ಭಾಗ – 284
ಭರತೇಶ್ ಶೆಟ್ಟಿ, ಎಕ್ಕಾರ್

ಆಗ ವಿದುರನು “ಸುಯೋಧನಾ! ಹಸ್ತಿನಾವತಿಯ ಹಿತೈಷಿಗಳಾಗಿ ಅವರವರ ಅಭಿಮತ ವ್ಯಕ್ತ ಪಡಿಸಿದ್ದಾರೆ. ನಾನೀಗ ಮತ್ತೆ ಅದೇ ವಿಚಾರ ಮಂಡಿಸಿದರೆ ನಿನಗೆ ಹಿತವಾಗದು. ಆದರೂ ನನ್ನ ಅಣ್ಣನೂ, ಮಹಾರಾಜನೂ ಆದ ಧೃತರಾಷ್ಟ್ರನಿಗಾಗಿ ಒಂದು ಕಥೆಯನ್ನು ಹೇಳುತ್ತೇನೆ. ಹಿಂದೆ ಒಬ್ಬ ಬೇಟೆಗಾರನಿದ್ದ. ಪ್ರಾಣಿ ಪಕ್ಷಿಗಳನ್ನು ಹಿಡಿದು ಬೇಯಿಸಿ ತಿನ್ನುವುದು ಆತನ ಜೀವನೋಪಾಯದ ವೃತ್ತಿಯಾಗಿತ್ತು. ಒಂದು ದಿನ ಹಕ್ಕಿಗಳನ್ನು ಹಿಡಿಯುವುದಕ್ಕಾಗಿ ಬಲೆ ಬೀಸಿದ್ದ. ಆತನ ಅಪೇಕ್ಷೆ ಬೇಗನೆ ಕೈಗೂಡಿತು. ಎರಡು ಹಕ್ಕಿಗಳು ಬೇಟೆಗಾರನ ಬಲೆಗೆ ಬಿದ್ದವು. ಆದರೆ ಅವುಗಳು ಜಾಣತನ ತೋರಿ, ತಾವು ಸಿಕ್ಕಿಕೊಂಡ ಬಲೆಯನ್ನು ಎತ್ತಿಕೊಂಡು ಆಕಾಶ ಮಾರ್ಗದಲ್ಲಿ ಹಾರಿ ಹೋದವು. ನೋಡುತ್ತಿದ್ದ ಬೇಟೆಗಾರ ಹೌಹಾರಿದ, ಆದರೂ ಅವುಗಳು ಆಕಾಶದಲ್ಲಿ ಹಾರಿ ಹೋದ ಹಾದಿಯನ್ನು ಅನುಸರಿಸಿ ಬೆಂಬತ್ತಿ ಓಡತೊಡಗಿದನು. ಇದನ್ನೆಲ್ಲಾ ನೋಡುತ್ತಿದ್ದ ಓರ್ವ ಋಷಿಗೆ ನಗು ತಡೆಯಲಾಗಲಿಲ್ಲ. ಬೇಟೆಗಾರನನ್ನು ಕರೆದು ‘ಅಯ್ಯಾ ನಿನಗೆ ಬೇಟೆಯೂ ಸಿಗಲಿಲ್ಲ, ನಿನ್ನ ಬಲೆಯನ್ನೂ ಕಳಕೊಂಡೆಯಲ್ಲ’ ಎಂದು ಕೇಳಿದರು. ಸ್ವಾಮೀ, ನಿಮಗೆ ಪ್ರಣಾಮಗಳು. ನನ್ನ ಬೇಟೆ ಮತ್ತು ಬಲೆ ಎರಡೂ ನನಗೆ ಸಿಗಲಿದೆ. ಈಗ ಎರಡೂ ಹಕ್ಕಿಗಳು ಒಮ್ಮತದಿಂದ ಹಾರುತ್ತಿವೆ. ಸ್ವಲ್ಪ ಹೊತ್ತಿನಲ್ಲಿ ಅವುಗಳೊಳಗೆ ಜಗಳವಾಗುತ್ತದೆ. ಆ ಕ್ಷಣದಲ್ಲಿ ಅವುಗಳು ಪ್ರಾಣಾಪಾಯವನ್ನೂ ಮರೆತು ಕೆಳಗಿಳಿಯುತ್ತವೆ. ನಾನು ಬಲೆ ಸಹಿತ ಹಕ್ಕಿಗಳನ್ನೂ ಹಿಡಿಯುತ್ತೇನೆ ನೋಡುತ್ತಾ ಇರಿ ನೀವು. ಎಂದು ಹೇಳಿ ಮತ್ತೆ ಹಿಂಬಾಲಿಸಿದನು. ಆತನ ಗ್ರಹಿಕೆಯಂತೆಯೆ ಹಕ್ಕಿಗಳು ಜಗಳಾಡಿಕೊಂಡು ಕೆಳಗಿಳಿದವು. ಕಾಯುತ್ತಿದ್ದ ಬೇಟೆಗಾರ ಹಕ್ಕಿಗಳ ಸಹಿತ ಬಲೆಯನ್ನೂ ತನ್ನದಾಗಿಸಿ ಋಷಿಗಳ ಮುಂದೆ ತಂದು ತೋರಿಸಿದ. ಈ ಕಥೆಯ ಸಾರಾಂಶ ಇಷ್ಟೆ, ಹಕ್ಕಿಗಳಿಗೆ ಸವಾಲು ಎದುರಾಯಿತು ನಿಜ, ಆದರೆ ಒಮ್ಮತ ಸಾಧಿಸಲಾಗದೆ ಪರಸ್ಪರ ಕಚ್ಚಾಟಕ್ಕೆ ಮನ ಮಾಡಿದ ಕಾರಣ ಅಪಾಯಕ್ಕೆ ಎಡೆ ಮಾಡಿಕೊಟ್ಟವು. ಈಗ ನಮ್ಮಲ್ಲೂ ಪಾಂಡವ ಕೌರವ ಜೋಡಿ ಹಕ್ಕಿಗಳು ಸಮಸ್ಯೆಗೆ ಗುರಿಯಾಗಿವೆ. ಪರಸ್ಪರ ಸಂಧಾನದಿಂದ ಸಹಮತ ಸಾಧಿಸಿದರೆ ಅಪಾಯ ನಿವಾರಣೆ ಸಾಧ್ಯ. ಇಲ್ಲವಾದರೆ ಸರ್ವನಾಶಕ್ಕೆ ಮುಹೂರ್ತವಿಟ್ಟಂತಾಗುತ್ತದೆ. ಹಾಗಾಗಿ ಕೌರವ ಪಾಂಡವ ಮೈತ್ರಿ ಅತ್ಯಗತ್ಯ” ಎಂದನು.
ದುರ್ಯೋಧನ ಕೇಳ ಬೇಕಲ್ಲ? ವಿದುರ – ಭೀಷ್ಮ ಇಬ್ಬರ ಮಾತನ್ನೂ ಖಂಡಿಸಿದನು. ತಾನು ತನ್ನವರ ಸಹಯೋಗದಿಂದ ಪಾಂಡವರನ್ನು ಗೆಲ್ಲಬಲ್ಲೆ ಎಂದು ತನ್ನ ಪಿತ ಧೃತರಾಷ್ಟ್ರನಿಗೆ ಹೇಳಿ, ಯುದ್ದವೆ ಅಂತಿಮ ನಿರ್ಣಯವೆಂದು ಸಾರಿದನು. ಇನ್ನು ಪ್ರಯತ್ನಿಸುವುದು, ಹಿತೋಪದೇಶ ಮಾಡುವುದು ವ್ಯರ್ಥವೆ ಸರಿ ಎಂದು ಭೀಷ್ಮಾಚಾರ್ಯ ಸಹಿತ ಹಿರಿಯರು ಆಸ್ಥಾನದಿಂದ ಹೊರನಡೆದರು.
ಇತ್ತ ಉಪಪ್ಲಾವ್ಯದಲ್ಲಿ ಧರ್ಮರಾಯ ಶ್ರೀ ಕೃಷ್ಣನ ನೇತೃತ್ವದಲ್ಲಿ ಸಭೆ ನಡೆಸಿದನು. “ಹಸ್ತಿನೆಗೆ ಸಂಜಯ ತೆರಳಿ ಈಗ ಅಲ್ಲೂ ಚರ್ಚೆ ನಡೆಯುತ್ತಿರಬಹುದು. ನಮ್ಮ ದೊಡ್ಡಪ್ಪ ನಮಗೆ ಪೂಜ್ಯರು ಆಗಿದ್ದಾರೆ. ಆದರೆ ಅವರ ಮಕ್ಕಳು ಈ ಸಂಧಾನಕ್ಕೆ ಒಪ್ಪುವ ಸಾಧ್ಯತೆ ನನಗೆ ಕಾಣುತ್ತಿಲ್ಲ. ಹಾಗಾಗಿ ವಾಸುದೇವ ನೀನು ನಮ್ಮ ಮುಖವಾಣಿಯಾಗಿ ಅಲ್ಲಿಗೆ ಹೋಗಿ ಈ ಘೋರ ಸಂಗ್ರಾಮ ನಡೆಯದಂತೆ ಸಂಧಿ ಮಾಡಬೇಕು. ಸ್ವಜನರೂ ಬಂಧುಗಳೂ ಆದ ನಮ್ಮೊಳಗೆ ಸಾಗಬಹುದಾದ ಯುದ್ದ ನಿರ್ಣಯವಾದರೆ ನಾಳೆ ಕೊಲ್ಲುವವರೂ, ಕೊಲ್ಲಲ್ಪಡುವವರೂ ನಮ್ಮವರೆ ಆಗುತ್ತೇವೆ. ಈ ಬಂಧುಹತ್ಯಾ ದೋಷಕಾರಕ ಮಹಾಪಾಪ ಕೃತ್ಯ ತಡೆಯುವ ಪ್ರಯತ್ನ ನಮ್ಮಿಂದಾಗಬೇಕು. ನ್ಯಾಯವಾಗಿ ನಮಗೇನು ಸಿಗಬೇಕಿತ್ತೊ ಅದರ ವಿಚಾರ ಮರೆತು ಬಿಡೋಣ. ಶಾಂತಿಯನ್ನು ಸಾಧಿಸುವುದು ಈಗ ಪರಮ ಧ್ಯೇಯ. ಯುದ್ದ ಸಿದ್ಧತೆಗಳು ನಡೆದಿವೆ ನಿಜ, ಆದರೆ ಆ ಯುದ್ದ ನಡೆಯಬಾರದು. ನಡೆಯುವುದಿದ್ದರೂ ಸರ್ವ ಪ್ರಯತ್ನಗಳ ಬಳಿಕ ಆ ಕುರಿತು ನಿರ್ಣಯವಾಗಲಿ. ಪಂಚ ಪಾಂಡವರಾದ ನಮಗೆ ನಮ್ಮ ಸಾಮ್ರಾಜ್ಯದ ಪ್ರತಿಯಾಗಿ ಐದು ಗ್ರಾಮಗಳು ಸಿಕ್ಕಿದರೆ ಸಾಕು. ರಾಜ್ಯ – ಅಧಿಕಾರದ ಲೋಭಿಯಾಗಿರುವ ಕೌರವನಿಗೆ ಸಮಸ್ತ ಸಾಮ್ರಾಜ್ಯವನ್ನು ಬಿಟ್ಟುಕೊಡೋಣ. ಐದು ಗ್ರಾಮಗಳಾದ ಕುಶಸ್ಥಳ, ವೃಕಸ್ಥಳ, ಮಾಕಂದಿ, ವಾರಣಾವತ ಅಲ್ಲದೆ ಸಮೀಪದ ಶಕ್ರಪ್ರಸ್ಥವನ್ನು ಸಾಮದಿಂದ ನೀಡಿದರೂ ಸಾಕು. ನಾವು ಸಂತೃಪ್ತರಾಗುತ್ತೇವೆ. ನಮ್ಮ ಈ ಕನಿಷ್ಟ ಬೇಡಿಕೆಯನ್ನು ಸ್ವತಃ ನೀನು ನಮ್ಮ ಪರವಾಗಿ ಹಸ್ತಿನೆಯ ಆಸ್ಥಾನದಲ್ಲಿ ಪ್ರಸ್ತಾಪಿಸಬೇಕು. ದೊಡ್ಡಪ್ಪ ಧೃತರಾಷ್ಟ್ರ, ಚಿಕ್ಕಪ್ಪ ವಿದುರ, ಪಿತಾಮಹ ಭೀಷ್ಮಾಚಾರ್ಯ ಸಹಿತ, ಆಚಾರ್ಯರೆಲ್ಲರೂ ಈ ಕಿಂಚಿತ್ ಅಪೇಕ್ಷೆಯನ್ನು ತಿರಸ್ಕರಿಸಲಾರರು. ಆ ದುರ್ಯೋಧನ ಈ ಕೋರಿಕೆಯನ್ನೂ ಮನ್ನಿಸದೆ ಉಳಿದರೆ, ನೀನಗೆ ಏನು ಉಚಿತ ಅನ್ನಿಸುತ್ತದೋ ಆ ವಿಧಾನದಲ್ಲಿ ಒಪ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ನನಗೆ ಈ ಸಂಧಾನ ಚಂದ್ರವಂಶದ ಶ್ರೇಯಸ್ಸಿಗೆ ಉತ್ತಮ ಹಾದಿ ಎಂಬ ಹಾಗೆ ಅನಿಸುತ್ತಿದೆ.” ಎಂದು ಧರ್ಮರಾಯ ವಿನಮ್ರನಾಗಿ ಬೇಡಿದನು.
ಧರ್ಮರಾಯನ ಧರ್ಮಬುದ್ಧಿಯ ನಿಸ್ವಾರ್ಥ ನಡೆಯನ್ನು ಕಂಡು ಶ್ರೀ ಕೃಷ್ಣ ಕಿರುನಗೆ ಬೀರಿದನು.
ಮುಂದುವರಿಯುವುದು…



















