
ಮಂಗಳೂರು: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸಿನ್ ನೀಡಿದ ದೂರಿನ ಆಧಾರದಲ್ಲಿ ಮದನಿನಗರದ ಜುನೈದ್ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಳ್ಳಾಲದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕೊರಗಜ್ಜ ಸರ್ಕಲ್ ವಿಚಾರವಾಗಿ ಕೆಲ ಯುವಕರು ಖಾದರ್ ಅವರನ್ನು ಪ್ರಶ್ನಿಸಿ ಘೇರಾವ್ ಹಾಕಿ ವಾಗ್ವಾದ ನಡೆಸಿದ್ದರು.
ಕುತ್ತಾರಿನಲ್ಲಿ ನಿರ್ಮಾಣವಾಗುತ್ತಿರುವ ವೃತ್ತಕ್ಕೆ ಕೊರಗಜ್ಜ ಹೆಸರಿಡುವ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದೆ. ವೃತ್ತದ ಗಾತ್ರ ಹಾಗೂ ಸಂಚಾರ ಸಮಸ್ಯೆ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಕೊರಗಜ್ಜ ಹೆಸರಿನ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, “ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಎಲ್ಲ ಮಾತುಗಳಿಗೆ ಮಹತ್ವ ನೀಡಲು ಸಾಧ್ಯವಿಲ್ಲ. ಹೊರಗಿನಿಂದ ಬಂದ ಕೆಲ ಸಂಘಟನೆಗಳವರು ಈ ಗೊಂದಲ ಸೃಷ್ಟಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.






















