
ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ: ಹಣ ವಾಪಸ್ ನೀಡದಿದ್ದರೆ ಅಯೋಧ್ಯೆಯಲ್ಲಿ ಕೇಸ್ – ದಿಗ್ವಿಜಯ್ ಸಿಂಗ್
ನವದೆಹಲಿ: ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ತಾವು ನೀಡಿದ ದೇಣಿಗೆಯನ್ನು ಹಿಂತಿರುಗಿಸದಿದ್ದರೆ ಅಯೋಧ್ಯೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭೋಪಾಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿರುವುದರಿಂದ ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಅದನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಮರು ಠೇವಣಿ ಇಡುವುದಾಗಿ ತಿಳಿಸಿದರು. “ಪೊಲೀಸರ ಮೇಲೆ ನನಗೆ ನಂಬಿಕೆ ಇಲ್ಲ. ಅವರು ಬಿಜೆಪಿ ಪ್ರಭಾವದಲ್ಲಿರುವುದರಿಂದ ನೇರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ” ಎಂದರು.
ರಾಮ ಮಂದಿರಕ್ಕಾಗಿ ಎರಡು ಬಾರಿ ನಿಧಿ ಸಂಗ್ರಹ ನಡೆದಿತ್ತು. ಎಲ್.ಕೆ. ಅಡ್ವಾಣಿ ಅವರ ರಥಯಾತ್ರೆ ವೇಳೆ ಮೊದಲ ಬಾರಿ ದೇಣಿಗೆ ನೀಡಿದ್ದರೂ ಅದರ ಲೆಕ್ಕ ಸಿಕ್ಕಿಲ್ಲ ಎಂದು ಆರೋಪಿಸಿದ ಅವರು, ನಂತರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ವಿಎಚ್‌ಪಿ ನಡೆಸಿದ ನಿಧಿ ಸಂಗ್ರಹಕ್ಕೆ ದೇಣಿಗೆ ನೀಡದೆ, ನೇರವಾಗಿ ಟ್ರಸ್ಟ್‌ಗೆ ಹಣ ನೀಡಿದ್ದೇನೆ ಎಂದು ಹೇಳಿದರು.
ಅಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ₹1 ಲಕ್ಷ ದೇಣಿಗೆ ನೀಡಿದ್ದರಿಂದ ತಾವು ₹1.11 ಲಕ್ಷ ನೀಡಿದ್ದಾಗಿ ತಿಳಿಸಿದರು. ಈ ಹಣವನ್ನು ಟ್ರಸ್ಟ್‌ನಲ್ಲಿ ಠೇವಣಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ರಶೀದಿಯನ್ನೂ ಪಡೆದಿದ್ದೇವೆ ಎಂದು ಹೇಳಿದರು. ರಾಮನ ಮೇಲಿನ ಭಕ್ತಿಯಿಂದ ದೇಣಿಗೆ ನೀಡಿದ್ದರೂ ಈಗ ಕೇಳಿಬರುತ್ತಿರುವ ಆರೋಪಗಳು ಆತಂಕಕಾರಿ ಎಂದು ಅಭಿಪ್ರಾಯಪಟ್ಟರು.
ಟ್ರಸ್ಟ್ ಆಡಳಿತದಲ್ಲಿ ಹಣಕಾಸಿನ ಅಕ್ರಮಗಳು ನಡೆದಿರುವ ಆರೋಪಗಳು ಗಂಭೀರವಾಗಿವೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು. ದೈನಂದಿನ ದೇಣಿಗೆಯ ಒಂದು ಭಾಗ ನಾಪತ್ತೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಭಕ್ತರ ನಂಬಿಕೆಗೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದರು. ತಮ್ಮ ದೇಣಿಗೆಯನ್ನು ಹಿಂತಿರುಗಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.








































