
ಯಾದಗಿರಿ: ಸಿಐಡಿ ಅಧಿಕಾರಿಗಳ ತಂಡವು ನಗರ ಠಾಣೆಯ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ಗುರುವಾರ ಅವರ ಕುಟುಂಬಸ್ಥರಾದ ಪರಶುರಾಮ್ ಅವರ ತಂದೆ ಜನಕಮುನಿ, ಸಹೋದರ ಹನುಮಂತ, ಮಾವ ವೆಂಕಟಸ್ವಾಮಿ ಹಾಗೂ ಸ್ನೇಹಿತ ಯರ್ರಿಸ್ವಾಮಿ ಮತ್ತಿತರರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಕುಟುಂಬಸ್ಥರು ಯಾದಗಿರಿಯ ಡಿವೈಎಸ್‌ಪಿ ಕಚೇರಿಗೆ ಆಗಮಿಸಿ ತಮಗೆ ತಿಳಿದಿರುವ ಮಾಹಿತಿ ನೀಡಿದ ಬಳಿಕ ಸಿಐಡಿ ತಂಡವು ಅಲ್ಲಿಂದ ನೇರವಾಗಿ ಎಸ್‌ಪಿ ನಿವಾಸ ಸಮೀಪದ ಪೊಲೀಸ್ ವಸತಿ ಗೃಹದ ಪರಶುರಾಮ್ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಇಲಾಖಾ ರಿವಾಲ್ವರ್(ಬಂದೂಕು) ವಾಕಿಟಾಕಿ, ಎರಡು ಮೊಬೈಲ್‌ಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ನೆಲದ ಮೇಲೆ ಬಿದ್ದಿದ್ದ ರಕ್ತದ ಕಲೆ ಹಾಗೂ ಮತ್ತಿತರ ಕೆಲವೊಂದು ವಸ್ತುಗಳನ್ನು ಪ್ರಯೋಗಾಲಯ (ಎಫ್ಎಸ್‌ಎಲ್) ಗೆ ಕಳುಹಿಸಿದ್ದಾರೆ.
ಮನೆ ಪರಿಶೀಲನೆ ವೇಳೆ ಸುಮಾರು ₹7.33 ಲಕ್ಷ ನಗದು ಹಣ ಹಾಗೂ ಶಾಸಕರ ಹೆಸರಿನ ಖಾಲಿ ಲೆಟರ್ ಹೆಡ್ ಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸ್ವಗ್ರಾಮದಲ್ಲಿ ತಾಯಿ ಹೆಸರಲ್ಲಿದ್ದ ಪ್ಲಾಟ್ ಮಾರಿ ಹಣ ಪಡೆದಿದ್ದರು ಎನ್ನಲಾಗಿದೆ. ಜೊತೆಗೆ, ಕಾರಟಗಿಯಲ್ಲಿರುವ ತಮ್ಮ ಸ್ನೇಹಿತರ ಜೊತೆ ಮಾತನಾಡಿದ್ದ ಪರಶುರಾಮ್, ₹2 ಲಕ್ಷ ಹಣದ ಸಹಾಯ ಕೇಳಿದ್ದರು. ಒಂದು ವಾರದ ನಂತರ ಹಣ ಕೊಡುವುದಾಗಿ ಸ್ನೇಹಿತ ಹೇಳಿದಾಗ, ಅಷ್ಟರಲ್ಲೇ ನೌಕರಿ ಹೋಗುತ್ತದೆ ಎಂದಿದ್ದರು ಎಂದು ಕುಟುಂದ ಮೂಲಗಳು ತಿಳಿಸಿವೆ.























































































