ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಅದನ್ನು ಅರಿತು ನಡೆದುಕೊಳ್ಳಬೇಕು. ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಸಂಸ್ಕಾರವನ್ನು ಪಡೆದಾಗ ಉತ್ತಮ ಭವಿಷ್ಯವನ್ನು ಕಾಣಬಹುದು. ಹಾಗಾಗಿ ವಿದ್ಯಾರ್ಥಿಗಳು ಗುರು ಹಿರಿಯರಿಗೆ ಶರಣಾಗತರಾದಾಗ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ಕಾಪು ತಾಲೂಕಿನ ತಹಸಿಲ್ದಾರ್ ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಡಾ. ಪ್ರತಿಭಾ ಆರ್ ಹೇಳಿದರು.
ಅವರು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀ ಕೆ.ಪಿ ಶೆಣೈ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಸ್.ವಿ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ಐ ರವೀಂದ್ರನಾಥ್ ಪೈ , ಸ್ವಸ್ತಿ ವಾಚನ ಮಾಡಿದ ಸರಕಾರಿ ಪ್ರೌಢಶಾಲೆ ನಾರಾವಿಯ ಪದವೀಧರ ಶಿಕ್ಷಕಿ ಶ್ರೀಮತಿ ಆಶಾಲತಾ, ಪೂರ್ವ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶ್ರೀಮತಿ ಉಷಾ ಜೆ ಶೆಣೈ , ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಮತಿ ಮಾಲತಿ ಎಂ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಅಮೃತ, ಉಪಾಧ್ಯಕ್ಷ ಸನ್ವಿತ್, ಕಾರ್ಯದರ್ಶಿ ಕುಮಾರಿ ಆರತಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ್ ಶೆಟ್ಟಿ ಕೆ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯೋಗೇಂದ್ರ ನಾಯಕ್ ವಾರ್ಷಿಕ ವರದಿಯನ್ನು ವಾಚಿಸಿದರು.
ಈ ಸಂದರ್ಭದಲ್ಲಿ ವಾರ್ಷಿಕ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನಿರಂತರ ಐದು ದಿನಗಳ ವಾರ್ಷಿಕೋತ್ಸವವು ಅಂಡಾರು ವಿಠಲ ರುಕ್ಮಿಣಿ ಕಿಣಿ ಸಾಂಸ್ಕೃತಿಕ ಸಭಾಭವನದಲ್ಲಿ ನಡೆದು, ಎಸ್ ವಿ ಟಿ ಸಮೂಹ ಸಂಸ್ಥೆಗಳ ಯಕ್ಷಗಾನ ಕೇಂದ್ರದ ನಲ್ವತ್ತು ವಿದ್ಯಾರ್ಥಿಗಳಿಂದ ಕೃಷ್ಣ ಕೃಷ್ಣ ಶ್ರೀಕೃಷ್ಣ ಎಂಬ ಪೌರಾಣಿಕ ಯಕ್ಷಗಾನ ವಿಜೃಂಭಣೆಯಿಂದ ನಡೆಯಿತು.
ಸಮಾಜಶಾಸ್ತ್ರ ಉಪನ್ಯಾಸಕ ಪ್ರಭಾತ್ ರಂಜನ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಪದ್ಮಪ್ರಭ ಇಂದ್ರ ವಂದಿಸಿದರು. ಸಹಶಿಕ್ಷಕ ಸುನಿಲ್ ಶೆಟ್ಟಿ ನಿರೂಪಿಸಿದರು.
