24.3 C
Udupi
Tuesday, March 18, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 46

ಭರತೇಶ್ ಶೆಟ್ಟಿ, ಎಕ್ಕಾರ್

ದಿಗ್ವಿಜಯಕ್ಕೆ ಹೊರಟ ಪಾಂಡುವಿಗೆ ಆತನ ಭಾವ ಅಂದರೆ ಮಾದ್ರೇಶ ಋತಾಯನನ ಮಗ, ಮಡದಿ ಮಾದ್ರಿಯ ಸೋದರನಾದ – ಶಲ್ಯ ನೇ ಸಾರಥಿಯಾದನು. ಸುಮೂಹೂರ್ತದಲ್ಲಿ ಸೇನೆ ವಿಧಿವತ್ತಾಗಿ ಪೂಜಾದಿಗಳನ್ನು ಪೂರೈಸಿ ಹೊರಟಿತು. ಅಖಂಡ ಆರ್ಯಾವರ್ತದ ಪ್ರಬಲ ದೇಶಗಳಾದ ದಶಾರ್ಣ, ವಿದೇಹ, ಮಗಧ, ಸುಂಹ, ಪುಂಡ್ರಾದಿ ದೇಶಗಳನ್ನು ಸಮರ ಮುಖದಲ್ಲಿ ಗೆಲ್ಲುತ್ತಾ ಸಾಗುತ್ತಿದ್ದಂತೆ ದಿನಂಪ್ರತಿ ಹೇರಳ ಕಪ್ಪಕಾಣಿಕೆಗಳು ಹಸ್ತಿನಾವತಿಯನ್ನು ಸೇರುತ್ತಿದ್ದವು. ಇನ್ನುಳಿದ ದೇಶಗಳು ಸಂಧಿಯನ್ನು ಮಾಡಿ, ಯುದ್ದ ಮಾಡದೇ ಕಪ್ಪವಿತ್ತು ಶರಣಾದವು. ಹೀಗೆ ಚಕ್ರಾಕಾರವಾಗಿ ಎಲ್ಲಾ ದಿಕ್ಕುಗಳಲ್ಲೂ ದಿಗ್ವಿಜಯ ಸಾಧಿಸಿ ಪಾಂಡು ಚಕ್ರವರ್ತಿ ಯಾದನು. ಮರಳಿ ಹಸ್ತಿನಾವತಿ ಪುರ ಪ್ರವೇಶ ಕಾಲದಲ್ಲಿ ಅದ್ದೂರಿಯ ಸ್ವಾಗತ ಸ್ವೀಕರಿಸಿ ಅನ್ನದಾನ, ಸತ್ಪಾತ್ರರಿಗೆ ಏನೇನು ಅವಶ್ಯಕತೆಯಿದೆಯೋ ಅದೆಲ್ಲವೂ ದಾನ ರೂಪದಲ್ಲಿ ಕೊಡಲ್ಪಟ್ಟು ಹಸ್ತಿನಾವತಿ ಸಮೃದ್ಧ ಸಾಮ್ರಾಜ್ಯವಾಯಿತು.

ಇದೆಲ್ಲವನ್ನೂ ಕಂಡು ಸಹಿಸದಾದ ಶಕುನಿ ಅತೃಪ್ತನಾಗಿ ತನ್ನ ಸೋದರಿ ಗಾಂಧಾರಿಯಲ್ಲಿ ತನ್ನ ಮನದ ಅಸಹನೆಯನ್ನು ಹೊರಗೆಡಹುತ್ತಿದ್ದನು. ಹಾಗೆಯೇ ಅದು ಧೃತರಾಷ್ಟ್ರನಿಗೆ ಪತ್ನಿ ಗಾಂಧಾರಿಯಿಂದ ವರದಿಯಾಗಿ ಆತನೂ ಅಸಂತೃಪ್ತನಾಗಿ ಪರಿವರ್ತನೆಗೊಳ್ಳಲು ಆರಂಭಿಸಿದ.

ಹಸ್ತಿನಾವತಿ ಸಾಮ್ರಾಜ್ಯ ಭೂ ಸ್ವರ್ಗವಾಗಿತ್ತು. ಸಕಲ ಸೌಭಾಗ್ಯ, ಅಷ್ಟ ಐಶ್ವರ್ಯ, ಕೃಷಿ, ಗೋ ಸಂಪತ್ತು, ಋಷಿ ಮುನಿಗಳು, ಯಾಗ -ಯಜ್ಞ, ನಿತ್ಯ ಹವನಗಳು ಹೀಗೆ ಯಾವ ವಿಭಾಗದಲ್ಲಿ ಪರಿಶೀಲಿಸಿದರೂ ಸಮೃದ್ಧಿ ಮೇಳೈಸಿತ್ತು. ಆರೋಗ್ಯ, ಮನಶಾಂತಿ, ನೆಮ್ಮದಿ, ನಿಷ್ಟೆ, ಭಕ್ತಿ, ಸಂಸ್ಕಾರ, ಬಾಂಧವ್ಯ, ಪರೋಪಕಾರ, ಸ್ನೇಹ, ಕರುಣೆ, ಕಾಳಜಿ, ಸಂವೇದನೆ ಹೀಗೆ ಸಕಾರಾತ್ಮಕ ಅಂಶಗಳೇ ಈ ಸಾಮ್ರಾಜ್ಯದ ಯಶಸ್ವೀ ರಾಜಕೀಯತೆಗೆ ಕೈಗನ್ನಡಿಯಾಗಿತ್ತು. ಭೀಷ್ಮರು ಪಾಂಡು ಚಕ್ರವರ್ತಿಗೆ ಗುರುವಾಗಿ ಭೀಷ್ಮಾಚಾರ್ಯರಾದರೆ, ಸಂಬಂಧದಲ್ಲಿ ಅಜ್ಜನಾಗಿ ಭೀಷ್ಮ ಪಿತಾಮಹರಾದರು. ಇತ್ತ ಸತ್ಯವತಿಯೂ ಚಂದ್ರವಂಶದ ಔನ್ನತ್ಯ ಕಂಡು ಪರಮಾನಂದದ ಕಡಲಲ್ಲಿ ತೇಲಾಡುತ್ತಾ ನಿಜಾರ್ಥದಲ್ಲಿ ರಾಜಮಾತೆಯ ಕೃತಾರ್ಥತೆಯನ್ನು ಅನುಭವಿಸುತ್ತಿದ್ದಳು. ಹೀಗಿರಲು ಭೀಷ್ಮ – ಸತ್ಯವತಿಯರು ಸದಾಕಾಲ ದೇವರಲ್ಲಿ ಬೇಡಿ ಹರಸಿ ಹಾರೈಸುತ್ತಿದ್ದರು. ಆದರೂ ದೈವ ಸಂಕಲ್ಪದ ಗಣನೆ ಯಾರ ನಿಲುಮೆಗೂ ನಿಲುಕದ ನಿಯತಿಯಲ್ಲವೇ?

ಕಾಲ ಸಾಗುತ್ತಿರಲು, ಪಾಂಡು ಚಕ್ರವರ್ತಿ ಸದಾ ರಾಜಕೀಯ ಪ್ರಜಾ ಪರಿಪಾಲನೆಯಲ್ಲಿ ವ್ಯಸ್ಥನಾಗಿಯೆ ಇರುತ್ತಿದ್ದ. ತನ್ನ ಸಂಸಾರ – ಸಾಂಸಾರಿಕ ಜೀವನದ ಕಡೆಗೆ ಗಮನ ಹರಿಸುವಷ್ಟು ಸಮಯವೇ ಸಿಗುತ್ತಿರಲಿಲ್ಲ. ಹೀಗಿರಲು ಪಾಂಡು ಚಕ್ರವರ್ತಿಗೆ ಕೃಷಿಕರಿಗೆ ಸಹಾಯವಾಗಲು ಮೃಗ ಬೇಟೆಯಾಡಬೇಕೆಂಬ ಅನಿವಾರ್ಯತೆ ಉಂಟಾಯಿತು. ಹೊರಡ ಬೇಕೆನ್ನುವಷ್ಟರಲ್ಲಿ ಮಹಾರಾಣಿಯರಾದ ಕುಂತಿ – ಮಾದ್ರಿಯರೂ ತಾವೂ ಬರುತ್ತೇವೆ ಎಂಬ ಬೇಡಿಕೆಯಿಟ್ಟರು. ಅದಕ್ಕೆ ಎರಡು ಸಕಾರಣವನ್ನೂ ನೀಡಿದರು. ಮೊದಲನೆಯದಾಗಿ ಇಬ್ಬರೂ ಕ್ಷಾತ್ರಯಾನಿಯರು – ಕಲಿತ ಯುದ್ದ ವಿದ್ಯೆ ಮರೆಯದಂತೆ ಕುದುರೆ ಸವಾರಿ, ಶಸ್ತ್ರ ವಿದ್ಯೆ ಪ್ರಯೋಗಿಸಿ ಅಭ್ಯಾಸ ಮಾಡಲು ಅವಕಾಶ ಕೇಳಿಕೊಂಡರು. ಎರಡನೆಯದಾಗಿ ಚಕ್ರವರ್ತಿಯಾಗಿರುವ ಪಾಂಡು ಚಕ್ರವರ್ತಿಯ ರಣಕೌಶಲ ಕಣ್ಣಾರೆ ಕಾಣುವ ಆಶಯ ವ್ಯಕ್ತಪಡಿಸಿದರು. ಒಪ್ಪಿಗೆ ನೀಡಿದ ಚಕ್ರವರ್ತಿ ಸೈನ್ಯ, ವಿಶೇಷವಾಗಿ ಪರಿಣತಿ ಪಡೆದ ಬೇಟೆಗಾರರ ತಂಡವನ್ನೂ, ಪರಿಚಾರಕ ಪಡೆ, ಆಹಾರ ಸಾಮಾಗ್ರಿ ಸೇರಿಸಿಕೊಂಡು ಹೊರಟರು.

ಹೀಗೆ ಹೊರಟ ಪಾಂಡು ಚಕ್ರವರ್ತಿ ನಾಯಕತ್ವದ ಸೇನೆ ಮೃಗ ಬೇಟೆಯಾಡುತ್ತಾ ಕುಶಲ ಕೌಶಲ್ಯ ಪ್ರದರ್ಶಿಸಿ ದುಷ್ಟ ಮೃಗಗಳನ್ನು ಸವರುತ್ತಾ ಸಾಗುವ ನೈಪಣ್ಯತೆಯನ್ನು ಮನದಣಿಯೆ ಕಂಡು ಸಂತಸಪಟ್ಟರು ಮಹಾರಾಣಿಯರು.

ಹೀಗೆ ಬೇಟೆಯಾಡುತ್ತಾ ಗೊಂಡಾರಣ್ಯ ಸೇರಿದರು. ಅದೇ ಕಾಡಿನಲ್ಲಿ ಕಿಂದಮ ನೆಂಬ ಮಹಾ ತಪಸ್ವಿಯು ತನ್ನ ಪತ್ನಿಯ ಜೊತೆ ಆಶ್ರಮವಾಸಿಯಾಗಿದ್ದನು. ಮಹಾ ತಪಸ್ವಿಯೂ, ಸಿದ್ಧಿಗಳನ್ನು ಸಿದ್ದಿಸಿಕೊಂಡಿದ್ದ ಮಹಿಮಾನ್ವಿತನೂ ಆಗಿದ್ದನು. ಏನೋ ಕಾಲದ ವೈಪರೀತ್ಯವೋ ಸದಾ ತಪಸ್ಸಿನೆಡೆ ಆಸಕ್ತಿ ಕೇಂದ್ರೀಕೃತವಾಗಿರುತ್ತಿದ್ದ ಋಷಿವರ ಈ ದಿನ ಹಗಲು ಹೊತ್ತಿನಲ್ಲೇ ಪತ್ನಿಯ ದೇಹಸುಖ ಅನುಭವಿಸುವ ಅಪೇಕ್ಷೆ ತಳೆದ. ಋಷಿಪತ್ನಿ ಪತಿಯ ಕಾಮನೆ ತಿಳಿದು ಆಚಾರಧರ್ಮವನ್ನು ನೆನಪಿಸಿ ಪತಿವರನಿಗೆ ಹಗಲು ಹೊತ್ತು ರತಿ ಕ್ರೀಡೆ ಮನುಷ್ಯ ಕುಲ ಸಂಜಾತರಿಗೆ ನಿಷಿದ್ಧ. ಹಾಗಾಗಿ ಸೂರ್ಯ ಅಸ್ತಮಾನ ಕಾಲಕ್ಕಾಗಿ ಕಾಯಬೇಕು ಎಂದು ಸೂಚಿಸಿದಳು. ನಿಶೆಯ ಚಂದ್ರೋದಯದ ತಂಪಿನ ಕಂಪಿನ ಬೆಳದಿಂಗಳಲ್ಲಿ ತನ್ನನ್ನು ಸಮರ್ಪಿಸಿ ತಮ್ಮ ಬಯಕೆ ಈಡೇರಿಸುವೆ ಎಂದು ಹೇಳಿ ಸಂತೈಸಿದಳು. ಆದರೆ ಅಷ್ಟು ಕಾಯುವ ವ್ಯವಧಾನವಿರದ ಕಿಂದಮ ಋಷಿ ಯೋಚಿಸಿ ತನ್ನ ಮಂತ್ರ ಸಿದ್ಧಿಯಿಂದ ಪತ್ನಿಯನ್ನು ಹೆಣ್ಣು ಜಿಂಕೆಯಾಗಿಯೂ, ತಾನು ಗಂಡುಜಿಂಕೆಯಾಗಿಯೂ ರೂಪಾಂತರಗೊಂಡರು. ಕಾರಣ ಮೃಗಗಳಿಗೆ ಕಾಮಕ್ರೀಡೆಗೆ ಕಾಲದ ನಿರ್ಬಂಧವಿಲ್ಲ.

ಹೀಗೆ ಕಿಂದಮ ಋಷಿ ಹಾಗೂ ಪತ್ನಿ ಮೃಗರೂಪ ತಳೆದು ಮೈಥುನ ಸುಖದಲ್ಲಿ ತೊಡಗಬೇಕೆಂಬ ಹಂಬಲದಿಂದ ಕುಣಿಯುತ್ತಾ ರಸ ನಿಮಿಷಗಳನ್ನು ಕಳೆಯುತ್ತಾ ಆನಂದಿಸುತ್ತಿದ್ದರು. ಆಗ ಅತ್ತ ಬೇಟೆಯಾಡುತ್ತಾ ಸಾಗಿ ಬರುತ್ತಿದ್ದ ಪಾಂಡು ಚಕ್ರವರ್ತಿ ಜಿಂಕೆಗಳನ್ನು ನೋಡಿ ತನ್ನ ಧನುಸ್ಸಿನ ಪ್ರತ್ಯಂಚಕ್ಕೆ ತೀಕ್ಷ್ಣ ಶರವೊಂದನ್ನು ಪೋಣಿಸಿ, ಈ ಜೋಡಿ ಹರಿಣಗಳಿಗೆ ಗುರಿಯಾಗಿಸಿ ಪ್ರಯೋಗಿಸಿಯೇ ಬಿಟ್ಟನು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page