ಲಿಕ್ವಿಡ್ ಔಷಧ ಮಾರಾಟದ ಮೇಲೆ ಕೇಂದ್ರದ ಕಟ್ಟುನಿಟ್ಟಿನ ನಿಯಮ

ನವದೆಹಲಿ: ಔಷಧಗಳ ಗುಣಮಟ್ಟ ಹಾಗೂ ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಕೆಮ್ಮಿನ ಸಿರಪ್ ಸೇರಿದಂತೆ ಎಲ್ಲಾ ಲಿಕ್ವಿಡ್ ಔಷಧಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್ಗಳಲ್ಲಿ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಈ ನಿಯಮ ತಕ್ಷಣದಿಂದ ಜಾರಿಗೆ ಬಂದಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ 2026ರ 5ನೇ ತಿದ್ದುಪಡಿ ನಿಯಮದಡಿ, 1945ರ ಡ್ರಗ್ಸ್ ರೂಲ್ಸ್ನ ಷೆಡ್ಯೂಲ್ ಕೆಯಿಂದ ‘ಸಿರಪ್ಸ್’ ಪದವನ್ನು ತೆಗೆದುಹಾಕಲಾಗಿದೆ. ಇದರಿಂದ ಸಿರಪ್ ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಯಂತ್ರಣ ಇನ್ನಷ್ಟು ಕಠಿಣವಾಗಲಿದೆ.
ಇತ್ತೀಚಿನ ವರ್ಷಗಳಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವನೆಯಿಂದ ಹಲವು ದೇಶಗಳಲ್ಲಿ ಮಕ್ಕಳ ಸಾವು ಸಂಭವಿಸಿದ್ದ ಹಿನ್ನೆಲೆ, ಔಷಧಗಳ ಗುಣಮಟ್ಟ ಕಾಪಾಡಲು ಹಾಗೂ ನಕಲಿ ಉತ್ಪನ್ನಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಕ್ರಮ ಜಾರಿಗೆ ತಂದಿದೆ.
ಈ ನಿಯಮದಿಂದ ಸಿರಪ್ ತಯಾರಕರು ಮತ್ತು ಮಾರಾಟಗಾರರು ಕಟ್ಟುನಿಟ್ಟಿನ ಪರವಾನಿಗೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಉತ್ಪಾದನೆ ಮತ್ತು ಮಾರಾಟದ ಮಾಹಿತಿಯನ್ನು ಸರ್ಕಾರ ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು.

































