24.9 C
Udupi
Saturday, March 22, 2025
spot_img
spot_img
HomeBlogಹುಡುಗರ ವಾಶ್ ರೂಮಿನಲ್ಲಿ ಹುಡುಗಿ…!

ಹುಡುಗರ ವಾಶ್ ರೂಮಿನಲ್ಲಿ ಹುಡುಗಿ…!

ಲಿಂಗ ಸಮಾನತೆ ಭಾಷಣಕಷ್ಟೇ ಸೀಮಿತವೇ…?

ಪ್ರಜ್ವಲಾ ಶೆಣೈ, ಕಾರ್ಕಳ

ನಮ್ಮ ಶಾಲೆಗೆ ಹೊಸದಾಗಿ ಒಂದನೇ ತರಗತಿಗೆ ಸೇರಿದ ಹೆಣ್ಣುಮಗುವೊಂದು ಮೂತ್ರ ವಿಸರ್ಜನೆಗೆಂದು ಗಂಡು ಮಕ್ಕಳ ಶೌಚಾಲಯಕ್ಕೆ ಹೋಗಿದ್ದು ಕಂಡು ಎಲ್ಲಾ ಮಕ್ಕಳು ಓಡಿ ಬಂದು “ಟೀಚರ್, ಟೀಚರ್, ವೈಷ್ಣವಿ ಹುಡುಗರ ಟಾಯ್ಲೆಟ್‌ಗೆ ಹೋಗಿದ್ದಾಳೆ” ಎಂದು ವರದಿ ಒಪ್ಪಿಸಿದರು. ಅದೇನೆಂದು ನೋಡುವ ಎನ್ನುವಷ್ಟರಲ್ಲಿ ಶೌಚಾಲಯದ ಸುತ್ತ ಒಂದಷ್ಟು ಮಂದಿ ವಿದ್ಯಾರ್ಥಿಗಳ ಗುಂಪು ನೆರೆದಿತ್ತು. ಅವರೆಲ್ಲರ ತಮಾಷೆಯ ನಗು ಕೇಕೆ ಇತ್ಯಾದಿ ಕೇಳಿ ಪುಟ್ಟ ಹುಡುಗಿ ಭಯ ಗಾಬರಿಯಿಂದ ಅಳಲಾರಂಭಿಸಿದಳು. ತಾನೇನೋ ಅಪರಾಧ ಮಾಡಿ ಬಿಟ್ಟೆ ಎನ್ನುವಂತೆ ಆಕೆಯ ಮನಸ್ಸು ಹೊಯ್ದಾಡಿತು. ಮನೆಗಳಲ್ಲಿ ಗಂಡು ಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಬೇರೆ ಶೌಚಾಲಯಗಳಿರುವುದಿಲ್ಲ. ತಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಸಾಮಾನ್ಯ ಶೌಚಾಲಯಗಳನ್ನು ಶಾಲೆಗಳಲ್ಲೂ ನಿರ್ಮಿಸಬಹುದಲ್ಲ ಎಂದು ಆ ಘಳಿಗೆಯಲ್ಲಿ ಅನಿಸಿತು. ಸಾಮಾನ್ಯ ಶೌಚಾಲಯವನ್ನು ಗಂಡುಮಕ್ಕಳೂ ಹೆಣ್ಣು ಮಕ್ಕಳೂ ಖಾಸಗಿಯಾಗೇ ಬಳಸಿ ಹೊರಬರುವ ಚಿತ್ರವೊಂದು ಮನದಲ್ಲಿ ಮೂಡಿ ಮರೆಯಾಯಿತು. ಅಸ್ಸಾಂನ ತೇಜಪುರ್ ವಿಶ್ವವಿದ್ಯಾನಿಲಯ ಹಾಗೂ ಆಂಧ್ರಪ್ರದೇಶದ ನ್ಯಾಶನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಅಂಡ್ ರಿಸರ್ಚ್ ಸಂಸ್ಥೆಗಳು ಲಿಂಗತಟಸ್ಥ ಶೌಚಾಲಯಗಳನ್ನು ಅಳವಡಿಸಿಕೊಂಡಿವೆಯಂತೆ. ಇಂತಹ ಬದಲಾವಣೆಯ ಹೆಜ್ಜೆಗಳು ಪ್ರಾಥಮಿಕ ಶಾಲೆೆಯಿಂದಲೇ ಆರಂಭವಾಗಬೇಕು. ಅಂತರ್ಗತ ಶೌಚಾಲಯಗಳನ್ನು ಸ್ಥಾಪಿಸಲು ಕೆಲವು ಹೆಚ್ಚುವರಿ ಗೋಡೆಗಳನ್ನು ನಿರ್ಮಿಸುವುದು ಕಷ್ಟವಲ್ಲ, ಮನಸ್ಸಿನಲ್ಲಿ ಮೂಡಿರುವ ಪ್ರತ್ಯೇಕತೆಯ ಹಲವು ಗೋಡೆಗಳನ್ನು ಒಡೆಯುವುದೇ ಸವಾಲು!

ಕೆಲವು ವರ್ಷಗಳ ಹಿಂದೆ ಕೇರಳ ಸರ್ಕಾರವು ಶಾಲೆಗಳಲ್ಲಿ ಲಿಂಗತಟಸ್ಥ ಸಮವಸ್ತçವನ್ನು ಜಾರಿಗೆ ತಂದಿತ್ತಾದರೂ ಅನೇಕರ ವಿರೋಧಗಳಿಂದಾಗಿ ನಿರ್ಧಾರವನ್ನು ಕೈಬಿಟ್ಟಿತ್ತು. ಈಗ ಮತ್ತೊಮ್ಮೆ ಕೇರಳದಲ್ಲಿ ಬಾಲಕರಿರಲಿ ಬಾಲಕಿಯರಿರಲಿ ಇಬ್ಬರಿಗೂ ಮೊಣಕಾಲಿನವರೆಗೆ ಬರುವ ಪ್ಯಾಂಟು, ಪೂರ್ಣ ಕೈ ಶರ್ಟು
ಸಮವಸ್ತ್ರ ವಾಗಲಿದೆ. ಇವನ್ನೆಲ್ಲ ಸರ್ಕಾರ ನಿರ್ಧರಿಸಬೇಕೋ? ಸಮಾಜ ನಿರ್ಧರಿಸಬೇಕೋ? ಅಥವಾ ಮಕ್ಕಳ ಪೋಷಕರು ನಿರ್ಧರಿಸಬೇಕೋ? ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಬದಲಾವಣೆ ಎಲ್ಲಿಂದಲೋ ಶುರುವಾಗಬೇಕು. ಸರ್ಕಾರ ಪ್ರಗತಿಯ ವೇಗವರ್ಧಕವಾಗಬೇಕು. ಯಾರೋ ಕೆಲವರು ರಿವಾಜುಗಳನ್ನು ಬದಲಿಸುವ ಮೊದಲ ಪ್ರಯತ್ನ ಮಾಡಿದ್ದರಿಂದಲೇ ಇಂದು ಸಾಕಷ್ಟು ಬದಲಾವಣೆಗಳು ಉಂಟಾಗಿವೆ. ಆಸ್ಥಾನಗಳಲ್ಲಿ ನರ್ತಕಿಯಾಗಿ, ದೇವಸ್ಥಾನಗಳಲ್ಲಿ ದೇವದಾಸಿಯಾಗಿ, ಪೂಜಾ ವಿಧಾನಗಳಲ್ಲಿ ಬಾಕನಂಗೆಯರಾಗಿ ಸ್ವಂತದ ವ್ಯಕ್ತಿತ್ವವೇ ಇಲ್ಲವೆಂದು ಭಾವಿಸಿದ್ದ ಹೆಣ್ಣು ಇಂದು ಅವುಗಳನ್ನೆಲ್ಲ ದಾಟಿ ದೊಡ್ಡ ದೊಡ್ಡ ಕಂಪನಿಗಳ ಸಿ.ಇ.ಓ ಆಗಿ, ಒಂದು ದೇಶದ ಪ್ರಧಾನ ಮಂತ್ರಿಯಾಗಿ, ಗಂಡಸರ ಕ್ಷೇತ್ರ ಎಂಬ ಅನೇಕ ವೃತ್ತಿಗಳಲ್ಲಿ ಮಿಂಚುತ್ತಿದ್ದಾಳೆ. ಆದರೆ, ಇದು ಎಲ್ಲ ಹೆಣ್ಣುಗಳಿಗೆ ದೊರೆತ ಭಾಗ್ಯವಲ್ಲ. ನಮ್ಮ ಸಂವಿಧಾನ ತನ್ನ ಪ್ರಜೆಗಳನ್ನು ಗಂಡು-ಹೆಣ್ಣು ಎಂದು ವಿಭಾಗಿಸುವುದಿಲ್ಲ. ಶತಮಾನಗಳಿಂದ ಉಂಟಾದ ಶೋಷಣೆಗಳಿಂದ ಬಿಡುಗಡೆ ಪಡೆಯಲು ಹಲವು ಸೌಕರ್ಯಗಳನ್ನು ಒದಗಿಸಿರುವುದು ಬೇರೆ ಮಾತು.

ಹೆಣ್ಣು ಮತ್ತು ಮಾನಸಿಕತೆ

ಹೆಣ್ಣು ಎಂದ ಒಡನೆ ಅದೇಕೋ ಮೃದೂನಿ ಕುಸುಮಾದಪಿ ಎಂಬುದಷ್ಟೇ ಸಮಾಜಕ್ಕೆ ನೆನಪಾಗುತ್ತದೆ. ಕಷ್ಟಕರವಾದ ಕೆಲಸವಿದ್ದರೆ ಅಯ್ಯೋ ಪಾಪ ಅದು ಅವಳಿಗೆ ಬೇಡ, ಅದನ್ನು ಅವನೇ ಮಾಡಲಿ. ಭಾರವಾದ ಚೀಲ ಎತ್ತುವ ಕೆಲಸ, ಏಣಿ ಹತ್ತಿ ಟ್ಯಾಂಕ್ ಶುಚಿ ಗೊಳಿಸುವ ಕೆಲಸ,ಮರ ಹತ್ತುವ ಕೆಲಸ ಇದೆಲ್ಲ ಅವಳಿಂದ ಆಗದು. ಅವನನ್ನೇ ಕಳಿಸು. ಇದು ಸಾಮಾನ್ಯವಾಗಿ ಮನೆ, ಶಾಲೆ ಅಥವಾ ಸಮಾಜದಲ್ಲಿ ಆಗಾಗ ಕೇಳಿ ಬರುವ ಸರ್ವೇ ಸಾಮಾನ್ಯ ಮಾತುಗಳು. ಗಂಡು ಮಗು ಒರಾಟಾಗಿ ವರ್ತಿಸಿದರೂ ಇದೇ ಸಂಚಿಕೆಯಲ್ಲಿ ಲೇಖಕಿ ವೇದಾ ಆಠವಳೆಯವರು ಚರ್ಚಿಸಿರುವಂತೆ “ಗಂಡು ಮಕ್ಕಳು ಹಂಗೇ ಅಲ್ವಾ?” ಎಂಬ ಅಪಾಯ ಬೇರೆ. ಇತ್ತೀಚಿನವರೆಗೂ ಶಾಲೆಗಳಲ್ಲಿ ಪ್ರಾರ್ಥನೆ, ಆರಂಭಗೀತೆಗಳನ್ನು ಹಾಡುವುದಿದ್ದರೆ ಹುಡುಗಿಯರು, ರಂಗೋಲಿ ಹಾಕಲು ಹುಡುಗಿಯರು, ಗಿಡ ನೆಡಲು ಹಾರೆ-ಪಿಕ್ಕಾಸು ಎತ್ತಿಕೊಳ್ಳುವವರು ಹುಡುಗರು ಆಗಿತ್ತು. ಈಗೀಗ ಸ್ವಲ್ಪ ಬದಲಾಗಿದೆ. ಆದರೂ, ಪೂರ್ಣ ಕುಂಭ ಸ್ವಾಗತಕ್ಕಾಗಿ ಸಾಲಿನಲ್ಲಿ ನಿಲ್ಲಲು, ಕ್ರೀಡಾಕೂಟದ ಪದಕಗಳನ್ನು ಒಯ್ಯುವ ಶ್ವೇತಕನ್ನಿಕೆಯರಾಗಲು ಹುಡುಗಿಯರನ್ನು ಪ್ರದರ್ಶನದ ಗೊಂಬೆಯಾಗಿಸುವುದು ಅಲ್ಲಲ್ಲಿ ನಡೆಯುತ್ತದೆ. ಮನೆಯ ಒಳಗೆ ಮತ್ತು ಹೊರಗೆ ನಡೆಯಲ್ಲಿ, ನುಡಿಯಲ್ಲಿ, ಸಾಮಾಜಿಕ ವರ್ತನೆಗಳಲ್ಲಿ ಕಾಣಿಸುತ್ತಿರುವ ತಾರತಮ್ಯದ ಚಿತ್ರವು ಮಕ್ಕಳ ವ್ಯಕ್ತಿತ್ವದ ಮೇಲೆ, ಮುಂದಿನ ಅವರ ನಡುವಳಿಕೆಗಳ ಮೇಲೆ ಪ್ರಭಾವ ಬೀರುತ್ತವೆ. ದೊಡ್ಡವರಾಗುವಾಗ ಅವರು ವರ್ತನಾ ತರಬೇತಿಗೆ ಒಳಗಾಗಿ ಹಿಂದಿನವರಂತೆಯೇ ನಡೆದುಕೊಳ್ಳುವ ಇನ್ನೊಂದು ವ್ಯಕ್ತಿಯಾಗುತ್ತಾರೆ. ಈ ಸರಪಳಿಯನ್ನು ಯಾರು ಕತ್ತರಿಸಬೇಕು?

ಶಾಲೆಗಳಲ್ಲಿ ಲಿಂಗ ತಟಸ್ಥ ಧೋರಣೆ


ಒಂದು ದೇಶದ ಪ್ರಗತಿಯನ್ನು ಆ ದೇಶದ ಮಹಿಳೆಯ ಪ್ರಗತಿಯ ಆಧಾರದಲ್ಲಿ ಅಳೆಯಬೇಕು. ಎನ್ನುತ್ತಾರೆ ಬಾಬಾ ಸಾಹೇಬ್ ಅಂಬೇಡ್ಕರ್. ಲಿಂಗ ಅಸಮಾನತೆಯನ್ನು ಹೋಗಲಾಡಿಸುವ ಮೊದಲ ಹೆಜ್ಜೆ ಅಂದರೆ ಅದು ಶಿಕ್ಷಣ. ನಮ್ಮ ನಮ್ಮ ಮನೆಗಳಲ್ಲಿ ಪಾರಂಪರಿಕವಾಗಿ ನಡೆದು ಬಂದ ತಾರತಮ್ಯವನ್ನು ಒಂದೇ ಬಾರಿಗೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಶಾಲೆಯಲ್ಲಿ ಸಮಾನತೆಯ ಪಾಠವನ್ನು ಅನ್ವಯಿಸಿದಾಗ ಮಾತ್ರ ಅದು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿ ನಿಧಾನವಾಗಿ ವ್ಯವಸ್ಥೆಯ ಬದಲಾವಣೆಗೆ ಕಾರಣವಾಗುತ್ತದೆ. ಶಾಲೆಯಲ್ಲಿ ಪ್ರತಿಯೊಂದು ಕೆಲಸವನ್ನು ಲಿಂಗ ತಾರತಮ್ಯವಿಲ್ಲದೆ ಮಾಡಿದಾಗ ಮಾತ್ರ ಅದು ಕಾರ್ಯಗತವಾಗುತ್ತದೆ. ಈಗೀಗ ನಾವು ಶಾಲೆಯಲ್ಲಿ ಕಸ ಗುಡಿಸುವುದು, ನೆಲ ಒರೆಸುವುದು, ಬೆಂಚು-ಡೆಸ್ಕ್ಗಳನ್ನು ಎತ್ತುವುದು, ಏಣಿ ಹತ್ತಿ ವಸ್ತುಗಳನ್ನು ತೆಗೆಯುವುದು ಇತ್ಯಾದಿ ಯಾವ ಕೆಲಸಗಳನ್ನು ಮಾಡಿಸುವಾಗ ಗಂಡು ಮಕ್ಕಳಿಗೇ ಆದ್ಯತೆ ನೀಡುತ್ತಿಲ್ಲ. ಗಂಡು ಮತ್ತು ಹೆಣ್ಣು ಮಕ್ಕಳೆಲ್ಲರೂ ಸಮಾನವಾಗಿ ಈ ಕೆಲಸಗಳನ್ನು ಹಂಚಿಕೊಳ್ಳುತ್ತಾರೆ. ಇನ್ನಷ್ಟು ವೇಗವಾಗಿ ಬದಲಾವಣೆಗಳಾಗಬೇಕೆಂದರೆ ಅಂತಹ ಕೆಲಸಗಳನ್ನು ಪ್ರಜ್ಞಾಪೂರ್ವಕವಾಗಿ ಹೆಣ್ಣು ಮಕ್ಕಳಿಂದಲೇ ಮಾಡಿಸಬೇಕಿದೆ. ಹೂಗಳಿಂದ ಮಾಲೆ ಮಾಡುವುದು, ರಂಗೋಲಿ ಬಿಡಿಸುವುದು ಇತ್ಯಾದಿಗಳನ್ನು ಹುಡುಗರೇ ಮಾಡುವುದೂ ಈ ಕಾಲದ ಅಗತ್ಯ. ಅನೇಕ ಆಟಗಳು ಗಂಡು ಮಕ್ಕಳಿಗಾಗಿಯೇ ರೂಪಿಸಲ್ಪಟ್ಟಿವೆ ಎಂದು ಸಮಾಜ ತಿಳಿದಿದೆ. ಶಾಲಾ ಮೈದಾನವು ಲಿಂಗಾಧಾರಿತವಾಗಿ ವಿಭಜನೆಗೊಂಡಿರುತ್ತದೆ. ಕೋಕೋ, ಥ್ರೋ ಬಾಲ್, ಟೆನಿಕ್ವೈಟ್ ಆಟಗಳಲ್ಲಿ ಹುಡುಗಿಯರೂ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಕೋರ್ಟುಗಳಲ್ಲಿ ಹುಡುಗರೂ ಇರುವುದು ಸಾಮಾನ್ಯವಾಗಿತ್ತು. ಆ ಆಟಗಳಿಗೆ ಅವಶ್ಯಕವಾದ ಬಟ್ಟೆಯನ್ನು ಧರಿಸಲು ಹೆಣ್ಣಿಗೆ ನಿರ್ಬಂಧ ಇರುವುದೂ ಹೀಗಾಗಲು ಕಾರಣವಾಗಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಆದರೆ, ಯಾರು ಯಾವ ಆಟವನ್ನೂ ಆಡಬಹುದು ಎಂಬುದು ದೊಡ್ಡ ಬದಲಾವಣೆ ಏನಲ್ಲ. ಯಾವುದೇ ಆಟವನ್ನು ಅವರು ಜೊತೆಯಾಗಿ ಆಡಬಹುದು. ಹಿಂದೆ ಡ್ರೈವರ್ ಕೆಲಸವನ್ನು ಮಹಿಳೆಯರು ಮಾಡಬಹುದೆಂದು ಊಹಿಸಲು ಸಾಧ್ಯವಿರಲಿಲ್ಲ. ಟಾಟಾ ಸಮೂಹ ಸಂಸ್ಥೆ ನೀಡಿದ ಉದ್ಯೋಗ ಜಾಹಿರಾತೊಂದರಲ್ಲಿ ಪುರುಷರಿಗೆ ಮಾತ್ರ ಎಂಬ ಒಕ್ಕಣೆ ಇತ್ತಂತೆ. ಅದನ್ನು ನೋಡಿದ ಸುಧಾ ಮೂರ್ತಿಯವರು ಈ ತಾರತಮ್ಯವನ್ನು ವಿರೋಧಿಸಿ ಕಂಪನಿಯ ಚೇರ ಪರ್ಸನ್ ರಿಗೆ ಪತ್ರ ಬರೆದಿದ್ದರಂತೆ. ಆನಂತರ ಅದೇ ಉದ್ಯೋಗಕ್ಕಾಗಿ ಸುಧಾ ಮೂರ್ತಿಯವರಿಗೆ ಕರೆ ಬಂದಾಗ ಈ ಹುದ್ದೆ ನಿರ್ವಹಿಸಲು ಭಾರ ವಾಹನಗಳ ಡ್ರೈವಿಂಗ್ ಸಾಧ್ಯವಾಗಬೇಕು, ಅದು ಮಹಿಳೆಯರಿಗೆ ಸಾಧ್ಯವಿಲ್ಲದ್ದು ಎಂದರಂತೆ. “ಏಕೆ ಸಾಧ್ಯವಿಲ್ಲ?” ಎಂದು ಪ್ರಶ್ನಿಸಿದ ಸುಧಾ ಮೂರ್ತಿಯವರು ಆ ಹುದ್ದೆಯನ್ನು ನಿರ್ವಹಿಸಿದರಂತೆ!

ಕೇರಳ ಸರ್ಕಾರದ ಮಾದರಿ ನಡೆ

ಇತ್ತೀಚೆಗೆ ಕೇರಳ ರಾಜ್ಯ ಸರ್ಕಾರ ತನ್ನ ಪಠ್ಯ ಪುಸ್ತಕದಲ್ಲಿ ಲಿಂಗ ಸಮಾನತೆಯ ವಿಚಾರಗಳನ್ನು ಪಾಠದಲ್ಲಿ ಸೇರಿಸಿತ್ತು. 3ನೇ ತರಗತಿಯ ಪಠ್ಯದ ಒಂದು ಚಿತ್ರದಲ್ಲಿ ಕೃಷಿ ಭೂಮಿಯಲ್ಲಿ ಮಹಿಳೆ ಹಾಗೂ ಪುರುಷರು ಒಟ್ಟಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಚಿತ್ರವನ್ನು ನೀಡಲಾಗಿದೆ. ಇನ್ನೊಂದು ಚಿತ್ರದಲ್ಲಿ ತಾಯಿ ಅಡುಗೆ ತಯಾರಿಸುತ್ತಿರುವಂತೆ, ತಂದೆ ನೆಲದ ಮೇಲೆ ಕುಳಿತು ಕಾಯಿತುರಿಯುತ್ತಿರುವಂತೆ, ಮಗಳೊಬ್ಬಳು ಕಪಾಟಿನಲ್ಲಿ ಪಾತ್ರೆಗಳನ್ನು ಜೋಡಿಸುತ್ತಿರುವಂತೆ ಹಾಗೂ ಪುಟ್ಟ ಮಗು ಆಟವಾಡುತ್ತಾ ಕೆಲಸಕ್ಕೆ ಸಹಾಯ ಮಾಡುವ ಚಿತ್ರವನ್ನು ನೀಡಲಾಗಿದೆ. ಇದಲ್ಲದೆ 3ನೇ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ “ಸಾಶ” ಎನ್ನುವ ಪಾಠವಿದೆ. ಈ ಪಠ್ಯದಲ್ಲಿ ತಂದೆ ಚಹಾ ತಿಂಡಿ ತಯಾರಿಸುತ್ತಿರುವ, ತಾಯಿ ಫ್ಯಾನ್ ಸ್ವಚ್ಛಗೊಳಿಸುತ್ತಿರುವ ಹಾಗೂ ಬಾಲಕಿ ಪಾತ್ರೆ ತೊಳೆಯುತ್ತಿರುವ ದೃಶ್ಯಗಳಿವೆ. ಈ ಚಿತ್ರಣಗಳು ಲಿಂಗಾಧಾರಿತ ಪ್ರಶ್ನೆಗಳನ್ನು ಹುಟ್ಟು ಹಾಕಿ, ಚಿಂತನೆಗೆ ಎಡೆ ಮಾಡಿಕೊಟ್ಟಿವೆ. ಪಠ್ಯದಲ್ಲಿ “ಸಾಶಾ” ಳ ಆತ್ಮೀಯ ಸ್ನೇಹಿತ ನವೀನ್ ಎಂದು ಹೇಳಲಾಗಿದೆ. ಈ ಮೂಲಕ ಹೆಣ್ಣು ಮಗು ಹುಡುಗರೊಡನೆ ಸ್ನೇಹ ಬೆಳೆಸಿಕೊಳ್ಳುವುದು ಸಾಮಾನ್ಯ ಸಂಗತಿ ಎನ್ನುವುದನ್ನು ಮನದಟ್ಟು ಮಾಡಿದೆ. ಅಡುಗೆ ತಯಾರಿಸುವ ಕೆಲಸ ಹೆಣ್ಣಿಗಷ್ಟೇ ಅಲ್ಲ, ಅದರಲ್ಲಿ ಗಂಡಿನ ಪಾಲೂ ಇದೆ, ಎನ್ನುವುದು ಮಗುವಿನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಅಪ್ಪ ಎಂದರೆ ಹೊರಹೋಗಿ ದುಡಿಮೆ ಮಾಡುವವನು, ಕಷ್ಟಪಟ್ಟು ಹಣ ಸಂಪಾದಿಸಿ ನಮ್ಮನ್ನು ಸಾಕುವವನು, ಅಮ್ಮ ಎಂದರೆ ತನ್ನ ಮಕ್ಕಳನ್ನು ನೋಡಿಕೊಂಡು ಮನೆಗೆಲಸ, ಅಡುಗೆಗೆ ಸೀಮಿತವಾದವಳು ಎನ್ನುವ ಮನೋಭಾವವನ್ನು ತೊಡೆದು ಹಾಕಿ ಲಿಂಗಸಮಾನತೆಯ ಪರಿಕಲ್ಪನೆ ಮೂಡಿಸುವ ವಿಶಿಷ್ಟ ಪ್ರಯತ್ನವನ್ನು ಕೇರಳ ಸರ್ಕಾರ ಮಾಡಿರುವುದು ಸ್ವಾಗತಾರ್ಹ. ಶಿಕ್ಷಕರು ಕೂಡ ಈ ಬದಲಾವಣೆಯನ್ನು ಸ್ವಾಗತಿಸಿದ್ದು ಮನೆ ಕೆಲಸದ ಹೊರೆ ತಾಯಿಗೆ ಮಾತ್ರ ಸೀಮಿತವಲ್ಲ ಇದು ಎಲ್ಲರ ಜವಾಬ್ದಾರಿ ಎನ್ನುವ ಸಂದೇಶವನ್ನು ನೀಡಿದೆ. ಸಮಾನತೆಯ ಬಗ್ಗೆ ಭಾಷಣ ಮಾಡುವ ವಿಚಾರವಾದಿಗಳು ಕೂಡ ತಮ್ಮ ಮನೆಗಳಲ್ಲಿ ಪಿತೃ ಪ್ರಧಾನ ವ್ಯವಸ್ಥೆಯನ್ನು ಅನುಸರಿಸುತ್ತಾರೆ. ತಮ್ಮ ಮನೆಯ ಹೆಣ್ಣು ಮಕ್ಕಳು ಮನೆಯ ಕೆಲಸಗಳನ್ನು ಕಲಿತಿರಬೇಕು ಎಂದು ಬಯಸುತ್ತಾರೆ ಇಂತಹ ಮನಸ್ಥಿತಿಯ ನಡುವೆ ಈ ಪಠ್ಯ ಎಲ್ಲರಿಗೂ ಉತ್ತಮ ಸಂದೇಶ ನೀಡುವಂತಿದೆ. ಇಂತಹ ವರ್ಣಭೇದ, ಲಿಂಗಭೇದದ ನಡುವೆ ಕೇರಳ ಸರ್ಕಾರದ ನಡೆ ನಮ್ಮ ದೇಶಕ್ಕಷ್ಟೇ ಅಲ್ಲ ಜಗತ್ತಿಗೆ ಮಾದರಿಯಾಗಿದೆ.

ಯುಕೆ, ಕೆನಡಾ, ಜರ್ಮನಿ ಯಂತಹ ರಾಷ್ಟ್ರಗಳಲ್ಲಿ ಲಿಂಗ ತಟಸ್ಥ ಕಾನೂನನ್ನು ಜಾರಿಗೆ ತರಲಾಗಿದೆ. ನಮ್ಮ ದೇಶದಲ್ಲಿ ಮೊದಲ ಹೆಜ್ಜೆ ಎಂಬಂತೆ ಕೇರಳ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಲಿಂಗ ತಟಸ್ಥವಾದ ಏಕ ರೂಪವಾದ ಸಮವಸ್ತ್ರವನ್ನು ಆಯ್ದ ಶಾಲೆಗಳಲ್ಲಿ ಪ್ರಯೋಗಿಕವಾಗಿ ಆರಂಭಿಸಿದೆ. ಸಮಾನತೆ ಎನ್ನುವುದು ಕೇವಲ ಹಕ್ಕು, ಅಧಿಕಾರ ಪಡೆಯುವಲ್ಲಿ ಅಷ್ಟೇ ಅಲ್ಲ ಧರಿಸುವ ಬಟ್ಟೆಯಲ್ಲಿಯೂ ಇರಬೇಕು ಎನ್ನುವ ಧ್ಯೇಯ ವಿಶಿಷ್ಟವಾದದ್ದು. ಕೇರಳ ಸರ್ಕಾರದ ಮಾದರಿಯಂತೆ ಕರ್ನಾಟಕದಲ್ಲಿಯೂ ಸಾಂಪ್ರದಾಯಿಕ ಪದ್ಧತಿ ತೊರೆದು ಲಿಂಗ ತಟಸ್ಥ ಸಮವಸ್ತ್ರ ಜಾರಿಗೆ ಬರಬೇಕು. ಈಗಾಗಲೇ ಹಲವು ಶಾಲೆಗಳಲ್ಲಿ ಅಂತಹ ಕ್ರಮಗಳನ್ನು ಸ್ವಯಂ ಸ್ಫೂರ್ತಿಯಿಂದ ಜಾರಿಗೆ ತಂದಿದ್ದಾರೆ. ವಾರದಲ್ಲೊಂದು ದಿನ ಸಮಾನ ಉಡುಪು ಧರಿಸುವ ಪರಿಪಾಠ ಆರಂಭವಾಗಿದೆ. ಅದೇ ರೀತಿ ಆಟದ ಮೈದಾನಗಳು ಕೂಡ ಲಿಂಗ ತಟಸ್ಥವಾಗಿ ರೂಪುಗೊಂಡು ಬದಲಾವಣೆಯ ದಾರಿಯಲ್ಲಿಸಾಗಬೇಕು.


ಪ್ರಜ್ವಲಾ ಶೆಣೈ ಕಾರ್ಕಳ

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page