ಪೇಜಾವರ ಶ್ರೀಗಳಿಂದ ಗೋ ಸೇವೆ ಹಾಗೂ ಪರಿಸರ ಸಂರಕ್ಷಣೆಯ ಸಂದೇಶ

ಕಾರ್ಕಳ, ಜೂನ್ 29: ಗೋಸೇವೆ, ಪರಿಸರ ಸಂರಕ್ಷಣೆ ಹಾಗೂ ಜೀವವೈವಿಧ್ಯ ವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಕಾರ್ಕಳದ ಶ್ರೀಗುರು ರಾಘವೇಂದ್ರ ಮಠದ ಬಳಿಯ ಸ್ವಾತಂತ್ರ್ಯ ವನದ ಪಕ್ಕದ ಜಾಗದಲ್ಲಿ ಸೋಮವಾರ ಮಧ್ಯಾಹ್ನ ನೇಪಿಯರ್ ಗ್ರಾಸ್ ನೆಡುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಗೋವುಗಳಿಗೆ ಪೌಷ್ಟಿಕ ಆಹಾರವಾಗಿರುವ ಹಾಗೂ ವರ್ಷಪೂರ್ತಿ ಉತ್ತಮ ಇಳುವರಿ ನೀಡುವ ನೇಪಿಯರ್ ಗ್ರಾಸ್ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಅಭಿಯಾನವನ್ನು ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ ಕರಕಮಲಗಳಿಂದ ನೇಪಿಯರ್ ಗ್ರಾಸ್ ಸಸಿಗಳನ್ನು ನೆಟ್ಟು ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಗಳು ಪರಿಸರ ಸಂರಕ್ಷಣೆ, ಗೋಸೇವೆ ಹಾಗೂ ಹಸಿರು ಪರಿಸರ ನಿರ್ಮಾಣದ ಮಹತ್ವವನ್ನು ಒತ್ತಿಹೇಳಿ, ಸಮಾಜದ ಪ್ರತಿಯೊಬ್ಬರೂ ಪ್ರಕೃತಿ ಮತ್ತು ಜೀವಜಾಲದ ರಕ್ಷಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಯುವಜನರಲ್ಲಿ ಸೇವಾ ಮನೋಭಾವ ಬೆಳೆಸುವುದರ ಜೊತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳದ ಸದಸ್ಯರು ಹಾಗೂ ಶ್ರೀಗುರು ರಾಘವೇಂದ್ರ ಮಠದ ಟ್ರಸ್ಟಿಗಳು ಉಪಸ್ಥಿತರಿದ್ದು, ನೇಪಿಯರ್ ಗ್ರಾಸ್ ನೆಡುವ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಅಭಿಯಾನವು ಗೋಸೇವೆ, ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ವೃದ್ಧಿಯತ್ತ ಒಂದು ಅರ್ಥಪೂರ್ಣ ಹೆಜ್ಜೆಯಾಗಿ ಪರಿಣಮಿಸಿತು.
ಸ್ವಚ್ಛ ಕಾರ್ಕಳ ಬ್ರಿಗೇಡ್ ಕಳೆದ ಹಲವು ತಿಂಗಳುಗಳಿಂದ ಸ್ವಚ್ಛತಾ ಅಭಿಯಾನ, ವೃಕ್ಷಾರೋಹಣ, ಪರಿಸರ ಜಾಗೃತಿ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಕಾರ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಜನಜಾಗೃತಿ ಮೂಡಿಸುತ್ತಿದ್ದು, ಈ ನೇಪಿಯರ್ ಗ್ರಾಸ್ ನೆಡುವ ಅಭಿಯಾನವೂ ಆ ಸೇವಾ ಕಾರ್ಯಗಳ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ.


































