ಶಿಕ್ಷಕರ ಸೇವೆ ಎಂದಿಗೂ ನಿವೃತ್ತಿಯಾಗುವುದಿಲ್ಲ, ಅವರು ಬೋಧಿಸಿದ ಜ್ಞಾನ, ಬೆಳೆಸಿದ ಮೌಲ್ಯಗಳು ಮತ್ತು ರೂಪಿಸಿದ ವ್ಯಕ್ತಿತ್ವಗಳು ಸದಾ ಜೀವಂತವಾಗಿರುತ್ತವೆ. ಈ ಭಾವನೆಗೆ ಸಾಕ್ಷಿಯಾಗಿ ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯಲ್ಲಿ ಹಿರಿಯ ಶಿಕ್ಷಕರಾದ ನವೀನ್ ಕುಮಾರ್ ಅವರ ನಿವೃತ್ತಿ ಸನ್ಮಾನ ಸಮಾರಂಭವನ್ನು ದಿನಾಂಕ 30-06-2026 ರಂದು ಶಾಲಾ ಸಭಾಂಗಣದಲ್ಲಿ ಅರ್ಥಪೂರ್ಣ ಹಾಗೂ ಭಾವಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಷಾ ಪಡಿವಾಳ್ ಹೆಚ್ , ಇವರು ನಿವೃತ್ತ ಶಿಕ್ಷಕರ ದೀರ್ಘಕಾಲದ ಸೇವೆ, ಕರ್ತವ್ಯನಿಷ್ಠೆ, ಸಮಯಪಾಲನೆ, ವಿದ್ಯಾರ್ಥಿಗಳ ಮೇಲಿನ ಕಾಳಜಿ ಹಾಗೂ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದರು. ಶಾಲಾ ಸಂಚಾಲಕರಾದ ಶ್ರೀ ಅನಂತ ರಾಜ್ ಪೂವಣಿಯವರು ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದು, ನಿವೃತ್ತರಾಗುತ್ತಿರುವ ಶಿಕ್ಷಕರಿಗೆ ಸನ್ಮಾನ, ಸ್ಮರಣಿಕೆ ಹಾಗೂ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಹಾಡು ಹಾಗೂ ಅಭಿನಂದನಾ ಭಾಷಣಗಳು ನಡೆದವು.
ಬಳಿಕ ನಿವೃತ್ತ ಶಿಕ್ಷಕರು ತಮ್ಮ ಸೇವಾ ಜೀವನದ ಅನುಭವಗಳನ್ನು ಹಂಚಿಕೊಂಡು, ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶ್ರೀಮತಿ ಜ್ಯೋತಿ, ಪದವಿಪೂರ್ವ ಕಾಲೇಜಿ ಪ್ರಾಶುಂಪಾಲರು,ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು, ಹಳೆ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಅವರ ಸುಖಮಯ ಆರೋಗ್ಯಕರ ಹಾಗೂ ಸಂತೋಷದ ನಿವೃತ್ತಿ ಜೀವನಕ್ಕಾಗಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸಹ ಶಿಕ್ಷಕ ಯೋಗರಾಜ್ ಜೈನ್ ಹಾಗೂ ಸಹ ಶಿಕ್ಷಕಿ ಶ್ರೀಮತಿ ಸಂಧ್ಯಾ ಕುಡ್ವ ನಡೆಸಿಕೊಟ್ಟರು ಸಹ ಶಿಕ್ಷಕಿ ಶ್ರೀಮತಿ ಅಮೃತ ಧನ್ಯವಾದವನ್ನಿತ್ತರು.