32.6 C
Udupi
Friday, April 24, 2026
spot_img
spot_img
HomeBlogಕಾರ್ಕಳ: ಫೆಬ್ರವರಿ 18 ರಿಂದ ಫೆಬ್ರವರಿ 28 ರವರೆಗೆ,ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ

ಕಾರ್ಕಳ: ಫೆಬ್ರವರಿ 18 ರಿಂದ ಫೆಬ್ರವರಿ 28 ರವರೆಗೆ,ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ

ಮಹಾಮಸ್ತಕಾಭಿಷೇಕಕ್ಕೆ ಇನ್ನೂ 305 ದಿನಗಳು ಬಾಕಿ, ಒಗ್ಗಟ್ಟಿನಿಂದ ಮಹೋತ್ಸವ ಯಶಸ್ವಿ: ಡಾ. ಎಂ ಎನ್.ರಾಜೇಂದ್ರ ಕುಮಾರ್

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕವು ಕಾರ್ಕಳದಲ್ಲಿ ಫೆಬ್ರವರಿ 18ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ‘ರಾಜಗುರು’, ‘ಧ್ಯಾನಯೋಗಿ’ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಅಧಿಕೃತವಾಗಿ ಘೋಷಿಸಿದರು. ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಮಹಾಮಸ್ತಕಾಭಿಷೇಕ ಕಾರ್ಯಾಲಯ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ದೇವರ ಸಾನ್ನಿಧ್ಯವನ್ನು ಸದಾ ಮನಸ್ಸಿನಲ್ಲಿ ನೆನೆಸಿಕೊಳ್ಳಬೇಕು, ಶಾಂತಿ ಮತ್ತು ಅಹಿಂಸೆಯೇ ಜೀವನದ ಮೂಲ ಮೌಲ್ಯಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಮಹಾಮಸ್ತಕಾಭಿಷೇಕಕ್ಕೆ ಇನ್ನೂ 305 ದಿನಗಳು ಬಾಕಿ ಇವೆ. ಈ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು. ಎಸ್‌ಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಮಹಿಳೆಯರ ಸಹಕಾರದಿಂದ ಬೆಳೆದಿರುವುದು ಒಂದು ಉದಾಹರಣೆ. ಸಮಾಜವು ಸಂಕಷ್ಟಗಳನ್ನು ಎದುರಿಸಿ ಬೆಳೆದಿದೆ. ಸರ್ಕಾರದಿಂದಲೂ ಎಲ್ಲಾ ರೀತಿಯ ಸೌಲಭ್ಯಗಳು ಮತ್ತು ಅನುದಾನಗಳು ಲಭ್ಯವಾಗುತ್ತಿದ್ದು, ಅವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಮಹಾಮಸ್ತಕಾಭಿಷೇಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಡಿ. ಹರ್ಷೇಂದ್ರ ಕುಮಾರ್ ಅವರು, ವೇಣೂರು, ಧರ್ಮಸ್ಥಳ ಹಾಗೂ ಕಾರ್ಕಳದ ಗೊಮಟೇಶ್ವರ ಮೂರ್ತಿಯ ಮಸ್ತಕಾಭಿಷೇಕವು 21ನೇ ಶತಮಾನದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ದೇಶ-ವಿದೇಶಗಳಿಂದ ಆಗಮಿಸುವ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ. ಸಭೆಗಳಲ್ಲಿ ಸಮಯಪಾಲನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಶಿಸ್ತು ಮುಖ್ಯ ಎಂದು ಸಲಹೆ ನೀಡಿದರು.

ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವಾ ಮಾತನಾಡಿ, ಇದು ಐತಿಹಾಸಿಕ ಕ್ಷಣವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮುದಾಯವು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದೆ. ಜಿಲ್ಲೆಯ ಅಭಿವೃದ್ಧಿಯಲ್ಲಿಯೂ ಜೈನ ಧರ್ಮದ ಪಾತ್ರ ಅಪಾರವಾಗಿದೆ. ಎಲ್ಲ ಧರ್ಮದವರೂ ಕೈಜೋಡಿಸಿ ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಹಾಮಸ್ತಕಾಭಿಷೇಕವನ್ನು ರಾಷ್ಟ್ರೀಯ ಹಬ್ಬದಂತೆ ಆಚರಿಸಬೇಕು. ಭಗವಾನ್ ಬಾಹುಬಲಿ ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ವ್ಯಕ್ತಿ. ಕೇಂದ್ರ ಸರ್ಕಾರದಿಂದ ಕಾರ್ಕಳಕ್ಕೆ ಅಗತ್ಯವಾದ ಸಹಕಾರವನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಜೈನ ಸಮುದಾಯವು ಶಾಂತಿಯ ಪ್ರತೀಕವಾಗಿದ್ದು, ಜಗತ್ತಿಗೆ ಉತ್ತಮ ಸಂದೇಶ ನೀಡಿದ ಸಮುದಾಯವಾಗಿದೆ ಎಂದು ಕೊಂಡಾಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲಾಡಳಿತವು ಈ ಮಹೋತ್ಸವಕ್ಕೆ ಸಂಪೂರ್ಣ ಸಹಕಾರ ನೀಡಲು ಸಿದ್ಧವಾಗಿದೆ. ರಾಜ್ಯ ಸರ್ಕಾರ ನೀಡಿರುವ ಅನುದಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಭೂಲೋಕದ ಸ್ವರ್ಗವಾಗಿದ್ದು, ತಮ್ಮ ಸಂಸ್ಕೃತಿ ಮತ್ತು ಪರಂಪರೆಯಿಂದ ದೇಶಕ್ಕೆ ಬೆಳಕು ಚೆಲ್ಲುತ್ತಿವೆ. ಈಗಾಗಲೇ 37 ಸಮಿತಿಗಳಲ್ಲಿ ಸುಮಾರು 600 ಮಂದಿ ತೊಡಗಿಸಿಕೊಂಡಿದ್ದು, ಈ ಮಹೋತ್ಸವದಿಂದ ಪ್ರವಾಸೋದ್ಯಮವೂ ಉತ್ತೇಜನ ಪಡೆಯಲಿದೆ ಎಂದರು.

ಅಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಅಳ್ವಾ ಅವರು, ತಮ್ಮ ಜೀವನದಲ್ಲಿ ನಾಲ್ಕು ಬಾರಿ ಮಹಾಮಸ್ತಕಾಭಿಷೇಕವನ್ನು ನೋಡುವ ಅವಕಾಶ ಸಿಕ್ಕಿರುವುದು ಪುಣ್ಯಕರ ಎಂದು ಹೇಳಿ, ಡಾ. ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಈ ಬಾರಿ ಕೂಡ ಯಶಸ್ವಿಯಾಗಿ ನಡೆಯಲಿದೆ. ಅಳ್ವಾಸ್ ಸಂಸ್ಥೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಅಳದಂಗಡಿ ಪದ್ಮಪ್ರಸಾದ್ ಅಜಿಲ, , ಜೀವಂಧರ ಬಲ್ಲಾಳ್, ರತ್ನಾಕರ ರಾಜ್ ಅರಸರು, ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್, ಶಶಿಪ್ರಸಾದ್, ಗುಣಪಾಲ ಕಡಂಬ, ಸಿ.ಕೆ. ಬಳ್ಳಾಲ್, ಪ್ರವೀಣ್ ಕುಮಾರ್ ಇಂದ್ರ, ಶ್ರೀಧರ ಕಡಂಬ, ವೈ. ಸೂರಜ್ ಕುಮಾರ್, ಅನಂತರಾಜ ಪುವಾಣಿ, ಸಂಪತ್ ಸಾಮ್ರಾಜ್ಯ, ಸುದೀರ್ ಪಡಿವಾಳ್, ಜಿಪಂ ಸಿಇಒ ಪ್ರತಿಕ್ ಬಾಯಕ್, ಡಿವೈಎಸ್ಪಿ ವಿಜಯ ಪ್ರಸಾದ್, ದೇವಿಪ್ರಸಾದ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸರ್ವೇಶ್ ಜೈನ್ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮೋಹನ್ ಪಡಿವಾಳ್ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಮಹಾಮಸ್ತಕಾಭಿಷೇಕಕ್ಕಾಗಿ ರೂ. 3 ಲಕ್ಷ ದೇಣಿಗೆ ನೀಡುವ ಮೂಲಕ ಮಹೋತ್ಸವದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ಸಲ್ಲಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page