್ನು ನೀಡಲಿ.


ಲೋಕಾ ಸಮಸ್ತಾ ಸುಖಿನೋ ಭವಂತು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page