
ಬೆಂಗಳೂರು : ಕೇಂದ್ರ ಸರ್ಕಾರವು ಬರ ಪರಿಹಾರದಲ್ಲಿ ರಾಜ್ಯ ಸರಕಾರಕ್ಕೆ ತೀವ್ರ ಅನ್ಯಾಯ ಮಾಡಿದ್ದು, ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,172 ಕೋಟಿ ರು.ಗಳಿಗೆ ಮನವಿ ಸಲ್ಲಿಸಿದ್ದರೆ ಕೇಂದ್ರ ಸರಕಾರ ಶೇ.19ರಷ್ಟು (3,498 ಕೋಟಿ ರು.) ಹಣ ಮಾತ್ರ ಬಿಡುಗಡೆ ಮಾಡಿದೆ. ಇದರಿಂದ ರಾಜ್ಯದ ಜನತೆಗೆ ಕೇಂದ್ರ ಬಿಜೆಪಿ ಸರ್ಕಾರವು ಮತ್ತೊಮ್ಮೆ ಖಾಲಿ ಚೊಂಬು ನೀಡಿದೆ’ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೆ, ‘ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ 35,162 ಕೋಟಿ ರು. ಬರ ನಷ್ಟ ಉಂಟಾಗಿದ್ದು, ಈ ಪೈಕಿ ಎನ್‌ಡಿಆರ್‌ಎಫ್ ನಿಯಮಗಳ ಪ್ರಕಾರ 18,171 ಕೋಟಿ ರು.ಗಳ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರದಿಂದ 14,674 ಕೋಟಿ ರು. ಹಣ ಬಿಡುಗಡೆ ಬಾಕಿಯಿದೆ. ಈ ನಡುವೆ ಸೆಪ್ಟೆಂಬರ್‌ನಿಂದ ಈವರೆಗೆ ಬರ ನಷ್ಟ 50 ಸಾವಿರ ಕೋಟಿ ರು.ವರೆಗೆ ತಲುಪಿದೆ. ಹೀಗಾಗಿ ಬಾಕಿ ಇರುವ ಪರಿಹಾರದ ಜತೆಗೆ ಹೆಚ್ಚುವರಿ ಪರಿಹಾರಕ್ಕಾಗಿಯೂ ಹೋರಾಟ ಮುಂದುವರೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆಯನ್ನು ನೀಡಿದರು.