7 ನಿಮಿಷಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ
ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ಹೊಸ ಆಶಾಕಿರಣ

ನವದೆಹಲಿ: ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಭಾರತದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೇವಲ 7 ನಿಮಿಷಗಳಲ್ಲಿ ನೀಡಬಹುದಾದ ಹೊಸ ಇಮ್ಯುನೊಥೆರಪಿ ಇಂಜೆಕ್ಷನ್ ಪರಿಚಯಿಸಲಾಗಿದೆ. ‘ಟೆಸೆಂಟ್ರಿಕ್’ (Tecentriq) ಹೆಸರಿನ ಈ ಔಷಧವನ್ನು ರೋಚ್ ಫಾರ್ಮಾ ಇಂಡಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇಲ್ಲಿಯವರೆಗೆ ಕ್ಯಾನ್ಸರ್ ರೋಗಿಗಳು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ IV ಚಿಕಿತ್ಸೆ ಪಡೆಯಬೇಕಾಗುತ್ತಿತ್ತು. ಆದರೆ ಹೊಸ ‘ಸಬ್ಕ್ಯುಟೇನಿಯಸ್ ಇಂಜೆಕ್ಷನ್’ ಅನ್ನು ಚರ್ಮದ ಅಡಿಯಲ್ಲಿ ಕೆಲವೇ ನಿಮಿಷಗಳಲ್ಲಿ ನೀಡಬಹುದಾಗಿದೆ. ಇದರಿಂದ ರೋಗಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಔಷಧದಲ್ಲಿ ಬಳಸಿರುವ ಅಟೆಜೋಲಿಜುಮಾಬ್ ಎಂಬ ಅಂಶವು ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ದೇಹದ ರೋಗನಿರೋಧಕ ಶಕ್ತಿಗೆ ನೆರವಾಗುತ್ತದೆ. ಇದರಿಂದ ಕ್ಯಾನ್ಸರ್ ಕೋಶಗಳ ವಿರುದ್ಧ ದೇಹವೇ ಹೋರಾಡಲು ಸಾಧ್ಯವಾಗುತ್ತದೆ. ಕೀಮೋಥೆರಪಿಗೆ ಹೋಲಿಸಿದರೆ ಕಡಿಮೆ ಅಡ್ಡಪರಿಣಾಮಗಳಿರುವುದಾಗಿ ತಜ್ಞರು ತಿಳಿಸಿದ್ದಾರೆ.
PD-L1 ಪ್ರೋಟೀನ್ ಹೆಚ್ಚಿರುವ ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಈ ಚಿಕಿತ್ಸೆ ಪರಿಣಾಮಕಾರಿ ಎಂದು ಹೇಳಲಾಗಿದೆ. ವೈದ್ಯರ ಪರೀಕ್ಷೆಯ ಬಳಿಕ ಅರ್ಹ ರೋಗಿಗಳಿಗೆ ಮಾತ್ರ ಈ ಇಂಜೆಕ್ಷನ್ ನೀಡಲಾಗುತ್ತದೆ.
ಪ್ರತಿ ಡೋಸ್‌ಗೆ ಸುಮಾರು 3.7 ಲಕ್ಷ ರೂ. ವೆಚ್ಚವಾಗಲಿದ್ದು, ಸಂಪೂರ್ಣ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ. ಇದರಿಂದ ರೋಗಿಗಳ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚುವ ಆತಂಕ ಎದುರಾಗಿದೆ.
ರೋಗಿಗಳಿಗೆ ನೆರವಾಗಲು ರೋಚ್ ಸಂಸ್ಥೆ “ಬ್ಲೂ ಟ್ರೀ” ಸಹಾಯ ಯೋಜನೆ ಆರಂಭಿಸಿದ್ದು, CGHS ಯೋಜನೆಯಡಿ ಹಣ ಮರುಪಾವತಿ ಸೌಲಭ್ಯವೂ ಲಭ್ಯವಿದೆ. ತಜ್ಞರ ಪ್ರಕಾರ, ಈ ಹೊಸ ಚಿಕಿತ್ಸೆ ಕ್ಯಾನ್ಸರ್ ರೋಗಿಗಳ ಜೀವನಮಟ್ಟ ಸುಧಾರಿಸಲು ನೆರವಾಗಲಿದೆ ಎಂದು ತಿಳಿದು ಬಂದಿದೆ.

























