
ಹರಿಹರ: ವಿವಾದಾತ್ಮಕ ಸಾಹಿತಿ, ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ನಗರದ ಹೊರವಲಯದ ಕೃಷ್ಣಪ್ಪ ಭವನದದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 123 ನೇ, ಪ್ರೊ. ಬಿ.ಕೃಷ್ಣಪ್ಪನವರ 86ನೇ ಜನ್ಮ ದಿನಾಚರಣೆ ಹಾಗೂ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ್ದು ಈ ವೇಳೆ ಹೊಸ ವಿವಾದಾತ್ಮಕ ಹೇಳಿಕೆಯೊಂದು ನೀಡಿದ್ದಾರೆ. ಅದೇನೆಂದರೆ ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿದ್ದು. ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ದೇವತೆಗಳಿಂದ. ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ಹೇಳಿದ್ದಾರೆ.
ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಹೇಳಿದರು.
ಅಮೆರಿಕಾದ ಜಗತ್ ಪ್ರಸಿದ್ಧ ಕೊಲಂಬಿಯಾ ವಿಶ್ವವಿದ್ಯಾನಿಲಯದ ಅಧ್ಯಾಪಕರು ಜಗತ್ತಿನ ಶ್ರೇಷ್ಠ ವಿದ್ವಾಂಸ ಡಾ.ಅಂಬೇಡ್ಕರ್ ಎಂದು ನಿರ್ಣಯಿಸಿದ್ದಾರೆ. ಅಂಬೇಡ್ಕರ್ ಅವರಿಗೆ ತಿಳಿಯದ ವಿಷಯವಿರಲಿಲ್ಲ, ಅಸ್ಪೃಶ್ಯರಿಗೆ ನ್ಯಾಯ ಕೊಡಿಸುವ ಹಂಬಲದಲ್ಲಿ ಅವರು ಜಗತ್ತಿನ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಿದ್ದರು. ಈಗಿನ ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಅಂಶಗಳು ಫ್ರೆಂಚ್ ಕ್ರಾಂತಿಯಿಂದ ಪ್ರೇರಿತವಾಗಿ ಬಂದಿಲ್ಲ, ಬದಲಾಗಿ ಅಂಬೇಡ್ಕರ್ ಅವರು ೪೦ ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಭ್ಯಾಸ ಮಾಡಿದ ಪರಿಣಾಮವಾಗಿದೆ ಎಂದು ಹೇಳಿದರು.