ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ವಿರುದ್ಧ ಕೇಸ್ ದಾಖಲಿಸಲು ಹೈಕೋರ್ಟ್ ಮಾರ್ಗಸೂಚಿ

ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಯಾಂತ್ರಿಕವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ಒಂದೇ ಪೋಸ್ಟ್‌ಗೆ ಹಲವು ಪ್ರಕರಣ ದಾಖಲಿಸುವುದು ಹಾಗೂ ಪೊಲೀಸ್ ಅಧಿಕಾರ ದುರುಪಯೋಗ ತಡೆಯಲು ಕರ್ನಾಟಕ ಹೈಕೋರ್ಟ್ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಅಪರಾಧ ಪ್ರಕರಣಗಳ ದಾಖಲಾತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅನಗತ್ಯ ಬಂಧನ ತಡೆಯುವ ಕಾನೂನು ಕ್ರಮಗಳ ಕುರಿತು ಪೊಲೀಸ್ ಅಧಿಕಾರಿಗಳಿಗೆ ಅರಿವು ಮೂಡಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನಿರೀಕ್ಷಕರಿಗೆ (ಡಿಜಿ-ಐಜಿಪಿ) ಸೂಚಿಸಿದೆ.
ಸುಪ್ರೀಂ ಕೋರ್ಟ್‌ನ ಸತೇಂದರ್ ಕುಮಾರ್ ಅಂಟಿಲ್ ಮತ್ತು ತೆಲಂಗಾಣ ಹೈಕೋರ್ಟ್‌ನ ನಲ್ಲಾ ಬಾಲು ಪ್ರಕರಣಗಳ ಮಾರ್ಗಸೂಚಿಗಳನ್ನೂ ಈ ನಿರ್ದೇಶನಗಳೊಂದಿಗೆ ಪಾಲಿಸಬೇಕೆಂದು ನ್ಯಾಯಾಲಯ ತಿಳಿಸಿದೆ.
ಬೆಂಗಳೂರಿನ ನಿವಾಸಿ ಸಂದೀಪ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಆದೇಶ ಹೊರಬಿದ್ದಿದೆ. ಒಂದೇ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಸಂಬಂಧಿಸಿ ಏಳು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ತಮ್ಮ ವಿರುದ್ಧದ ಪ್ರಕರಣಗಳನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಶಹನವಾಜ್ ಎಂಬವರು ದೂರು ನೀಡಿದ್ದರು. ಯುವಕರ ಗುಂಪೊಂದು ಮಹಿಳೆಯನ್ನು ಹಿಂಬಾಲಿಸಿದ ಘಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣದ ಪೋಸ್ಟ್ ಈ ದೂರಿಗೆ ಕಾರಣವಾಗಿತ್ತು.
ಸಾಮಾಜಿಕ ಜಾಲತಾಣದ ಪೋಸ್ಟ್ ಅಥವಾ ಹೇಳಿಕೆಗೆ ಸಂಬಂಧಿಸಿದ ದೂರು ಬಂದಾಗ, ಪೊಲೀಸರು ಮೊದಲು ಆರೋಪಗಳ ಸತ್ಯಾಸತ್ಯತೆ ಮತ್ತು ಅವುಗಳಲ್ಲಿ ಅಪರಾಧದ ಕಾನೂನು ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಒಂದೇ ಪೋಸ್ಟ್‌ಗೆ ಸಂಬಂಧಿಸಿ ಈಗಾಗಲೇ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ದೂರು ಬಂದ ಮಾತ್ರಕ್ಕೆ ಹೊಸ ಪ್ರಕರಣ ದಾಖಲಿಸಬಾರದು ಎಂದೂ ಸ್ಪಷ್ಟಪಡಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 173(3)ರ ಅಡಿಯಲ್ಲಿ ಅವಕಾಶವಿರುವ ಪ್ರಕರಣಗಳಲ್ಲಿ, ನಿಗದಿತ ಷರತ್ತು ಮತ್ತು ಕಾಲಮಿತಿಯಂತೆ ಪ್ರಾಥಮಿಕ ವಿಚಾರಣೆ ನಡೆಸಬೇಕು. ಆದರೆ, ತಕ್ಷಣ ಎಫ್‌ಐಆರ್ ದಾಖಲಿಸಬೇಕಾದ ಅರಿವಿಗೆ ಬರುವ ಅಪರಾಧಗಳಲ್ಲಿ ವಿಚಾರಣೆಯ ನೆಪದಲ್ಲಿ ವಿಳಂಬ ಮಾಡುವಂತಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ.
ಅದೇ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುವ ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಮಾತ್ರ ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353(2)ರ ಅಡಿಯಲ್ಲಿ ಪ್ರಕರಣ ದಾಖಲಿಸಬಾರದು. ಸಂಬಂಧಪಟ್ಟ ಹೇಳಿಕೆಯಲ್ಲಿ ಕಾನೂನಿನ ಪ್ರಕಾರ ಅಪರಾಧದ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಇನ್ನು, ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂಬ ಕಾರಣಕ್ಕೆ ಆರೋಪಿಯನ್ನು ಸ್ವಯಂಚಾಲಿತವಾಗಿ ಬಂಧಿಸುವಂತಿಲ್ಲ. ಬಂಧನಕ್ಕೆ ಸಂಬಂಧಿಸಿದ BNSS ಸೆಕ್ಷನ್ 35ರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಈ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ನೋಡಿಕೊಳ್ಳಲು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದು ಮತ್ತು ಅನಗತ್ಯ ಪ್ರಕರಣ ಹಾಗೂ ಬಂಧನಗಳನ್ನು ತಡೆಯುವುದು ಈ ನಿರ್ದೇಶನಗಳ ಪ್ರಮುಖ ಉದ್ದೇಶವಾಗಿದೆ.






















