
ಮೈಸೂರು: ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ. ಈ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಜ್ಯೋತಿಷ್ಯಕ್ಕಿಂತ ದೇವರನ್ನು ನಂಬುತ್ತೇನೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಘಟನೆಗೆ ಅನಗತ್ಯ ಅರ್ಥ ಕಲ್ಪಿಸಬಾರದು ಎಂದು ಮನವಿ ಮಾಡಿದರು. ಜಟ್ಟಿ ಕಾಳಗ ರದ್ದಾದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದು, ಒಂದೆರಡು ದಿನಗಳಲ್ಲಿ ವಿವರವಾಗಿ ಮಾತನಾಡುವುದಾಗಿ ತಿಳಿಸಿದರು.
ನಮ್ಮ ಮನೆಯ ವಿಧಿವಿಧಾನಗಳು ನಿಗದಿತ ಮುಹೂರ್ತದಲ್ಲೇ ನಡೆಯುತ್ತವೆ. ಮುಹೂರ್ತ ಮೀರಿದ ಬಳಿಕ ಯಾವುದೇ ಕಾರ್ಯ ಮಾಡುವುದಿಲ್ಲ. ಹೀಗಾಗಿ ಜಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಿದ್ದೇವೆ. ಈ ವಿಚಾರದಲ್ಲಿ ಜ್ಯೋತಿಷಿಗಳ ಸಲಹೆ ಪಡೆದಿಲ್ಲ. ಎಲ್ಲವನ್ನೂ ದೇವರ ಮೇಲೆ ಭಾರ ಹಾಕಿದ್ದು, ನನಗೆ ಯಾವುದೇ ಆತಂಕವಿಲ್ಲ ಎಂದು ಹೇಳಿದರು.
ಇದೇ ವೇಳೆ ದಸರಾ ಅಂಬಾರಿ ಹೊತ್ತ ಆನೆ ಪ್ರಶಾಂತ್ ಕುರಿತು ಮಾತನಾಡಿದ ಅವರು, ಈ ಬಾರಿ ಆನೆ ಅಂಬಾರಿ ಕಟ್ಟಿಸಿಕೊಂಡು ಹೇಗೆ ನಡೆಯಲಿದೆ ಎಂಬ ಬಗ್ಗೆ ಆತಂಕವಿತ್ತು. ಆದರೆ, ಎಲ್ಲ ಆತಂಕಗಳನ್ನು ಮೀರಿ ಪ್ರಶಾಂತ್ ಉತ್ತಮವಾಗಿ ಅಂಬಾರಿ ಹೊತ್ತಿದ್ದಾನೆ. ಇದರಿಂದ ಬಹಳ ಸಂತೋಷವಾಗಿದ್ದು, ಚಾಮುಂಡಿ ತಾಯಿ ಎಲ್ಲರಿಗೂ ಆಶೀರ್ವಾದ ಮಾಡಿದ್ದಾಳೆ ಎಂಬ ಭಾವನೆ ಮೂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.






















