
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಹಾಗೂ ಹೆಚ್ ಆರ್ ಡಿ ಮತ್ತು ಪ್ಲೇಸ್ಮೆಂಟ್ ಸೆಲ್ ಇದರ ಆಶ್ರಯದಲ್ಲಿ, ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಕನೆಕ್ಟ್ ಎನ್ನುವ ಕಂಪೆನಿಯಿಂದ ಉದ್ಯೋಗ ಸಂದರ್ಶನದ ಕಾರ್ಯಕ್ರಮವು ನೆರವೇರಿತು.
ಟ್ಯಾಲೆಂಟ್ ಕನೆಕ್ಟ್ ಸಂಸ್ಥೆಯ ಮ್ಯಾನೇಜರ್ ಆಗಿರುವ, ಕು.ರುಚಿತಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿದ್ಯಾಭ್ಯಾಸ ಮುಗಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಎದುರಾದಾಗ ಶಿಕ್ಷಣದಿಂದ ಹೊರತಾದ ಚಾಣಾಕ್ಷತನವನ್ನು ಎಲ್ಲ ಕಂಪೆನಿಗಳು ಅಪೇಕ್ಷಿಸುತ್ತವೆ. ನಮ್ಮ ಜೀವನವನ್ನು ನಾವೇ
ಎದುರಿಸಬೇಕಾಗಿರುವುದರಿಂದ ಬೇರೆ ಬೇರೆ ರೀತಿಯ ಅವಕಾಶಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಬಳಸಿಕೊಳ್ಳಬೇಕು. ಈ ದಿಸೆಯಲ್ಲಿ ಟ್ಯಾಲೆಂಟ್ ಕನೆಕ್ಟ್ ಸಂಸ್ಥೆ ನಿಮ್ಮ ಬಳಿಗೆ ಬಂದಿದೆ. ಇದನ್ನು ಸದುಪಯೋಗಪಡಿಸಿ, ಉದ್ಯೋಗ ದೊರಕಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ ಎ. ಕೋಟ್ಯಾನ್ ಅವರು, ಮಾತನಾಡಿ, ಉದ್ಯೋಗವೆನ್ನುವುದು ಎಲ್ಲ ವಿದ್ಯಾರ್ಥಿಗಳ ಪ್ರಥಮ ಆದ್ಯತೆಯಾಗಿದೆ. ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಹೆತ್ತವರಲ್ಲಿ ಉದ್ಯೋಗದ ಕನಸನ್ನು ಬಿತ್ತುತ್ತವೆ.
ಹೆತ್ತವರು ತಮ್ಮ ಆಸಕ್ತಿಯನ್ನು ಮಕ್ಕಳ ಮೇಲೆ ಹೇರಿ ಅವರ ಅಪೇಕ್ಷೆಯಂತೆ ಓದಿಸುತ್ತಾರೆ. ಇದು ಸರಿಯಲ್ಲ.
ಕಠಿಣ ಪರಿಶ್ರಮ, ಸಿದ್ಧತೆ, ಗುಂಪು ಚಟುವಟಿಕೆ ಇವೆಲ್ಲವೂ ಉದ್ಯೋಗ ಪಡೆದುಕೊಳ್ಳುವ ಹಂತದಲ್ಲಿ ಹೆಚ್ಚು ಪಾತ್ರ ವಹಿಸುತ್ತವೆ. ಉದ್ಯೋಗ ಕೊಡುವ ಸಂಸ್ಥೆಗಳು ನಮ್ಮಿಂದ ಏನನ್ನು ನಿರೀಕ್ಷಿಸುತ್ತವೆ ಎನ್ನುವುದು ನಮಗೆ ತಿಳಿದಿರಬೇಕು. ದೊಡ್ಡ ದೊಡ್ಡ ಹುದ್ದೆಯಲ್ಲಿರುವ, ವಿಶ್ವ ಮಾನ್ಯ
ಕಂಪೆನಿಗಳನ್ನು ಕಟ್ಟಿರುವ ಅನೇಕರು ಬದುಕಿನ ಎಲ್ಲ ಹಂತಗಳಲ್ಲಿ ಸೋತರೂ ಛಲ ಬಿಡದೆ ಗೆದ್ದವರು. ಅವರೆಲ್ಲರ ಪರಿಶ್ರಮ ವಿದ್ಯಾರ್ಥಿಗಳ ಪಾಲಿಗೆ ಪ್ರೇರಣೆಯಾಗಲಿ. ಈ ಉದ್ಯೋಗ ಸಂದರ್ಶನವನ್ನು ಧೈರ್ಯದಿಂದ ಎದುರಿಸಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಮಹೇಶ್ ಶೆಟ್ಟಿ ಹಾಗೂ ಸಹ ಸಂಯೋಜಕಿ, ಶ್ರೀಮತಿ ಜಾಯ್ಲಿನ್ ವಿ. ಕಬ್ರಾಲ್ ಹಾಗೂ ಟ್ಯಾಲೆಂಟ್ ಕನೆಕ್ಟ್ ಸಂಸ್ಥೆಯ ಉದ್ಯೋಗಿ, ಕು. ಸೌಮ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವಿಘ್ನೇಶ್ ನಾಯಕ್ ಸ್ವಾಗತಿಸಿದರು. ರೋಹಿತ್ ನಿರೂಪಿಸಿದರು . ವರುಣ್ ಧನ್ಯವಾದ ಸಮರ್ಪಿಸಿದರು.



















