ತುಳಿದು ನಡೆವವರ ನಡುವೆ, ಮತ್ತೆ ಚಿಗುರಿ ಎದ್ದು ನಿಲ್ಲುವ ಗರಿಕೆಯಂತೆ ಬದುಕಾಗಬೇಕು…
ಪ್ರಜ್ವಲಾ ಶೆಣೈ,ಕಾರ್ಕಳ

ಬದುಕಿನ ಬಗ್ಗೆ ಹಲವು ಕನಸುಗಳನ್ನು ಹೊತ್ತು ಮುಂದೆ ಸಾಗುತ್ತಿರುವಾಗ ನಮ್ಮ ಹೆಜ್ಜೆಗೆ ಜೊತೆಯಾಗಿ ಸಾಗುವವರು ಹಲವರು,ನಮ್ಮ ಹೆಜ್ಜೆಗಿಂತಲೂ ನೂರು ಹೆಜ್ಜೆ ಮುಂದೆಯಿದ್ದು ನಮ್ಮನ್ನು ಹಿಂದಿಕ್ಕಿ ನಾಗಾಲೋಟದಲ್ಲಿ ಸಾಗುವವರು ಇನ್ನೂ ಕೆಲವರು,ಆಗಷ್ಟೇ ಚಿಗುರಿ ನಿಧಾನ ನಡಿಗೆಯಲ್ಲಿ ನಡೆದು ಆಗಸದ ಕನಸನ್ನು ಕಾಣುವವರು ಕೆಲವು ಮಂದಿ.ಇದೆಲ್ಲದರ ನಡುವೆ ಹೆಜ್ಜೆ ಇಡಬೇಕು ಎಂದು ಹೊರಟಾಗಲೆಲ್ಲ ಬರುವ ಆಪತ್ತು ತೊಂದರೆಗಳಿಂದ ಬಳಲಿ ಇದ್ದಲ್ಲಿಂದ ಕದಲದೇ ತಟಸ್ಥವಾಗಿ ಇರುವವರು ಅದೆಷ್ಟೋ ಮಂದಿ.ಹಾಗಾದರೆ ನಮ್ಮ ಹೆಜ್ಜೆ ಹೇಗಿರಬೇಕು? ದೃಢವಾದ ಹೆಜ್ಜೆಯಿಡಲು ಮನಸ್ಸಿಗೆ ಒಂದು ಗಟ್ಟಿತನ ಬೇಕಲ್ಲವೇ? ಅದು ಸಿಗುವುದಾದರೂ ಎಲ್ಲಿಂದ? ಹೀಗೆ ಹಲವು ಪ್ರಶ್ನೆಗಳು ಮನಸ್ಸಿನ ಗರ್ಭದಲ್ಲಿ ಮೊಳಕೆಯೊಡೆಯದೆ ಇರಲಾರದು.
ಕಲ್ಲು ಮುಳ್ಳುಗಳ ದಾರಿ..
ನಾವು ಸಾಗುವ ದಾರಿಯಲ್ಲಿ ಕಲ್ಲು ಮುಳ್ಳುಗಳಿದ್ದರೆ ಸಾಮಾನ್ಯವಾಗಿ ನಾವು ಆ ದಾರಿಯನ್ನು ಆಯ್ಕೆ ಮಾಡಿ ಕೊಳ್ಳುವುದಿಲ್ಲ.ಬೇರೆ ಯಾವ ದಾರಿ ಇದೆ ಎಂದು ಹುಡುಕುತ್ತೇವೆ.ಅದೇ ರೀತಿ ನಮ್ಮ ಜೀವನದಲ್ಲೂ ನಮಗೆ ಮುಳ್ಳಾದ ವ್ಯಕ್ತಿಗಳು ಇದ್ದೇ ಇರುವರು.ಇಂತಹವರನ್ನು ಹತ್ತಿರವಿರಿಸಿಕೊಂಡರೆ ಸದಾ ಹೃದಯಕ್ಕೇ ಇರಿಯುತ್ತಲೆ ಬದುಕು ಸಾಗುತ್ತದೆ. ಅಕ್ಕಿಯಲ್ಲಿ ಸಿಕ್ಕ ಕಲ್ಲನ್ನು ಪಕ್ಕಕ್ಕೆ ಎಸೆಯುತ್ತೇವೆ,ಹಣ್ಣಿನಲ್ಲಿ ಸಿಕ್ಕ ಬೀಜವನ್ನು ಹೊರಗೆ ಎಸೆಯುತ್ತೇವೆ.ಆದರೆ ನಮ್ಮ ಜೊತೆಗೆ ಇದ್ದು ನಮ್ಮ ದಾರಿಗೆ ಅಡ್ಡಿಯಾಗುವವರನ್ನು ನಾವೇಕೆ ಸಹಿಸಿಕೊಂಡು ಇರುತ್ತೇವೆ? ನಮ್ಮ ಪ್ರತಿ ನಡೆಯಲ್ಲೂ ಆಪತ್ತನ್ನು ಸೃಷ್ಟಿಸುವವರನ್ನು ನಾವು ದೂರವಿಟ್ಟರೆ ದಾರಿ ಸುಗಮವಾಗಿ ಸಾಗುವುದು. ಕಲ್ಲು,ಮುಳ್ಳು ದಾರಿಯಲ್ಲಿ ನಡೆದರೆ ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ. ನಮ್ಮ ಮನಸ್ಸಿನ ದೃಢತೆಯನ್ನು ಕುಗ್ಗಿಸಿ ದುರ್ಬಲರನ್ನಾಗಿ ಮಾಡುವ ಮಂದಿ ನಮ್ಮ ನಡುವೆಯೇ ಇರುತ್ತಾರೆ.ಆದರೆ ಇದ್ಯಾವುದಕ್ಕೂ ಕುಗ್ಗದೆ ,ಅಂತಹವರ ಬಗ್ಗೆ ಯಾವ ದೂರೂ ಹೇಳದೆ,ಚರ್ಚೆಯು ಮಾಡದೇ ಒಂದು ಹೆಜ್ಜೆ ಹಿಂದಕ್ಕೆ ಇರಿಸಿ ನಾವು ಸಾಗುವ ದಿಕ್ಕನ್ನು ಬದಲಾಯಿಸಬೇಕು.
ಕುಗ್ಗಿಸುವರ ಮುಂದೆ ನುಗ್ಗಿ ನಡೆ..
ಬಗ್ಗಿದವರಿಗೆ ಎರಡು ಗುದ್ದು ಜಾಸ್ತಿ ಎನ್ನುವ ಗಾದೆ ಮಾತಿನಂತೆ ಕೆಲವೊಮ್ಮೆ ಬದುಕಿನಲ್ಲಿ ಅತೀ ಹೆಚ್ಚು ಬಾಗುವುದು ಕೂಡ ನಮ್ಮ ದುರ್ಬಲತೆಯ ಪ್ರತೀಕ.ಅತಿ ವಿನಯಂ ಧೂರ್ತ ಲಕ್ಷಣಂ ಎಂಬಂತೆ ಅತಿಯಾದ ವಿನಯತೆಯನ್ನು ನಮ್ಮ ಬಲಹೀನತೆಯೆಂದುಕೊಳ್ಳುವವರು ಇರುವರು.ನಾವು ಸಾಗುವ ದಾರಿಯಲ್ಲಿ ನಮಗೆ ಅಡ್ಡಿ ಪಡಿಸಲೆಂದೇ ಬರುವ ವ್ಯಕ್ತಿಗಳನ್ನು ಎದುರು ಹಾಕಿಕೊಂಡು ನಮ್ಮ ಮನಸ್ಸೆಂಬ ಕೊಳವನ್ನು ರಾಡಿ ಮಾಡಿಕೊಳ್ಳುವ ಬದಲು ಅಂತಹ ವ್ಯಕ್ತಿಗಳಿಂದ ಒಂದು ಹೆಜ್ಜೆ ಹಿಂದೆ ಸರಿದು ಮುಂದೆ ಸಾಗುವ ಛಾತಿ ನಮ್ಮದಾಗಬೇಕು.
ಆಯ್ಕೆ ನಮ್ಮದಾದರೆ ಗೆಲುವು ನಮ್ಮದು…
ನಮ್ಮ ಗುರಿ ತಲುಪ ಬೇಕಾದರೆ ನಮಗೆ ಹಲವಾರು ಆಯ್ಕೆಗಳಿರುತ್ತವೆ.ನಾವು ಯಾವುದನ್ನು ಆಯ್ದುಕೊಳ್ಳುತ್ತೇವೆ ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ನಾವು ಒಂದು ನಿರ್ದಿಷ್ಟ ಸ್ಥಳಕ್ಕೆ ತಲುಪಬೇಕು ಎಂದು ಕೊಳ್ಳೋಣ.ಮೊದಲನೇ ಮಾರ್ಗ ಸುಗಮವಾಗಿದೆ,ಆದರೆ ಆ ದಾರಿಯಲ್ಲಿ ಒಂದು ನದಿ ಸಿಗುವುದು. ಆ ನದಿಯನ್ನು ದಾಟಿ ಹೋಗಲು ಈಜಿ ದಡ ಸೇರಬೇಕು ಇಲ್ಲವೇ ದೋಣಿಯನ್ನು ಬಳಸಿ ನದಿ ದಾಟಬೇಕು.ಇನ್ನೊಂದು ಮಾರ್ಗವಿದೆ,ಸಾಗುವಾಗ ಅಲ್ಲಿ ನದಿ ಸಿಗುವುದಿಲ್ಲ.ಆದರೆ ಅಲ್ಲೊಂದು ಕಾಡಿದೆ.ಅಲ್ಲಿ ಕ್ರೂರ ಪ್ರಾಣಿಗಳು ಇರುತ್ತವೆ ಅದೆಲ್ಲವನ್ನೂ ಎದುರಿಸಿ ನಿಗದಿತ ಸ್ಥಳಕ್ಕೆ ತಲುಪಬಹುದು.ಈಗ ನಮ್ಮ ಆಯ್ಕೆ ಯಾವುದು? ನಮ್ಮ ಆಯ್ಕೆ ಸೂಕ್ತವಾಗಿದ್ದರೆ ನಮ್ಮ ಗುರಿಯನ್ನು ಶೀಘ್ರವಾಗಿ
ತಲುಪಬಹುದು.ನದಿಯ ಮಾರ್ಗ ಕಂಡುಕೊಂಡರೆ ಸ್ವಲ್ಪ ಅಪಾಯ ಕಡಿಮೆ ಎಂದು ಅನ್ನಿಸುವುದು. ಅದೇ ತಿಳಿದು ತಿಳಿದು ಕಾಡಿನ ಕ್ರೂರ ಪ್ರಾಣಿಗಳಿಗೆ ಬಲಿ ಯಾಗುವೆ ಎನ್ನುವವರಿಗೆ ಏನು ಹೇಳುವುದು.ನಮ್ಮ ಅವನತಿಗೆ ನಾವೇ ರತ್ನಗಂಬಳಿ ಹಾಸಿ ಕರೆದಂತೆ.ಈ ಸನ್ನಿವೇಶಗಳು ನಮ್ಮ ಜೀವನಕ್ಕೂ ಪ್ರಸ್ತುತ ಅನ್ನಿಸಲಾರದೇ ? ಗೆಲುವು ನಮ್ಮದಾಗ ಬೇಕಾದರೆ ನಮ್ಮ ಆಯ್ಕೆ ಎಂದಿಗೂ ಸರಿಯಾಗಿರಬೇಕು.ಆಗ ಮಾತ್ರ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ.ತುಳಿದು ನಡೆವವರ ನಡುವೆ ಮತ್ತೆ ಚಿಗುರಿ ಎದ್ದು ನಿಲ್ಲುವ ಗರಿಕೆಯಂತೆ ನಮ್ಮ ಬದುಕನ್ನು ರೂಪಿಸಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೊಂದು ಬೆಲೆ,ಜೀವನಕ್ಕೊಂದು ನೆಲೆ. ನಮ್ಮ ಪ್ರತಿ ಹೆಜ್ಜೆಯಲ್ಲೂ ಕುಗ್ಗಿಸುವ ಮನಸ್ಥಿತಿಯವರು ಎದುರಾದಾಗ ಅಂತಹವರಿಂದ ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಸಾಗುವ ದಿಕ್ಕನ್ನು ಬದಲಾಯಿಸಿ ಬದುಕನ್ನು ಸುಂದರವಾಗಿಸೋಣವೇ?…
