25.8 C
Udupi
Monday, May 18, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 525

ಭರತೇಶ ಶೆಟ್ಟಿ,ಎಕ್ಕಾರು

ಶ್ರೀಕೃಷ್ಣ ಪರಮಾತ್ಮನ ನಿರ್ದೇಶನದಂತೆ ಪ್ರಣವ ಮಂತ್ರದೊಂದಿಗೆ ಅರ್ಜುನ ಶರ ಸಂಧಾನ ಮಾಡಿದ್ದಾನೆ‌. ಇದು ಮೂರನೆಯ ಶರ, ಪ್ರತಿಜ್ಞೆಗೈದ ವಚನ ಪೂರ್ತಿಯನ್ನು ಮಾಡುವಲ್ಲಿ ಕೊನೆಯ ಅವಕಾಶವಿದು. ತಪ್ಪಿದರೆ ಅರ್ಜುನನಿಗೂ ಸಂಕಷ್ಟವೇ ಎದುರಾಗಲಿದೆ. ಜೀವನದಲ್ಲಿ ಕೋಪಾವೇಶದಿಂದ, ಅಥವಾ ಅತಿ ಸಂತೋಷದಿಂದ ಏನೋ ಒಂದು ಆತುರದ ಘೋಷಣೆ ಮಾಡುವುದು ಅತಿ ಸುಲಭ ಮತ್ತು ಸರ್ವೇ ಸಾಮಾನ್ಯವಾದ ವಿಚಾರ. ಆದರೆ ಹಾಗೆ ನುಡಿದುದನ್ನು ಪೂರೈಸುವುದು ಸತ್ವ ಪರೀಕ್ಷೆ ಆಗಿ ಬಿಡುತ್ತದೆ ಈಗ ಪಾರ್ಥನಿಗೂ ಅಂತಹ ಸ್ಥಿತಿ ನಿರ್ಮಾಣವಾಗಿದೆ.

ಸುಧನ್ವ ಸದ್ಭಕ್ತಿಯಿಂದ ತನ್ನ ದೇವನ ಮಮಕಾರವನ್ನು ಅನುಭವಿಸುತ್ತಾ ಅದ್ವಿತೀಯವಾದ ಸುಖವನ್ನು ಅನುಭವಿಸುತ್ತಿದ್ದಾನೆ. “ಕೃಷ್ಣ ಪರಮಾತ್ಮಾ, ನಾನೇನು? ನಾನೆಷ್ಟು? ನನ್ನ ಶಕ್ತಿಯೆಷ್ಟು? ಎಲ್ಲವನ್ನೂ ನಾನು ತಿಳಿದವನಾಗಿರುವೆ. ಕೇವಲನಾದ ನನ್ನನ್ನು ಎಷ್ಟು ಎತ್ತರಕ್ಕೆ ಏರಿಸುತ್ತಿರುವೆ ದೇವಾ! ಈ ಸಮಯ ನನ್ನ ಅಂತರಂಗದ ರಂಗನಾದ ನಿನ್ನಲ್ಲಿ ನಿವೇದಿಸಿಕೊಳ್ಳದೆ ಹೋದರೆ ಎನ್ನ ಮನಸ್ಸು ಸಮಾಧಾನ ಹೊಂದದು. ದೇವಾ! ಪಾರ್ಥನ ಪೌರುಷವೇನು? ಶಸ್ತ್ರ ಸಂಚಯವೇನು? ಶಾಸ್ತ್ರ ಜ್ಞಾನವೆಷ್ಟು? ಆತನೊಳಗೆ ನಿಕ್ಷೇಪವಾಗಿರುವ ಕ್ಷಾತ್ರ ಬಲಗಳೆಷ್ಟು ಎಂದು ಅರಿಯದ ಮೂಢನು ನಾನಲ್ಲ. “ಏಕಮೇವ ಧನುರ್ಧರ” ಎಂದು ಚಂದ್ರವಂಶದ ಉಭಯ ಕುಲ ಬಿಲ್ಲೋಜರಾದ ಗುರು ದ್ರೋಣಾಚಾರ್ಯರು ಶಿಷ್ಯನ ಬಗ್ಗೆ ಪ್ರಮಾಣ ನೀಡಿರುವಾಗ, ರಣ ಕಾಳಭೈರವನೆಂದು ಕರೆಯಲ್ಪಟ್ಟಿರುವ ಆಚಾರ್ಯ ಭೀಷ್ಮರು ವೀರನಾದ ಅರ್ಜುನೊಬ್ಬನನ್ನುಳಿದು ಯಾರೂ ನನ್ನೆದುರು ನಿಲ್ಲಲಾರರು ಎಂದು ಹೇಳಿರುವಾಗ, ಹೆಚ್ಚೇಕೆ ಸುರಲೋಕದ ದೇವರಾಜನು ಕಿರೀಟಿ ಎಂದು ಸನ್ಮಾನಿಸಿರುವಾಗ, ಪಶುಪತಿ ಪರಮೇಶ್ವರನನ್ನು ಕೆಣಕಿ ಸೆಣಸಿ ಒಲಿಸಿಕೊಂಡಿರುವಾಗ, ಅದೆಲ್ಲಕ್ಕಿಂತಲೂ ದೇವನಾದ ನಿನಗೇ ಸಖನಾಗಿರುವ ಮಹಾತ್ಮ ಪಾರ್ಥನೆಲ್ಲಿ- ನಾನೆಲ್ಲಿ? ನಾನು ಆತನನ್ನು ಸೋಲಿಸಬಲ್ಲೆನೆ? ಆದೀತೆ ನನ್ನಿಂದ? ಕೃಷ್ಣಾ, ಭಗವಂತಾ ಎಲ್ಲವನ್ನೂ ಅರಿತವನಿದ್ದೇನೆ. ನಿನ್ನ ಲೀಲೆಯ ಗುಟ್ಟು ನನಗೆ ತಿಳಿಯದ ವಿಚಾರವೆ ಹೇಳು ದೇವಾ? ಯಾರು ನಿನ್ನ ನಿಷ್ಠಾವಂತ ಭಕ್ತರೋ, ಧರ್ಮ ಪರಾಯಣರೋ, ಸತ್ಕರ್ಮ ನಿರತರೋ ಅಂತಹ ಭಕ್ತರ ಪಾಲಿಗೆ ನೀನು ಕಲ್ಪವೃಕ್ಷವಾಗುವೆ. ನೀನು ಬಲವೂ, ಛಲವೂ, ಒಲವೂ, ಗೆಲುವೂ ಎಲ್ಲವೂ ಆಗುವೆ. ನಿನ್ನ ಸೇವೆ ಮಾಡುವವರ ಸೇವಕ ನೀನಾಗಿ ಬಿಡುವೆ. ಅರ್ಜುನ ಈ ತನಕ ಪ್ರಯೋಗಿಸಿರುವ ಬ್ರಹ್ಮಾಸ್ತ್ರ, ಮಹಾಸ್ತ್ರ, ದಿವ್ಯಾಸ್ತ್ರ, ಅಷ್ಟದಿಕ್ಪಾಲಕರ ಶಕ್ತ್ಯಾಯುಧಗಳೂ ನನ್ನನ್ನೇನೂ ಮಾಡಲಿಲ್ಲ ಎಂದರೆ ಏನರ್ಥ? ನನ್ನಲ್ಲಿ ಅವುಗಳನ್ನು ಖಂಡಿಸುವ ಪ್ರತ್ಯಸ್ತ್ರಗಳಿತ್ತು ಎಂದೇ? ದೇವಾ ಇಷ್ಟೇ ಅಲ್ಲಾ ಇನ್ನೂ ಹಲವು ಉತ್ತರವಿಲ್ಲದ ನನ್ನ ಪ್ರಶ್ನೆಗಳಿಗೆ ನೀನೇ ಉತ್ತರೋತ್ತರನಾಗಿರುವೆ. ನಿರ್ಮಲಾಂತಃಕರಣದಿಂದ ನಿನ್ನ ಚರಣ ಕಿಂಕರನಾಗಿ, ಶರಣನಾಗಿ ಅಚಲವಾದ ಮತಿ, ಸ್ಮೃತಿಗಳಿಂದ ಆರಾಧ್ಯನೆಂದು ಪೂಜಿಸಿ ಪ್ರೀತಿಸಿದ ಮಾತ್ರಕ್ಕೆ ಎಂತಹ ಔನ್ನತ್ಯ ಕರುಣಿಸಿದೆ ದೇವಾ? ನಿನ್ನ ಕೃಷ್ಣಾವತಾರದ ಲೀಲೆಗಳ, ದುಷ್ಟಮರ್ದನದ, ಶಿಷ್ಟ ರಕ್ಷಣೆಯ, ಗೋಪಾಲನೆಯ, ಸಾಕಾಗದೆ ರಾಮಾವತಾರದ ಸಮಸ್ತ ಪುಣ್ಯಬಲವನ್ನು ಧಾರೆಯೆರೆದಿರುವೆ. ನಾನು ನಿನ್ನ ಭಕ್ತನೆಂದ ಮಾತ್ರಕ್ಕೆ ಎಷ್ಟೊಂದು ಯೋಗ್ಯತೆಯನ್ನು ಹೊಂದಿಸಿದೆ ದೇವಾ? ನೀನು ಭಕ್ತರ ಅಧೀನ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ಎಲ್ಲದಕ್ಕಿಂತಲೂ ಮಿಗಿಲಾದುದು ಪ್ರಾಮಾಣಿಕ ಭಕ್ತಿ ಎಂದು ಲೋಕ ಮುಖಕ್ಕೆ ಪ್ರತಿಪಾದಿಸಿದೆಯಲ್ಲಾ ದೇವಾ…! ಇಷ್ಟೇ ಸಾಲದು ಎಂದು ಶರದಲ್ಲಿ ಸಾಕ್ಷಾತ್ ತ್ರಿಮೂರ್ತಿಗಳು ಸ್ಥಿತರಾಗಿ ನನ್ನೆಡೆಗೆ ಬರುತ್ತಿದ್ದಾರೆಯೆ? ಕೃಷ್ಣಾ! ನೀನು ತೋರುತ್ತಿರುವ ಈ ಅನನ್ಯ ಪ್ರೀತಿಗೆ ಪ್ರತಿಯಾಗಿ ಯಾವ ಸೇವೆ ಮಾಡಲಿ? ಎಷ್ಟು ಸೇವೆ ಮಾಡಲಿ? ಸಾಕಾದೀತೇ ದೇವಾ!! ಪಾಮರನಾದ ನನ್ನ ಬದುಕು ಪರಮ ಪಾವನವಾಗುವಂತೆ ಮಾಡಿದೆಯಾ ಪರಮಾತ್ಮಾ…ಕೃಷ್ಣಾ, ಮುರಳೀಧರ, ಗಿರಿಧರ, ಪೀತಾಂಬರಧರ, ಮಧುಸೂದನ, ಕೇಶವಾ, ದೇವಕೀ ಯಶೋದಾ ನಂದನ, ವಸುದೇವ ಕಂದ, ಗೋಪಾಲ, ಗೋವಿಂದ, ನಂದಗೋಪ ಮುಕುಂದ, ಶ್ರೀನಾಥಾ, ಕುಂಜ ವಿಹಾರಿ, ಚಕ್ರಧಾರಿ, ಶ್ಯಾಮಾ, ಮಾಧವಾ, ಮುರಾರಿ, ಅಸುರಾರಿ, ಬನವಾರಿ, ಯೋಗೀಶ್ವರ, ಗೋಪೇಶ, ಹರಿ, ಮದನ ಮನೋಹರ, ಮೋಹನ, ಜಗದೀಶ, ಲೋಕಪಾಲಕ, ಕಂಸಾರಿ, ರುಕ್ಮಿಣಿವಲ್ಲಭ, ವಾಸುದೇವಾ, ಗುಢಾಕೇಶ, ಹೃಷಿಕೇಶ, ಪಾರ್ಥಸಾರಥಿ, ಪರಂಬ್ರಹ್ಮ, ದೇವೇಶ, ಕಾಳಿಂಗ ಮರ್ದನ, ವೃಷ್ಣೀಪತಿ, ಯದುಪತಿ, ದ್ವಾರಕಾಧೀಶ, ದಾಮೋದರಾ, ಅಚ್ಯುತಾ, ಅನಂತ, ಹೇ ಭಕ್ತವತ್ಸಲಾ….! ನಿನ್ನ ಭಕ್ತನಿಗಾಗಿ ನೀನಿತ್ತ ಈ ದಿವ್ಯಾನುಗ್ರಹಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಕಾಗದು. ಮತ್ತೆ ಮತ್ತೆ ನಿನಗೆ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ.

ಭಗವಂತಾ ಇದೋ ನೀನೇ ಇತ್ತ ಪ್ರೇರಣೆ ಎಂದು ಭಾವಿಸಿ ನನ್ನ ಕರ್ಮ ಕರ್ತವ್ಯದಲ್ಲಿ ತೊಡಗುತ್ತೇನೆ. ಧನುರ್ಬಾಣಗಳನ್ನು ನಾನು ಧರಿಸಿದ್ದೇನೆ. ಅರ್ಜುನ ಪ್ರಯೋಗಿಸಿದ ಅಪಾರ ಶಕ್ತಿಯುತ ಮಹಾಶರವನ್ನು ಬರುತ್ತಿರುವಾಗ ನಾನು ಖಂಡಿಸಿ ಛೇದಿಸದೆ ಉಳಿದೆನಾದರೆ, ನನ್ನ ಹೆತ್ತಬ್ಬೆ ಸುಗರ್ಭಾ ದೇವಿಯ ಪುತ್ರನಲ್ಲ. ಸಾಧ್ವೀಮಣಿ ಎನ್ನ ಮಡದಿ ಪ್ರಭಾವತಿಗೆ ಪತಿಯಲ್ಲ. ಪರಮಧಾರ್ಮಿಕನೂ, ಭಗವದ್ಭಕ್ತನೂ ಆದ ಮಹಾರಾಜ ಹಂಸಧ್ವಜನ ಮಗನಲ್ಲ ಎಂದು ತಿಳಿದು ಕೊಳ್ಳಿರಿ. ಒಂದು ವೇಳೆ ಬರುತ್ತಿರುವ ಶರ ಕತ್ತರಿಸದೆ ಬಿಟ್ಟೆನಾದರೆ ಪರಮ ಪವಿತ್ರ ಭೂಕೈಲಾಸ ಕಾಶಿಗೆ ತೆರಳಿ ಮಣಿಕರ್ಣಿಕೆ ತೀರ್ಥಕ್ಷೇತ್ರದಲ್ಲಿ ಸ್ನಾನಾದಿ ವಿಧಿಸಹಿತ ಕರ್ಮಾಚರಣೆಗೈದು, ಉಪವಾಸವಿದ್ದು, ಪರಮ ವಾಸರವೆನಿಸಿದ ಶಿವರಾತ್ರಿಯ ದಿನದಲ್ಲಿ ಕಾಶಿ ವಿಶ್ವನಾಥನ ಗುಡಿಯನ್ನು ಸೇರಿ ತ್ರಿನೇತ್ರಧಾರಿಯಾದ ವಿಶ್ವೇಶ್ವರನನ್ನು ಅತ್ಯಂತ ಭಕ್ತಿಯಿಂದ ಬಿಡದೆ ಅರ್ಚಿಸುವ ಪರಮ ಭಾಗವತ ಭಕ್ತನನ್ನು ಹಿಡಿದೆಳೆದು ಎಡಗಾಲಿನಿಂದ ಒದ್ದು, ಹಿಂಸಿಸಿ ಕೊಂದರೆ ಯಾವ ತೆರನಾದ ಮಹಾಪಾತಕ ಬಂದೀತೋ! ಅಂತಹ ನಿಕೃಷ್ಟ ಪಾತಕಿಗೆ ಒದಗಬಹುದಾದ ದುರ್ಗತಿ ಎನಗೊದಗಲಿ. ಕೃಷ್ಣ ಭಕ್ತನು ನಾನು ಹೌದಾದರೆ ಬರಲಿರುವ ಮಹಾಶರವನ್ನು ಕತ್ತರಿಸದೆ ಬಿಡಲಾರೆ. ಅರ್ಜುನಾ ತಡ ಮಾಡದೆ ಬಿಡು ನಿನ್ನ ದಿವ್ಯ ಶರ.

ಅರ್ಜುನನು ಪ್ರಣವ ಮಂತ್ರದೊಂದಿಗೆ ಶ್ರೀಕೃಷ್ಣ ನಿಕ್ಷೇಪಿಸಿದ ರಾಮಾವತಾರದ ಪುಣ್ಯಬಲ, ಆವಾಹಿಸಿದ ತ್ರೈಮೂರ್ತಿಗಳ ಸಾನಿಧ್ಯವಿರುವ ಮಹಾಶರವನ್ನು ಗಾಂಡೀವಕ್ಕೆ ಅನುಸಂಧಾನ ಮಾಡಿ ಕಿವಿಯವರೆಗೆ ಸೆಳೆದು ಧನುರ್ವೇದೋಕ್ತವಾದ ಮಂತ್ರಗಳಿಂದ ಅಭಿಮಂತ್ರಿಸಿ, ಗುರಿಸಾಧನೆಯ ಸಂಕಲ್ಪ ಮಾಡುತ್ತಾ ಮನಸಾರೆ ಶ್ರೀಕೃಷ್ಣನನ್ನು ಧ್ಯಾನಿಸುತ್ತಾ ಪ್ರಯೋಗಿಸಿ ಬಿಟ್ಟನು.

ಸುಧನ್ವನೇನು ಸಾಮಾನ್ಯನೆ? ಮಹಾ ಹರಿಭಕ್ತ. ಲೋಕದಲ್ಲಿ ನಿಷ್ಕಲ್ಮಶವಾದ ಭಕ್ತಿಯಿಂದ ಸಂಚಯವಾಗುವ ಶಕ್ತಿಯೆಷ್ಟು, ಧರ್ಮರಕ್ಷಣೆಯ ಆಚಾರ ಬಲದ ಪ್ರಾಬಲ್ಯವೇನು ಎಂಬುವುದನ್ನು ಜಗಕ್ಕೆ ಸಾರಿ ಹೇಳುತ್ತಿರುವ ಸಾಕಾರ ಮೂರ್ತಿಯಂತೆ ತನ್ನ ಬತ್ತಳಿಕೆಯಿಂದ ಹರಿತವಾದ ತೀಕ್ಷ್ಣ ಶರವೊಂದನ್ನು ಸೆಳೆದು ಪ್ರತಿಯಾಗಿ ಪ್ರಯೋಗಿಸಿದ್ದಾನೆ. ಇಕ್ಕೆಲಗಳಿಂದ ಕಿಡಿಕಾರುತ್ತಾ ಶರಗಳು ಅತಿವೇಗದಿಂದ ಹಾರಿ ಬರುತ್ತಿವೆ. ಒಂದೆಡೆ ಮಹಾಶಕ್ತಿ ಮತ್ತೊಂದೆಡೆಯಿಂದ ಮಹಾಭಕ್ತಿ ಅಭಿಮುಖವಾಗಿದೆ. ಮತ್ತೆ ಸುಧನ್ವನಿಂದ ಪ್ರಯೋಗಿತ ತೀಕ್ಷ್ಣ ಶರ ಪಾರ್ಥನ ಶರವನ್ನು ನಡುಮಧ್ಯದಿಂದಲೇ ಕತ್ತರಿಸಿ ಬಿಟ್ಟಿತು. ಪಾರ್ಥ ನಿಬ್ಬೆರಗಾಗಿ ನೋಡುತ್ತಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page