
ಶೈಕ್ಷಣಿಕ ಸಂಸ್ಥೆಗಳಲ್ಲಿ ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಸಮಾನ ಪ್ರಾಶಸ್ತ್ಯ ನೀಡಬೇಕು. ಇದರಿಂದ ಮಕ್ಕಳ ಬೌದ್ಧಿಕ ಮಟ್ಟ ಸಂಕೀರ್ಣವಾಗಿ ಬೆಳೆಯುತ್ತದೆ. ನಾಲ್ಕು ಗೋಡೆಗಳ ಮಧ್ಯದಿಂದ ಹೊರಗೆ ಬಂದು ಮಕ್ಕಳು ತಮ್ಮನ್ನು ತಾವು ಪ್ರಾಯೋಗಿಕವಾಗಿ ತೊಡಗಿಸಿಕೊಂಡಾಗ, ಮುಂದೆ ಸಮಾಜದಲ್ಲಿ ಎಂತಹ ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೂ ಕೂಡ ಅದನ್ನು ಎದುರಿಸುವ ಮನೋಸ್ಥೈರ್ಯ ಅವರಲ್ಲಿ ಬೆಳೆಯುತ್ತದೆ. ಪೋಷಕರು ಕೂಡ ಇಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದಂತಹ ಡಾ.ಮಂಜುನಾಥ್ ಎ ಕೋಟ್ಯಾನ್ ಅವರು ಹೇಳಿದರು.

ಟಿಂಕರ್ ಸ್ಪೇಸ್ ಇದರ ಸಹಯೋಗದೊಂದಿಗೆ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ ಇಲ್ಲಿ ನಡೆದ ‘ಟಿಂಕರ್ ಫೆಸ್ಟ್- ವಿಜ್ಞಾನ ಮಾದರಿಗಳ ವಸ್ತು ಪ್ರದರ್ಶನ’ ವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಸಂಚಾಲಕರಾದಂತಹ ಶ್ರೀ ಕೆ ವೆಂಕಟೇಶ್ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಟಿಂಕರ್ ಸ್ಪೇಸ್ ನ, ಅಭಿಲಾಶ್ ಇವರು ಕಾರ್ಯಕ್ರಮದ ಮಹತ್ವವನ್ನು ವರ್ಣಿಸಿದರು ಹಾಗೂ ಸಂಸ್ಥೆಯ ರೂವಾರಿಗಳಾದಂತಹ ಶ್ರೀಯುತ ಮನೋಜ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತ ಸರ್ಕಾರದ ರಕ್ಷಣಾ ಇಲಾಖೆ ಹಾಗೂ ಶಿಕ್ಷಣ ಸಚಿವಾಲಯದ ಸಹಯೋಗದೊಂದಿಗೆ ನಡೆದ ವೀರಗಾಥ 4.0 ರಲ್ಲಿ ವಿಜೇತಳಾಗಿ ದೆಹಲಿಯಲ್ಲಿ ನಡೆದಂತಹ ಗಣರಾಜ್ಯೋತ್ಸವ ಸಂದರ್ಭದಲ್ಲಿನ ಕರ್ತವ್ಯ ಪಥದಲ್ಲಿ ಗೌರವವನ್ನು ಸ್ವೀಕರಿಸಿದಂತಹ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ ಸ್ನಿಗ್ಧ ಇವಳನ್ನು ಸನ್ಮಾನಿಸಲಾಯಿತು. ಸ್ವಾಗತ ಭಾಷಣ ಮಾಡಿದ ಸಂಸ್ಥೆಯ ಪ್ರಾಂಶುಪಾಲರಾದಂತಹ ಪ್ರಮೀಳಾ ಕೋಟ್ಯಾನ್ ಇವರು ಮಾತನಾಡಿ, ಸಂಸ್ಥೆಯು ಹೊಸ ಶಿಕ್ಷಣ ನೀತಿ 2020 ಇದರ ಅನ್ವಯ ಮಕ್ಕಳನ್ನು ವೈಜ್ಞಾನಿಕ ವಿಚಾರಧಾರೆಯೊಂದಿಗೆ ಬೆಳೆಸುವುದರೊಂದಿಗೆ ಅವರಿಗೆ ಆಧುನಿಕ ಶಿಕ್ಷಣಕ್ಕೆ ಬೇಕಾದ ಕೌಶಲ್ಯಗಳನ್ನು ಒದಗಿಸುತ್ತಿರುವುದರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.ವಿದ್ಯಾರ್ಥಿನಿ ಕುಮಾರಿ ಅವನಿ ಪೈ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸೌರಬ್ ಪುತ್ರನ್ ಇವರು ಧನ್ಯವಾದವಿತ್ತರು. ನಂತರ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಕೋಡಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಸುಮಾರು 50ಕ್ಕಿಂತಲೂ ಹೆಚ್ಚಿನ ವಿಜ್ಞಾನ ಮಾದರಿಗಳು ಗಮನಸೆಳೆದವು. ಕಾರ್ಯಕ್ರಮದಲ್ಲಿ ಶಿಕ್ಷಕರು ಶಿಕ್ಷಕೇತರ ಬಂಧುಗಳು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























