24.2 C
Udupi
Monday, October 19, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 764

ಭರತೇಶ ಶೆಟ್ಟಿ, ಎಕ್ಕಾರು

ವಾಲುತ್ತಾ ಕುಸಿದು ಬೀಳುತ್ತಿರುವಾಗ ಸನಿಹದಲ್ಲಿ ನಿಂತಿದ್ದ ಗಾಂಧಾರಿಗೆ ಹೇಗೆ ತಿಳಿಯಿತೊ! ಕಣ್ಣಿಗೆ ಕಾಣಿಸದಿದ್ದರೂ, ಆಯ ತಪ್ಪಿದ ಪತಿಯನ್ನು ತನಗಾಗುವಷ್ಟು ಆಧಾರವಾಗಿ ಹಿಡಿದಳು. ಅಷ್ಟೊತ್ತಿಗಾಗಲೆ ನೆಲನೋಟಕನಾಗಿದ್ದ ಧರ್ಮರಾಯನು ಎಚ್ಚೆತ್ತು ಮತ್ತೊಂದೆಡೆಯಲ್ಲಿ ಧೃತರಾಷ್ಟ್ರನನ್ನು ಹಿಡಿದು ಬೀಳದಂತೆ ಸಹಕರಿಸಿದನು. ದೊಡ್ಡಪ್ಪನನ್ನು ಮಲಗಿಸಿ ಚಕ್ರವರ್ತಿಯಾದ ತಾನು ಓಡಿ ಹೋಗಿ ನೀರು ತಂದು ಚಿಮುಕಿಸಿ, ಒದ್ದೆ ಕೈಗಳಿಂದ ಮುಖವನ್ನೊರೆಸಿದನು. ಬೆವರಿದ್ದ ಎದೆಯನ್ನೂ ನೀರು ಪೂಸಿ ತಂಪಾಗಿಸಿ ಬೀಸಣಿಗೆಯಿಂದ ಗಾಳಿ ಬೀಸಿದನು. ಹೀಗೆ ಉಪಚರಿಸುವಾಗ ಚೈತನ್ಯ ಪಡೆದ ಧೃತರಾಷ್ಟ್ರ ನಿಧಾನವಾಗಿ ಕಣ್ತೆರೆದನು.

ಧರ್ಮರಾಯನು “ದೊಡ್ಡಪ್ಪಾ!” ಎಂದು ಕರೆದಾಗ ಪಿಸುದನಿಯಲ್ಲಿ ಹೂಂಗುಟ್ಟಿದ ದನಿ ಕೇಳಿ ಗಾಂಧಾರಿಗೂ ತುಸು ಸಮಾಧಾನವಾಯಿತು. ಧರ್ಮರಾಯನು “ದೊಡ್ಡಪ್ಪಾ! ಏನಿದು ನಿಮ್ಮ ಅವಸ್ಥೆ? ಬಟ್ಟೆ ಸರಿಸಿ ನಿಮ್ಮ ಎದೆ ನೋಡಿದರೆ ಪಕ್ಕೆಲುಬುಗಳು ಕೈಗೆ ತಾಕುತ್ತಿವೆ. ಶರೀರ ಕೃಶವಾಗಿ ನಿತ್ರಾಣಗೊಂಡಿದೆ. ಹಾಗಾಗಿ ನಿಮಗೀಗ ತಲೆ ತಿರುಗಿದಂತಾಗಿ ಕುಸಿದು ಬಿದ್ದದ್ದು. ಏನಿದ್ದರೂ ಮತ್ತೆ ಮಾತನಾಡೋಣ. ಮೊದಲು ಏನಾದರು ಹೊಟ್ಟೆಗೆ ಆಹಾರ ಸ್ವೀಕರಿಸಿ. ಪೇಯವೋ, ಖಾದ್ಯವೋ, ಭೋಜ್ಯವೋ, ಲೇಹ್ಯವೋ, ಫಲವಸ್ತುಗಳೋ ನಿಮಗೇನು ಬೇಕು ಹೇಳಿ. ನೀವು ಬಯಸುವ ಆಹಾರವನ್ನು ನಾನು ಕೈಯಾರೆ ತಿನಿಸುವೆ.” ಎಂದು ಕೈ ಕಾಲುಗಳನ್ನು ಒತ್ತುತ್ತಾ ಕೇಳತೊಡಗಿದನು.

ಆಗ ಧೃತರಾಷ್ಟ್ರ “ಧರ್ಮರಾಯಾ! ನನಗೀಗ ಯಾವ ರೀತಿಯ ಆಹಾರವೂ ಸುಖ ನೀಡದು. ಹಸಿವಾಗುತ್ತಿರುವುದು ಶರೀರಕ್ಕಲ್ಲ ಬದಲಾಗಿ ಮನಸ್ಸಿಗೆ. ಈಗ ನನಗೆ ಅತ್ಯಗತ್ಯವಾಗಿ ಬೇಕಾಗಿರುವುದು ವಾನಪ್ರಸ್ಥಕ್ಕೆ ಹೋಗಲು ಅನುಮತಿ. ಅದು ಸಿಕ್ಕಿದರೆ ಮನಸ್ಸು ಉಲ್ಲಸಿತವಾಗಿ ನಂತರ ಊಟ ಮಾಡಬಹುದು” ಎಂದುತ್ತರಿಸಿದನು. ಧರ್ಮರಾಯನು ತನ್ನ ದೊಡ್ಡಪ್ಪನನ್ನು ಹಠ ಮಾಡುವ ಮಗುವನ್ನು ಸಂತೈಸುವಂತೆ “ದೊಡ್ಡಪ್ಪಾ ಈಗ ಮೊದಲು ಏನಾದರು ಆಹಾರ ಸ್ವೀಕರಿಸಿ, ಆ ಬಳಿಕ ನಾವು ಕುಳಿತು ಸಮಾಲೋಚನೆ ಮಾಡೋಣ” ಎಂದು ಹೇಳಿದನು. ಧೃತರಾಷ್ಟ್ರನು ಮಾತ್ರ ಧೃಡ ಸಂಕಲ್ಪ ಮಾಡಿದವನಂತೆ “ನೀನು ವಾನಪ್ರಸ್ಥಕ್ಕೆ ತೆರಳಲು ಒಪ್ಪಿಗೆ ಕೊಟ್ಟರೆ ಮಾತ್ರ ಊಟ ಮಾಡುತ್ತೇನೆ” ಎಂದು ತುಸು ನಿಷ್ಠುರವಾಗಿ ನುಡಿದನು. ನಿರ್ವಾಹ ಇಲ್ಲದೆ ಧರ್ಮರಾಯ “ಆಯಿತು ದೊಡ್ಡಪ್ಪಾ! ನಾನು ಎಂದೂ ನಿಮ್ಮ ಆಸೆಗೆ ಅಡ್ಡಿ ಪಡಿಸುವ ಉದ್ದೇಶ ಹೊಂದಿದವನಲ್ಲ. ನಿಮ್ಮಿಷ್ಟದಂತೆ ಆಗಲಿ. ಆದರೆ ಈಗ ಮೊದಲು ಊಟ ಮಾಡಬೇಕು”. ಎಂದು ಹೇಳುತ್ತಾ, ಧೃತರಾಷ್ಟ್ರ ಬಯಸಿದ ಆಹಾರವನ್ನು ತರಿಸಿ ತಾನು ಬದಿಯಲ್ಲಿ ಕುಳಿತು ಊಟ ಮಾಡಿಸಿದನು.

ನಂತರ ಕೆಲದಿನಗಳ ಕಾಲ ಧರ್ಮರಾಯ ಹೊತ್ತು ಹೊತ್ತಿಗೆ ಬಂದು ತಾನೇ ನಿಂತು ಹೊಟ್ಟೆ ತುಂಬಾ ತಿನಿಸತೊಡಗಿದನು. ಪರಿಣಾಮವಾಗಿ ಧೃತರಾಷ್ಟ್ರನ ಶರೀರಕ್ಕೂ ಸ್ವಲ್ಪ ಚೈತನ್ಯ ತುಂಬಿತು. ಹೀಗಿರಲು ಧರ್ಮರಾಯನನ್ನು ಕರೆದು “ಮಗೂ ನಮಗೆ ತಪೋವನ ಸೇರಿ ವಾನಪ್ರಸ್ಥ ಜೀವನ ನಡೆಸುವ ಸಿದ್ಧತೆ ಮಾಡು” ಎಂದು ಕೇಳಿಕೊಂಡನು. ಧರ್ಮರಾಯ ಮೌನವಾಗಿದ್ದು ದುಃಖಕ್ಕೊಳಗಾದಾಗ “ವತ್ಸಾ! ನಿನ್ನ ಜೊತೆ ನಮಗೆ ಯಾವ ತೊಂದರೆಯೂ ಆಗಲಿಲ್ಲ. ಬದಲಾಗಿ ಅತ್ಯುತ್ಕೃಷ್ಟವಾದ ಮಾನ್ಯತೆ, ನೆಮ್ಮದಿ, ಅಧಿಕಾರ, ಸೌಕರ್ಯಗಳೆಲ್ಲವನ್ನೂ ನೀನು ಒದಗಿಸಿರುವೆ. ಆ ಕುರಿತಾಗಿ ನಿನ್ನ ಬಗ್ಗೆ ಯಾವ ಆರೋಪವೂ ಇಲ್ಲ. ಸತ್ಯವಾಗಿಯೂ ನಾವು ಹೆತ್ತ ಮಕ್ಕಳಿಗಿಂತ ಬಲು ಪ್ರೀತಿ, ಗೌರಾವಾದಾರಗಳಿಂದ ನೀವು ಸೇವೆ ಮಾಡಿದ್ದೀರಿ. ಧರ್ಮಾತ್ಮನಾದ ನಿನಗೆ ತಿಳಿದೇ ಇರುವ ಹಾಗೆ ನಮ್ಮ ಪೂರ್ವಿಕರು ಪರಮ ಧಾರ್ಮಿಕರಲ್ಲವೆ? ಕಾಲ ಕೂಡಿ ಬಂದಾಗ ಅವರೂ ತಪೋವನ ಸೇರಿದವರಾಗಿದ್ದಾರೆ. ಈಗ ನೀನೂ ಆ ವ್ಯವಸ್ಥೆ ನಮಗಾಗಿ ಮಾಡಿಸಬೇಕು. ಜೊತೆಗೆ ನಮ್ಮ ಪ್ರಜಾಪರಿವಾರದವರನ್ನು, ಪ್ರಮುಖರನ್ನು ಕರೆಸಬೇಕು. ನನಗೆ ಅವರೆಲ್ಲರಲ್ಲಿ ಮಾತನಾಡುವುದಿದೆ ಎಂದನು”.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page