
ನವದೆಹಲಿ: ಇರಾನ್ ಯುದ್ಧದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಮಂಗಳವಾರ ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳ ಘೋಷಿಸಿವೆ.
ಕಳೆದ ಮೇ 15ರಂದು ತೈಲ ಕಂಪನಿಗಳು ಇಂಧನ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿದ್ದವು. ಮೂರು ದಿನಗಳೊಳಗೆ ಮತ್ತೊಮ್ಮೆ ದರ ಏರಿಕೆಯಾಗಿರುವುದು ವಾಹನ ಸವಾರರಿಗೆ ಶಾಕ್ ನೀಡಿದೆ.
ದೆಹಲಿ ನಗರದಲ್ಲಿ ಪೆಟ್ರೋಲ್ ದರ 98.64 ರೂ.ಗೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 91.58 ರೂ. ತಲುಪಿದೆ. ಈ ಮೊದಲು ಶುಕ್ರವಾರ ನಡೆದ ದರ ಪರಿಷ್ಕರಣೆಯ ಬಳಿಕವೂ ಬೆಲೆ ಏರಿಕೆ ಮುಂದುವರಿದಿದೆ.
ಇರಾನ್ ಸಂಘರ್ಷದಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದೇ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಜಾಗತಿಕ ಬೆಲೆ ಬದಲಾವಣೆಗಳು ನೇರವಾಗಿ ದೇಶದ ಇಂಧನ ದರಗಳ ಮೇಲೆ ಪರಿಣಾಮ ಬೀರುತ್ತವೆ. ಕಳೆದ ಹಲವು ವಾರಗಳಿಂದ ನಷ್ಟದ ನಡುವೆಯೇ ಕಂಪನಿಗಳು ಹಳೆಯ ದರದಲ್ಲೇ ಮಾರಾಟ ಮುಂದುವರಿಸಿದ್ದವು ಎನ್ನಲಾಗಿದೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚುವ ಸಾಧ್ಯತೆ ಇದ್ದು, ತರಕಾರಿ, ಹಾಲು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಬಹುದೆಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.























