
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮ ಪ್ರತಿಮೆಯನ್ನು ಮರು ಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಉಡುಪಿಯ ಉದಯಶೆಟ್ಟಿ ಮುನಿಯಲು ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಮಂಗಳವಾರ ಈ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆಯನ್ನು ನಡೆಸಿ ಅರ್ಜಿದಾರರ ಪರ ವಕೀಲರು ಈ ಮೊದಲೇ ನ್ಯಾಯಾಲಯದ ನಿರ್ದೇಶನದಂತೆ 5 ಲಕ್ಷ ರೂ ಠೇವಣಿ ಇಟ್ಟಿರುವುದನ್ನು ದಾಖಲಿಸಿಕೊಂಡ ನ್ಯಾಯ ಪೀಠವು ರಾಜ್ಯ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 10ಕ್ಕೆ ಮುಂದೂಡಿತು.



















