
ಬೆಂಗಳೂರು: ರಾಜ್ಯ ಸರ್ಕಾರವು ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೂಪ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದ್ದು ಇದೀಗ ಇದನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ಮಲ್ಟಿಪ್ಲೆಕ್ಸ್‌ಗಳ ಪರವಾಗಿ ಮುಕುಲ್ ರೋಹ್ಟಗಿ ವಾದಿಸಿ, ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ‍್ಯ ಉಲ್ಲಂಘನೆಯಾಗಿದೆ. 2017ರಲ್ಲಿಯೂ ಸರ್ಕಾರ ಇದೇ ರೀತಿಯ ಆದೇಶ ಹೊರಡಿಸಿದ್ದಾಗ ಹೈಕೋರ್ಟ್ ರದ್ದುಪಡಿಸಿತ್ತು. ಟಿಕೆಟ್ ಖರೀದಿಸಿ ಚಿತ್ರ ನೋಡುವುದು ಗ್ರಾಹಕನಿಗೆ ಬಿಟ್ಟದ್ದು, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವಂತಿಲ್ಲ ಎಂದು ವಾದ ಮಂಡಿಸಿದರು.
ಹೊಂಬಾಳೆ ಫಿಲಂಸ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿ, ಜಿಎಸ್‌ಟಿ ಹೊರತುಪಡಿಸಿದ ಟಿಕೆಟ್ ದರ 200 ರೂ. ನಿಗದಿಪಡಿಸಲಾಗಿದೆ. ಇದು ವಿವೇಚನೆಯಿಲ್ಲದೇ ಸರ್ಕಾರ ಕೈಗೊಂಡ ನಿರ್ಧಾರ. ಸಿನಿಮಾ ನಿರ್ಮಿಸಲು ಎಷ್ಟೆಲ್ಲಾ ಶ್ರಮ, ಬಂಡವಾಳ ಬೇಕಾಗುತ್ತದೆ. ಅಂಕಿ ಅಂಶ ಸಂಗ್ರಹಿಸದೇ ಸರ್ಕಾರದ ಸ್ವಇಚ್ಚೆಯ ನಿರ್ಧಾರವಾಗಿದೆ ಎಂದು ವಾದಿಸಿದ್ದಾರೆ.
ಆದರೆ ಇದರ ನಡುವೆ ನಿರ್ಮಾಪಕಿ ಪ್ರಿಯಾ ಹಾಸನ್, ನಿರ್ಮಾಪಕರಾದ ಎ ಗಣೇಶ್, ಚಿಂಗಾರಿ ಮಹದೇವ್ ಸಿನಿಮಾ ಟಿಕೆಟ್ ದರ 200 ರೂ. ನಿಗದಿ ಮಾಡಿರೋದು ಒಳ್ಳೆಯ ನಿರ್ಧಾರ ಅಂತ ಹೇಳಿದ್ದು ಇದಲ್ಲದೇ ಕೋರ್ಟ್ ಮೆಟ್ಟಿಲೇರಿರುವವರು ಅರ್ಜಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ಫಿಲ್ಮ್ ಚೇಂಬರ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.













