ಅರುಣ್ ಯೋಗಿರಾಜ್ ಕೆತ್ತಿದ ವಿವೇಕಾನಂದರ ಮಾರ್ಬಲ್ ಮೂರ್ತಿ ಕಾಣಿಕೆ

ಮೈಸೂರು: ಆಗಸ್ಟ್ 1ರಂದು ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು ಈ ಹಿನ್ನೆಲೆಯಲ್ಲಿ ವಿಶೇಷ ಉಡುಗೊರೆಯೊಂದು ಸಿದ್ಧವಾಗಿದೆ. ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಯೆಟ್ನಾಂ ಮಾರ್ಬಲ್‌ನಲ್ಲಿ ಕೆತ್ತಿದ ಸ್ವಾಮಿ ವಿವೇಕಾನಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ನೀಡಲಾಗುತ್ತದೆ.
8.5 ಕೆ.ಜಿ. ತೂಕ ಮತ್ತು 1.5 ಅಡಿ ಎತ್ತರದ ಈ ಮೂರ್ತಿಯನ್ನು ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯನ್ನು ಆಧರಿಸಿ ಇದನ್ನು ರೂಪಿಸಲಾಗಿದ್ದು, ಪ್ರಧಾನಿ ಸುಲಭವಾಗಿ ಹಿಡಿದುಕೊಳ್ಳುವಂತೆ ತೂಕವನ್ನು 10 ಕೆ.ಜಿಗಿಂತ ಕಡಿಮೆ ಇರಿಸಲಾಗಿದೆ.
ಈ ಹಿಂದೆ ಕೂಡ ಪ್ರಧಾನಿ ಮೋದಿ ಅವರಿಗೆ ಹಲವು ಶಿಲ್ಪಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಅರುಣ್ ಯೋಗಿರಾಜ್ ತಿಳಿಸಿದ್ದು ಮತ್ತೊಮ್ಮೆ ಈ ಅವಕಾಶ ಕಲ್ಪಿಸಿದ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.






















































