28.6 C
Udupi
Saturday, April 25, 2026
spot_img
spot_img
HomeBlogನವೋಲ್ಲಾಸ ದಿನ -1(ಶೈಲ ಪುತ್ರಿ ಅವತಾರ)

ನವೋಲ್ಲಾಸ ದಿನ -1(ಶೈಲ ಪುತ್ರಿ ಅವತಾರ)

ಹಬ್ಬದ ಇತಿಹಾಸ, ಪೂಜಾ ವಿಧಾನಗಳು

ಪ್ರಜ್ವಲಾ ಶೆಣೈ, ಕಾರ್ಕಳ


ಪೂಜೆ, ಉಪಾಸನೆ,ಆರಾಧನೆಗಳ ಮೂಲಕ ಇಷ್ಟಾರ್ಥ ಪ್ರಾಪ್ತಿಗಾಗಿ ಶ್ರದ್ಧಾ ಭಕ್ತಿಯಿಂದ ತಾಯಿ ಚಾಮುಂಡೇಶ್ವರಿಯನ್ನು ಆರಾಧಿಸುವ ವಿಶಿಷ್ಟವಾದ ಹಬ್ಬವೇ ನವರಾತ್ರಿ.ಒಂಭತ್ತು ದಿನಗಳ ಈ ಹಬ್ಬವು ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುತ್ತದೆ.ಶಕ್ತಿಯ ಆರಾಧನೆಯೇ ಈ ಹಬ್ಬದ ವೈಶಿಷ್ಟ್ಯ.ಶಕ್ತಿ ಸ್ವರೂಪಿಣಿ ಯಾದ ದುರ್ಗೆಯ ವಿಜಯವನ್ನು ಈ ಹಬ್ಬವು ಸೂಚಿಸುತ್ತದೆ.ಕರ್ನಾಟಕದಲ್ಲಿ ಇದನ್ನು ದಸರಾ ಎಂದೂ, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜಾ ಎಂದೂ ಕರೆಯುವರು.


ನವರಾತ್ರಿ ಹಬ್ಬದ ಇತಿಹಾಸ
ನವರಾತ್ರಿ ಆಚರಣೆಯು ಹೇಗೆ ಆರಂಭವಾಯಿತು ಎನ್ನುವುದಕ್ಕೆ ಪುರಾಣಗಳಲ್ಲಿ ಉಲ್ಲೇಖವಿದೆ.ರಾಮನಿಂದ ರಾವಣನ ವಧೆಯಾಗ ಬೇಕೆಂದು ನಾರದರು ರಾಮನಿಗೆ ಶರನ್ನವರಾತ್ರಿ ವ್ರತವನ್ನು ಆಚರಿಸಲು ಹೇಳಿದರು.ನಾರದರ ಮಾತಿನಂತೆ ಈ ವ್ರತವನ್ನು ಪೂರ್ಣ ಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು.ಅಂದಿನಿಂದ ನವರಾತ್ರಿ ಆಚರಣೆ ಆರಂಭ ವಾಗಿದೆ ಎಂದು
ಹೇಳಲಾಗುತ್ತದೆ. ಜಗತ್ತಿನಲ್ಲಿ ಯಾವಾಗ ತಾಮಸಿಕ,ರಾಕ್ಷಸ ಮತ್ತು ಕ್ರೂರ ಗುಣಗಳು ಉದ್ಭವಿಸುತ್ತವೆಯೋ ಆಗ ಸಜ್ಜನರ ರಕ್ಷಣೆಗಾಗಿ ದೇವಿ ಅಸುರರ ಸಂಹಾರಕ್ಕಾಗಿ ಜನ್ಮ ತಾಳುತ್ತಾಳೆ.ದೇವಿಯು ಮಹಿಷಾಸುರನೆಂಬ ರಾಕ್ಷಸನನ್ನು ಪಾಡ್ಯದಿಂದ ನವಮಿಯವರೆಗೆ ಒಂಭತ್ತು ಅವತಾರಗಳನ್ನು ತಾಳಿ ಸಂಹರಿಸುತ್ತಾಳೆ.ಅಂದಿನಿಂದ ದೇವಿಗೆ ಮಹಿಷಾಸುರ ಮರ್ಧಿನಿ ಎನ್ನುವ ಹೆಸರು ಬಂತು ಎನ್ನುವ ಪ್ರತೀತಿ ಇದೆ.


ಶೈಲ ಪುತ್ರಿ ಅವತಾರ
ನವದುರ್ಗೆಯರಲ್ಲಿ ಅಗ್ರ ಸ್ಥಾನ ಶೈಲ ಪುತ್ರಿಗೆ.ದುರ್ಗಾ ದೇವಿಯ ಮೊದಲನೇ ರೂಪವಾದ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ.ಈಕೆ ಸಾಕ್ಷಾತ್ ಚಾಮುಂಡೇಶ್ವರಿಯ ಅವತಾರ. ವೃಷಭ / ಗೂಳಿಯ ಮೇಲೆ ಕುಳಿತ ಈಕೆಯನ್ನು ವೃಷರುಧವೆಂದು ಕರೆಯಲಾಗುತ್ತದೆ. ಶೈಲಪುತ್ರಿ ಸೌಮ್ಯ ಸ್ವಭಾವ ದವಳಾಗಿದ್ದು ಈ ದಿನ ಹಳದಿ ಬಣ್ಣದ ವಸ್ತ್ರವನ್ನು ಧರಿಸುತ್ತಾಳೆ. ಒಂದು ಕೈಯಲ್ಲಿ ತ್ರಿಶೂಲ ಹಾಗೂ ಇನ್ನೊಂದು ಕೈಯಲ್ಲಿ ಕಮಲ ಹಿಡಿದಿರುತ್ತಾಳೆ .ಆಕೆಯ ಹಣೆಯಲ್ಲಿ ಅರ್ಧ ಚಂದ್ರಾಕೃತಿಯ ತಿಲಕವಿದೆ. ಈಕೆಗೆ ಮಲ್ಲಿಗೆ ಹೂವನ್ನು ಸಮರ್ಪಿಸುವರು.ಅರಿಶಿನ ವಸ್ತ್ರದಲ್ಲಿ ಇರುವ ಈಕೆ ಶಾಂತಿದಾಯಿನಿ.
ಈಕೆಯನ್ನು ಶೈಲ ಪುತ್ರಿ ಎಂದು ಕರೆಯಲು ಒಂದು ವಿಶೇಷ ವಾದ ಕಾರಣವಿದೆ. ಈ ಹಿಂದೆ ದೇವಿಯು ಪ್ರಜಾಪತಿ ದಕ್ಷ ರಾಜನ ಪುತ್ರಿ ದಾಕ್ಷಾಯಿಣಿಯಾಗಿ ಜನಿಸಿದಳು.ದಕ್ಷರಾಜ ತನ್ನ 27ಪುತ್ರಿಯರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದ. ಆದರೆ ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ಸ್ಮಶಾನವಾಸಿಯಾದ ಶಿವನನ್ನು ಕಂಡರೆ ದಕ್ಷನಿಗೆ ಆಗುತ್ತಿರಲಿಲ್ಲ. ತನ್ನ ಮಗಳು ಶಿವನನ್ನು ವರಿಸಿದ್ದು ದಕ್ಷರಾಜನಿಗೆ ಅವಮಾನವಾದಂತಿತ್ತು. ಶಿವನಿಗೆ ಅವಮಾನ ಮಾಡಲೆಂದೇ ದಕ್ಷರಾಜ ಒಂದು ಯಜ್ಞವನ್ನು ಮಾಡಿಸಿದ. ಅದರಲ್ಲಿ ತನ್ನ ಎಲ್ಲಾ ಹೆಣ್ಣು ಮಕ್ಕಳನ್ನು ಕರೆದರೂ ದಾಕ್ಷಾಯಿಣಿಯನ್ನು ಆಹ್ವಾನಿಸಲಿಲ್ಲ.ಆದರೂ ತವರಿನ ವ್ಯಾಮೋಹದಿಂದ ಈಕೆ ತವರಿಗೆ ತೆರಳಿದಳು.ದಕ್ಷ ರಾಜ ಶಿವನಿಗೆ ಆಹ್ವಾನಿಸದೇ ಅವಮಾನಿಸಿದ್ದನ್ನು ಕಂಡು ಸ್ವಾಭಿಮಾನಕ್ಕೆ ದಕ್ಕೆಯಾಗಿ ಅವಮಾನ
ಸಹಿಸದೆ ತಂದೆಯವಿರುದ್ಧವೇ ಸಿಡಿದೆದ್ದು
ಅಗ್ನಿಕುಂಡಕ್ಕೆ ಹಾರಿ ಬೆಂಕಿಗೆ ಆಹುತಿಯಾದದಳು.ಮುಂದೆ ಪುನರ್ಜನ್ಮ ಪಡೆದುಕೊಂಡು ಪರ್ವತ ರಾಜನ ಪುತ್ರಿ ಪಾರ್ವತಿಯಾಗಿ ಜನಿಸಿದಳು. ಪಾರ್ವತಿಯನ್ನು ಶೈಲಪುತ್ರಿ ಎಂದೂ ಕರೆಯುವರು. ಈಕೆಯನ್ನು ಶೈಲ ಪುತ್ರಿ ಎಂದು ಕರೆಯಲು ಪ್ರಮುಖ ಕಾರಣವಿದೆ. ಶೈಲ ಎಂದರೆ ಪರ್ವತ ಪುತ್ರಿ ಎಂದರೆ ಮಗಳು. ಪರ್ವತರಾಜನ ಮಗಳಾಗಿರುವುದರಿಂದ ಶೈಲ ಪುತ್ರಿ ಎಂದು ಹೆಸರು ಬಂದಿತು.ಈಕೆ ಶಿವನನ್ನು ವರಿಸಲು 16ವರ್ಷ ಕಠಿಣ ತಪಸ್ಸು ಗೈದಳೆಂದು ಪ್ರತೀತಿ ಇದೆ.
ಶಿವ ಈ ಕಾರಣದಿಂದ ಪಾರ್ವತಿಯನ್ನು ತವರಿಗೆ ಹತ್ತು ದಿನ ಮಾತ್ರ ಹೋಗಲು ಅನುಮತಿ ನೀಡುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.ಹೀಗಾಗಿ ದಸರಾ ಸಂದರ್ಭದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಹ್ವಾನಿಸಿ ಗೌರವಿಸುವ ಸಂಪ್ರದಾಯವಿದೆ.


ಪೂಜಾವಿಧಿ ವಿಧಾನಗಳು
ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನದ ಮೂಲಕ ಅಂದರೆ ಕಳಶವನ್ನು ಪ್ರತಿಷ್ಟಾಪಿಸಿ ನವರಾತ್ರಿಗೆ ಚಾಲನೆ ನೀಡಲಾಗುತ್ತದೆ.
ದೇವಿಯನ್ನು ಪೂಜಿಸುವಾಗ
ಸರ್ವ ಬಾಧ ವಿನಿರ್ಮುಕ್ತೋ
ಧನ ಧಾನ್ಯೇ ಸುತಾನ್ವಿತಃ
ಮನುಷ್ಯೋ ಮತ್ ಪ್ರಸಾದೇತ್
ಭವಿಷ್ಯತಿ ನ ಸಂಶಯಃ
ಎನ್ನುವ ಮಂತ್ರದೊಂದಿಗೆ ಪೂಜಿಸಲಾಗುತ್ತದೆ.
ದೀಪ ಧೂಪಾರಾಧನೆಯಿಂದ ದೇವಿಯನ್ನು ಪ್ರಸನ್ನ ಗೊಳಿಸಲಾಗುತ್ತದೆ. ಷೋಡಶೋಪಚಾರದಿಂದ ದೇವಿಯನ್ನು ಪೂಜಿಸಿ ಸಂಪನ್ನ ಗೊಳಿಸ
ಲಾಗುತ್ತದೆ.ಸಕ್ಕರೆ,ತುಪ್ಪದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಿ ದೇವಿಯನ್ನು ಆರಾಧಿಸಲಾಗುತ್ತದೆ. ಹೀಗೆ ಮೊದಲನೇ ದಿನದ ಆಚರಣೆ ಮುಕ್ತಾಯವಾಗುತ್ತದೆ.


spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page