
ಬೀದರ್: ನಗರದ ಆದರ್ಶ ಕಾಲೋನಿಯಲ್ಲಿ ಆಗಸ್ಟ್ 27 ರಂದು ಆಸ್ತಿಗಾಗಿ ಹಣದ ವ್ಯಾಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು ತನ್ನ ಮಲಮಗಳನ್ನೇ 3ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
ಮಗು ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ನಂಬಿದ್ದು ಹೀಗಾಗಿ, ಮಗುವಿನ ತಂದೆ ಸಿದ್ಧಾಂತ ಆಗಸ್ಟ್ 28ರಂದು ಗಾಂಧಿ ಗಂಜ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದೂರು ನೀಡಿದ್ದರು. ಆದರೆ ಅಕ್ಕಪಕ್ಕದ ಮನೆಯವರ ಸಿಸಿಟಿವಿ ದೃಶ್ಯಗಳು ಲಭ್ಯವಾದ ಬಳಿಕ ಕ್ರೂರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಲತಾಯಿ ರಾಧಾಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ಬಾಲಕಿ ಶಾನವಿ (7) ತಾಯಿ ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು ನಂತರ, ಶಾನವಿ ತಂದೆ ಸಿದ್ಧಾಂತ ಅವರು 2023ರಲ್ಲಿ ರಾಧಾಳನ್ನು ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಅವಳಿ ಮಕ್ಕಳು ಜನಿಸಿದ್ದು ಇದರಿಂದ ಆಸ್ತಿ ಹಂಚಿಕೆಯಾಗಬಹುದೆಂಬ ಭಯದಿಂದ ರಾಧಾ, ಆಗಸ್ಟ್ 27 ರಂದು, ಆಟ ಆಡಿಸುವ ನೆಪದಲ್ಲಿ ಶಾನವಿಯನ್ನು ಮನೆಯ 3ನೇ ಮಹಡಿಗೆ ಕರೆದೊಯ್ದಿದ್ದು ಅಲ್ಲಿ, ಕುರ್ಚಿಯ ಮೇಲೆ ಅವಳನ್ನು ನಿಲ್ಲಿಸಿ, ನಂತರ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಾಳೆ. ಈ ಕೃತ್ಯದ ನಂತರ ಆಕೆ ಏನೂ ಆಗದಂತೆ ಮನೆಗೆ ಹಿಂತಿರುಗಿ ಮಲಗಿದ್ದಳು.
ಸೆಪ್ಟೆಂಬರ್ 12ರಂದು ಪಕ್ಕದ ಮನೆಯ ಮಾಲೀಕರು ತಮ್ಮ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಭಯಾನಕ ಸತ್ಯ ಬಯಲಾಗಿದೆ. ಸಿಸಿಟಿವಿಯಲ್ಲಿ ರಾಧಾ ಸಂಶಯಾಸ್ಪದ ರೀತಿಯಲ್ಲಿ ಶಾನವಿ ಜೊತೆ ಮಹಡಿಯ ಮೇಲೆ ಓಡಾಡುವುದು, ನಂತರ ಅವಳನ್ನು ತಳ್ಳಿ ಅವಸರದಲ್ಲಿ ಮನೆ ಒಳಗೆ ಹೋಗುವುದು ಸ್ಪಷ್ಟವಾಗಿ ಸೆರೆಯಾಗಿದೆ. ಈ ದೃಶ್ಯಗಳನ್ನು ನೋಡಿದ ನೆರೆಮನೆಯವರು ತಕ್ಷಣ ಸಿದ್ಧಾಂತ ಅವರ ವಾಟ್ಸಾಪ್ಗೆ ಈ ವಿಡಿಯೋವನ್ನು ಕಳುಹಿಸಿದ್ದಾರೆ.
ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ, ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ಸುರೇಶ್ ಅವರು ಮಲತಾಯಿ ರಾಧಾ ವಿರುದ್ಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಿದ್ದು ವಿಚಾರಣೆ ವೇಳೆ, ಆಸ್ತಿ ಇಬ್ಬಾಗ ಆಗುತ್ತೆ ಎಂಬ ಭಯದಿಂದ ಮಗುವನ್ನು ತಳ್ಳಿ ಕೊಲೆ ಮಾಡಿರುವುದಾಗಿ ರಾಧಾ ತಪ್ಪೊಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.













