
ಮಂಗಳೂರು: ಶುಕ್ರವಾರ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದ್ದಾರೆ.
2019ರ ಮೇ 11ರಂದು ಕುರಿ ಫಂಡ್ ಹಣದ ವಿಷಯದಲ್ಲಿ ಶ್ರೀಮತಿ ಶೆಟ್ಟಿ ಅವರನ್ನು ಅವರ ಮನೆಯಲ್ಲೇ ಹತ್ಯೆಗೈದು ದೇಹವನ್ನು 29 ತುಂಡುಗಳನ್ನಾಗಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಿಸಾಡಿದ್ದ ಈ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಆಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಈ ಪ್ರಕರಣದ ಅಪರಾಧಿಗಳಾಗಿದ್ದು ಈ ಪೈಕಿ ರಾಜು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದು ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲಿಯೇ ಇದ್ದಾರೆ.
ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಅವರು ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದರು. ಜತೆಗೆ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್ ಸ್ಯಾಮ್ಸನ್ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು. 2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್ ಸ್ಯಾಮ್ಸನ್‌ನ ಮನೆಗೆ ತೆರಳಿದ್ದಾಗ ಅಲ್ಲಿ ಸ್ಯಾಮ್ಸನ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯವರನ್ನು ಜೋನ್ಸ್ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆ ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೇಹವನ್ನು ಒಟ್ಟು 29 ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಇಟ್ಟಿದ್ದರು. ಈ ಕೃತ್ಯದಲ್ಲಿ ಜೋನ್ಸ್ ಗೆಳೆಯನಾದ ರಾಜು ಇಬ್ಬರಿಗೂ ಆಶ್ರಯ ನೀಡಿ ಶ್ರೀಮತಿ ಶೆಟ್ಟಿ ಅವರ ಮೈಮೇಲಿದ್ದ ಆಭರಣಗಳ ಪಾಲು ಪಡೆದುಕೊಂಡಿದ್ದ.
ಜೋನಸ್ ಮತ್ತು ವಿಕ್ಟೋರಿಯಾ ಮೇಲಿನ ಕೊಲೆ, ಸುಲಿಗೆ ಮತ್ತು ಸಾಕ್ಷ್ಯನಾಶ ಆರೋಪಗಳು ಹಾಗೂ ರಾಜು ಮೇಲಿನ ಕೊಲೆಗೆ ಸಹಾಯ, ಕಳವು ಮಾಡಿರುವ ಸೊತ್ತುಗಳನ್ನು ಇಟ್ಟುಕೊಂಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಸೆ. 17ಕ್ಕೆ ನಿಗದಿಪಡಿಸಲಾಗಿದೆ.































































































































