
ಮಂಡ್ಯ: ಕೇಂದ್ರ ಬೃಹತ್ ಕೈಗಾರಿಕಾ ಸಚಿವ, ಮಂಡ್ಯ ಸಂಸದ ಹೆಚ್‌ಡಿ ಕುಮಾರಸ್ವಾಮಿ ಅವರು ನಾಗಮಂಗಲದ ಗಲಭೆ ಪೀಡಿತ ಸ್ಥಳಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗಣೇಶ ಕೂರಿಸಿದವರನ್ನೇ ಎಫ್‌ಐಆರ್‌ನಲ್ಲಿ ಎ1 ಆರೋಪಿಯನ್ನಾಗಿ ಮಾಡಿದ್ದೀರಾ. ಇದು ನಿಮ್ಮ ನಡವಳಿಯನ್ನು ತೋರಿಸುತ್ತೆ. ಪೊಲೀಸರ ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಹಾಳು ಮಾಡಿಕೊಳ್ಳುವುದು ಬೇಡ. ಅಮಾಯಕರನ್ನು ಬಂಧಿಸಿರೋದು ತಪ್ಪು. ಆ ಅಮಾಯಕರು ಜೈಲಿನಿಂದ ಬರೋದು ಯಾವಾಗ? ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿಯ ಗಲಭೆಯ ಸ್ಪಾನ್ಸರ್ ಕಾಂಗ್ರೆಸ್ ನಾಯಕರು. ಅಲ್ಲಿ ಜೈಲಿಗೆ ಹೋದವರು ಈಗ ಏನು ಮಾಡುತ್ತಾ ಇದ್ದಾರೆ. ಈ ರೀತಿ ನಾಗಮಂಗಲದಲ್ಲೂ ಆಗಬೇಕಾ ಎಂದು ಪ್ರಶ್ನಿಸಿದರು.
ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿ, ನಷ್ಟವಾದ ವ್ಯಾಪರಿಗಳಿಗೆ ವೈಯಕ್ತಿಕವಾಗಿ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತೇನೆ. ಎಲ್ಲರೂ ಸಮಾನವಾಗಿ ಪರಿಹಾರ ನೀಡುತ್ತೇನೆ. ನಾನು ಎರಡು ಧರ್ಮದವರಿಗೂ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಮೆರವಣಿಗೆಗೆ ಅನುಮತಿ ಕೊಟ್ಟಿದ್ದು ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾಗಿದ್ದು ನೀವು. ಗಣೇಶನ ಮೆರವಣಿಗೆ ವೇಳೆ ಗಣಪತಿಗೆ ಜೈಕಾರ ಹಾಕಿದ್ದಾರೆ. ಆಗ ಮಸೀದಿ ಬಳಿ ಇನ್ನೊಂದು ಜನಾಂಗ ಅವರ ಘೋಷಣೆ ಕೂಗಿದ್ದಾರೆ. ಆಲ್ಲಿ ಎಷ್ಟು ಜನ ಪೊಲೀಸರನ್ನು ಆಯೋಜಿಸಿದ್ದೀರಿ? ಇದನ್ನು ನೋಡಿದ್ರೆ ಈ ಘಟನೆ ಪೂರ್ವನಿಯೋಜಿತ ಅನ್ನಿಸುತ್ತದೆ. ಘಟನೆಗೂ ಮುನ್ನ ಇಲ್ಲಿದ್ದ ಸಿಆರ್‌ಪಿಎಸ್ ವಾಹನವನ್ನು ಕರೆಸಿಕೊಂಡಿದ್ದಾರೆ. ಘಟನೆಯಾದ ಒಂದು ಗಂಟೆಗೆ ಮಾಧ್ಯಮದವರಿಗೆ ಗೊತ್ತಾಗುತ್ತದೆ. ಪೊಲೀಸರಿಗೆ ಯಾಕೆ ಗೊತ್ತಾಗಿಲ್ಲ. ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.













