
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಸೂಟ್ಕೇಸ್ ಗೆ ತುಂಬಿಟ್ಟಿದ್ದ ಪ್ರಕರಣ ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನದಲ್ಲಿರುವ ಆರೋಪಿ ಪತಿ ರಾಕೇಶ್ ತನಿಖೆ ವೇಳೆ ಪತ್ನಿ ಗೌರಿಯ ನಡವಳಿಕೆಯಿಂದ ಬೇಸರಗೊಂಡು ಕೊಲೆ ಮಾಡಿದ್ದಾಗಿ ನಿಜ ಒಪ್ಪಿಕೊಂಡಿದ್ದಾನೆ.
ಗೌರಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದೆ. ಗೌರಿಯವರ ತಾಯಿ ಹಾಗೂ ತಮ್ಮ ಮದುವೆಗೆ ವಿರೋಧಿಸಿದ್ದರು. ಮದುವೆಯಾದ ಆರಂಭದ ದಿನಗಳಲ್ಲಿ ನನ್ನ ಕುಟುಂಬದವರ ಜೊತೆಗೆ ಗೌರಿ ಹೊಂದಿಕೊಳ್ಳದೆ ಗಲಾಟೆ ಮಾಡುತ್ತಿದ್ದಳು. ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದ ನಾವು ಬೆಂಗಳೂರಿಗೆ ಹೋಗಿ ಅಲ್ಲಿ ಕೆಲಸ ಮಾಡೋಣ ಎಂದು ಪದೇಪದೇ ಆಕೆ ಹೇಳುತ್ತಿದ್ದು ಹೀಗಾಗಿ ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಿದ್ದೆವು.
ನಾನು ಮನೆಯಿಂದಲೇ ಕಂಪನಿಯ ಕೆಲಸ ಮಾಡುತಿದ್ದೆ. ಆದರೆ ಪತ್ನಿಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಆಕೆಗೆ ಕೆಲಸ ಸಿಗಲು ತಾನು ಸಹಾಯ ಮಾಡಿದ್ದರೂ ಕೂಡ ತನಗೆ ಸಹಾಯ ಮಾಡಿಲ್ಲ ಎಂಬುದಾಗಿ ಹೇಳಿ ಪದೇ ಪದೇ ಗಲಾಟೆ ಮಾಡುತ್ತಿದ್ದಳು.
ಮಾರ್ಚ್ 26ರಂದು ಗಲಾಟೆ ನಡೆದಿದ್ದು ಪತ್ನಿ ಚಾಕುವಿನಿಂದ ಹಲ್ಲೆ ನಡೆಸಿದ್ದಳು. ನನ್ನ ಕುತ್ತಿಗೆಗೆ ಚಾಕು ಬಿದ್ದು ಗಾಯವಾಗಿದ್ದು ನಂತರ ಅದೇ ಚಾಕು ತೆಗೆದುಕೊಂಡು ಸ್ವಯಂ ರಕ್ಷಣೆಗಾಗಿ ಆಕೆಗೆ ಚುಚ್ಚಿ ಕೊಲೆ ಮಾಡಿದೆ. ಕೊಲೆ ಮಾಡಿದ ಬಳಿಕ ಮೃತ ದೇಹವನ್ನು ಹೊರಗೆ ಸಾಗಣೆ ಮಾಡಲು ಪ್ರಯತ್ನಿಸಿದ್ದು ಅದು ಸಾಧ್ಯವಾಗದೆ ಇದ್ದಾಗ ಟ್ರಾಲಿ ಬ್ಯಾಗ್ ನಲ್ಲಿ ತುಂಬಿಟ್ಟು ಪುಣೆಗೆ ಪರಾರಿಯಾಗಿದ್ದೆ. ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆ ಎಂದು ಆರೋಪಿಯು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.





















