
ಬೆಂಗಳೂರು: ಶಾಲಾ ಅವಧಿಯಲ್ಲಿ ಶಾಲಾ-ಕಾಲೇಜುಗಳ ಆವರಣದ ಸುತ್ತಲೂ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಯಾವುದೇ ಸಿಬ್ಬಂದಿ ವರ್ಗದವರು ಕೂಡ ಮೊಬೈಲ್ ಬಳಸಬಾರದು ಎಂದು ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ.
ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಉಪಯೋಗ ದಿನೇ ದಿನೇ ಹೆಚ್ಚುತ್ತಿದ್ದು ಇದು ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುತ್ತಿರುವುದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಕಲಿಕೆಯ ಅಮೂಲ್ಯ ಸಮಯವನ್ನು ಕೂಡ ವ್ಯರ್ಥ ಮಾಡುತ್ತಿದೆ. ಇದನ್ನು ತಪ್ಪಿಸಲು ಒಂದರಿಂದ 12ನೇ ತರಗತಿಯವರೆಗೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ ಈ ಮೊಬೈಲ್ ನಿಷೇಧ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಾಡಲಾಗಿದೆ.
ಒಂದು ವೇಳೆ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶಾಲಾ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಮೊಬೈಲ್ ಬಳಸಿದಲ್ಲಿ ಅವರ ಮೊಬೈಲ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದೆ.