30.5 C
Udupi
Saturday, May 9, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -160

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೬೧ ಮಹಾಭಾರತ

ಮಯಮಂಟಪದಲ್ಲಾದ ಅಪಮಾನ ದುರ್ಯೋಧನನ ಮನಸ್ಸಿನಿಂದ ಮಾಸದೆ ಉಳಿದು ಆತನ ಉಸಿರಿನೊಂದಿಗೆ ಆವರ್ತನ ರೂಪದಲ್ಲಿ ಮರುಕಳಿಸುತ್ತಾ ನೆನಪು ಎನ್ನುವುದು ಅತಿ ಘೋರವೂ ಆಗಬಲ್ಲದು ಎಂದು ತೋರಿಸುತ್ತಿತ್ತು. ಮಲಗಿದರೆ ನಿದ್ದೆ ಬಾರದು, ಉಣ್ಣಲು ಕುಳಿತರೆ ಅನ್ನ ಸೇರದು, ಯೋಚನೆಗೆ ಕುಳಿತರೆ ಬೇರೇನೂ ತಲೆಗೆ ಹತ್ತದು. ಮಾನಹರಣಕ್ಕೆ ಒಳಗಾದವನಿಗೆ ಮಾತ್ರ ಈ ಶಿಕ್ಷೆಯ ತೀವ್ರತೆ ಅರಿವಾಗುತ್ತದೆ. ಪರಿಣಾಮ ಎಲ್ಲಿಯವರೆಗೆ ಮುಟ್ಟಿತು ಎಂದರೆ ಒಂದು ದಿನ, ತೇಜೋವಧೆಯಾಗಿದೆ ನನ್ನದು, ಇನ್ನು ಬದುಕಿದ್ದರೂ ಶವ ಸಮಾನವಾದ ಈ ಶರೀರಕ್ಕೆ ಬೆಲೆ ಇಲ್ಲ. ಇನ್ನು ನಾನು ಈ ವ್ಯಥೆ ಭರಿತ ಬದುಕು ಸಾಗಿಸುವ ಬದಲು ಯುದ್ದ ಸಾರಿ ಆ ಪಾಂಡವರ ವಿರುದ್ಧ ಹೋರಾಡಿ ಅವರನ್ನು ಕೊಂದು ಸಂತೃಪ್ತನಾಗುತ್ತೇನೆ. ಇಲ್ಲಾ ಈ ದುಃಖ ತಪ್ತ ಬದುಕಿಗೆ ಇತಿಶ್ರೀ ಹಾಡಲು ದಾರಿಯಾದರೂ ಸಿಕ್ಕೀತು” ಎಂದೇ ಬಿಟ್ಟನು ದುರ್ಯೊಧನ. ಆಗ ಗಾಂಧಾರ ನರೇಶ ಮಾವ ಶಕುನಿ ಆತನನ್ನು ಸಂತೈಸುತ್ತಾ, “ಶರೀರ ಎನ್ನುವುದು ಆತ್ಮದ ಆಶಯ ಪೂರೈಕೆಗೆ ಮಾಧ್ಯಮವಾಗಿದೆ. ಅದನ್ನೇ ಕಳೆದರೆ ಮತ್ತೆನೂ ಸಾಗದು. ಹಾಗಾಗಿ ನೀನು ಪ್ರತಿಕಾರ ತೀರಿಸಲಿಕ್ಕಾದರೂ ಬದುಕಲೇ ಬೇಕು. ಅದಕ್ಕಾಗಿ ಸೂಕ್ತ ಯೋಜನೆ ರೂಪಿಸೋಣ. ದುರ್ಯೋಧನಾ, ಆತುರ ಪಡಬೇಡ ಒಂದು ಸೂಕ್ಷ್ಮವನ್ನು ಅರ್ಥ ಮಾಡಿಕೋ, ಎದುರಾಳಿ ನಮಗಿಂತ ಬಲಾಢ್ಯನಾಗಿದ್ದರೆ ಶಕ್ತಿ ಪ್ರದರ್ಶನಕ್ಕೆ ಮುಂದಾಗದೆ ಮೈತ್ರಿ ಬೆಳೆಸಬೇಕು. ಈಗ ಅರ್ಜುನ, ಭೀಮ ಅತಿ ಬಲಾನ್ವಿತರಾಗಿದ್ದಾರೆ. ಮಂತ್ರಾಸ್ತ್ರಗಳು ಅವರ ಬಳಿ ಇದೆ. ಕೃಷ್ಣನ ಸಖ್ಯ, ದ್ರುಪದನ ಸಂಬಂಧ ಅವರನ್ನು ಇನ್ನೂ ಪ್ರಬಲರನ್ನಾಗಿಸಿದೆ. ಹೀಗಿರುವಾಗ ಯುಕ್ತಿ ಮುಖೇನ ಅವರ ದೌರ್ಬಲ್ಯವರಿತು ಅದನ್ನೇ ಬಂಡವಾಳವಾಗಿಸಿ ಸಾಧನೆ ಮಾಡಬೇಕು‌. ಮಂತ್ರಕ್ಕೆ ದೇವರು ವಶವಾದರೆ, ತಂತ್ರಕ್ಕೆ ಯಾರಾದರೂ ವಿವಶರಾಗಲೇ ಬೇಕು” ಎಂದನು.

“ಅದು ಹೇಗೆ? ಕಾಯುವಷ್ಟು ವ್ಯವಧಾನ ನನ್ನಲ್ಲಿಲ್ಲ. ಏನಾದರು ಮಾಡುವುದಿದ್ದರೆ ಶೀಘ್ರಾತಿಶೀಘ್ರವಾಗಿ ನಡೆಯಲಿ. ನಿಧಾನವಾದರೆ ಈ ಮಾನಸಿಕ ವೇದನೆ ನನ್ನನ್ನು ಹಿಂಡಿ ಹೀರಿ ಅಂತ್ಯಗೊಳಿಸಿಬಿಡುತ್ತದೆ” ಎಂದು ದುರ್ಯೋಧನ ಆತುರ ತೋರಿದನು. ಆಗ ವ್ಯಂಗ್ಯದ ನಗೆ ಬೀರುತ್ತಾ ಶಕುನಿ “ಕ್ಷತ್ರಿಯರಿಗೆ ಯುದ್ದಾಹ್ವಾನನ್ನು ಹೇಗೆ ತಿರಸ್ಕರಿಸಲಾಗದೋ ಹಾಗೆಯೇ ದ್ಯೂತವೂ ಸಮಾನ ಧರ್ಮವಾಗಿ ಪುರಸ್ಕರಿಸಲೇ ಬೇಕಾದ ಪ್ರಧಾನ ಅಂಗವೇ ಆಗಿದೆ. ಧರ್ಮರಾಯ ದ್ಯೂತದ ಮರ್ಮ ಅರಿಯದಿದ್ದರೂ ಆತನಿಗಿರುವ ದೌರ್ಬಲ್ಯವೇ ದ್ಯೂತದ ಹುಚ್ಚು. ನಾನು ಅಕ್ಷ ಹೃದಯ ವಿದ್ಯೆ ಬಲ್ಲವನಾಗಿರುವುದರಿಂದ ಕಾಮಿತ ನಡೆ ಸಾಧಿಸುತ್ತಾ ದ್ಯೂತ ಆಡಬಲ್ಲೆ. ನಿನ್ನ ಪ್ರತಿನಿಧಿಯಾಗಿ ನಾನು ಆಡಿದರೆ ನಮ್ಮ ಗೆಲುವು ನಿಶ್ಚಿತ. ಧರ್ಮರಾಯ ಆತನ ಸಮಸ್ತವನ್ನೂ ಹಂತ ಹಂತವಾಗಿ ಪಣವಾಗಿರಿಸಿ ಆಡುವಂತೆ ಪ್ರೇರೆಪಿಸಿ ಎಲ್ಲವೂ ನಮ್ಮ ಸ್ವಾಧೀನವಾಗುವಂತೆ ನಾನು ಮಾಡಬಲ್ಲೆ. ಈಗ ಆತನ್ನದ್ದಾಗಿರುವ ವೈಭವಗಳೆಲ್ಲಾ ಸರಳವಾಗಿ ರಕ್ತಪಾತ, ಆಕ್ರೋಶ, ನೋವು, ವೇದನೆಗಳಿಲ್ಲದೆ ದ್ಯೂತದಾಟದಲ್ಲೇ ನಮ್ಮ ಕೈ ಸೇರಲಿದೆ ” ಎಂದು ಹೇಳುತ್ತಾ ಮಹಾತಂತ್ರವನ್ನು ರೂಪಿಸಿದ ಶಕುನಿ ಯೋಜನೆ ಸಿದ್ಧಪಡಿಸುತ್ತಾ ವಿವರಿಸಿದನು.

ಈಗ ದುರ್ಯೋಧನನ ಮನದಲ್ಲಿ ಪ್ರಶ್ನೆಯೊಂದು ಉದ್ಭವಿಸಿತು, ಅದೇನೆಂದರೆ ದ್ಯೂತದಾಟಕ್ಕೆ ಧರ್ಮರಾಯನನ್ನು ನಿಮಂತ್ರಿಸುವುದು ಹೇಗೆ? ಶಕುನಿ ಅದಕ್ಕೂ ದಾರಿ ತೋರಿದನು. “ಮಗೂ, ನಿನ್ನ ಅಪ್ಪ ಧೃತರಾಷ್ಟ್ರ ಹಸ್ತಿನೆಯ ಮಹಾರಾಜ, ಸಂಬಂಧದಲ್ಲಿ ದೊಡ್ಡಪ್ಪ. ಆತನ ಆಮಂತ್ರಣ ಧರ್ಮರಾಯನಿಗೆ ಮಹತ್ತರ ಮೌಲ್ಯವುಳ್ಳಾದಾಗುತ್ತದೆ. ನಿರಾಕರಿಸದೆ ಖಂಡಿತಾ ಬರುತ್ತಾನೆ. ಒಮ್ಮೆ ನಮ್ಮ ದಾಳಕ್ಕೆ ಆತ ಸಿಲುಕಿದರೆ ಮತ್ತೆ ನಮ್ಮ ಹಿಡಿತದೊಳಗಾಗಿ ಅಸಹಾಯಕನಾಗುತ್ತಾನೆ. ಮತ್ತೇನಿದ್ದರೂ ಆತನ ಅದೃಷ್ಟ ಅದೃಶ್ಯವಾಗಲಿದೆ.” ಎಂದು ಶಕುನಿ ಗಹಗಹಿಸಿ ನಕ್ಕನು.

ಷಡ್ಯಂತ್ರವನ್ನು ಕಾರ್ಯರೂಪಕ್ಕಿಳಿಸಲು ಮೊದಲ ಹೆಜ್ಜೆಯಾಗಿ ಅಂಧರಾಜ ಧೃತರಾಷ್ಟ್ರನನ್ನು ದುರ್ಯೋಧನ ಮತ್ತು ಶಕುನಿ ಏಕಾಂತವಾಗಿ ಸಂಧಿಸಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page