
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನದ ಸಮಯವನ್ನು ಇನ್ನೊಂದು ಗಂಟೆ ಹೆಚ್ಚಿಸಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.
ಇದುವರೆಗೆ ಪ್ರತಿದಿನ ಮಧ್ಯಾಹ್ನ 1.30ರಿಂದ 3.30ರವರೆಗೆ ಭಕ್ತರಿಗೆ ದರ್ಶನಕ್ಕೆ ವಿರಾಮ ನೀಡಲಾಗುತ್ತಿತ್ತು. ಆದರೆ ಹೊಸ ವೇಳಾಪಟ್ಟಿಯ ಅನ್ವಯ ಇನ್ನುಮುಂದೆ ಮಧ್ಯಾಹ್ನ 2ರಿಂದ 3 ಗಂಟೆಯವರೆಗೆ ಮಾತ್ರ ದರ್ಶನ ಸ್ಥಗಿತವಾಗಲಿದೆ. ಇದರೊಂದಿಗೆ ಭಕ್ತರು ಬೆಳಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8.30ರವರೆಗೆ ದೇವರ ದರ್ಶನ ಪಡೆಯಬಹುದಾಗಿದೆ.
ಇನ್ನೂ ಮಹಾಮಂಗಳಾರತಿ ನಡೆಯುವ ವೇಳೆಯಲ್ಲಿ ಮಾತ್ರ ಕೆಲಕಾಲ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ ಇರಲಿದೆ ಎಂದು ತಿಳಿಸಲಾಗಿದೆ. ಮೇ 10ರಿಂದಲೇ ಈ ಪರಿಷ್ಕೃತ ವ್ಯವಸ್ಥೆ ಜಾರಿಗೆ ಬಂದಿದ್ದು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಈ ಮಾಹಿತಿ ನೀಡಿದ್ದಾರೆ.
























