ಮೋದಿಯವರೇ ದೇಶದ ಚುಕ್ಕಾಣಿ ಹಿಡಿಯಬೇಕೆಂಬುದು ದೇಶದ ಜನರ ಸಂಕಲ್ಪ , “ಎಕ್ಸಿಟ್ ಪೋಲ್ ನಿಂದ ಸಾಬೀತು”
ಫಲಿತಾಂಶ ನಂತರ,ಹಗರಣಗಳ ಸರಮಾಲೆ ಹೊತ್ತಿರುವ ರಾಜ್ಯ ಸರಕಾರದ ನಡೆಯೇನು…!
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಪ್ರಶ್ನೆ

ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳುಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನವನ್ನ ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಕನಿಷ್ಠ 17ರಿಂದ ಗರಿಷ್ಠ 24ರ ವರೆಗಿನ ಸ್ಥಾನ ಗೆಲ್ಲಬಹುದು ಎಂದಿದ್ದರೆ, ಕಾಂಗ್ರೆಸ್ ಮೂರರಿಂದ ಆರು ಸೀಟ್ ಗೆಲ್ಲಬಹುದು ಎನ್ನಲಾಗಿದೆ .ಇನ್ನು ದೇಶದಲ್ಲಿ ಎನ್ ಡಿಎ 350 ಕ್ಕಿಂತಲೂ ಹೆಚ್ಚಿನ ಸ್ಥಾನ ಪಡೆಯಲಿದೆ ಎನ್ನಲಾಗಿದೆ.
ಸಮೀಕ್ಷೆಯ ವಿಚಾರವಾಗಿ, ಶಾಸಕ ವಿ ಸುನಿಲ್ ಕುಮಾರ್ ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.ನರೇಂದ್ರ ಮೋದಿಯವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸಬೇಕೆಂಬುದು ಈ ದೇಶದ ಜನರ ಸಂಕಲ್ಪ. ಈ ಬಾರಿಯ ಲೋಕಸಭಾ ಚುನಾವಣೆ ನಡೆದಿದ್ದೇ ಮೋದಿ ನಾಯಕತ್ವದಲ್ಲಿ, ಮೋದಿ ನಾಯಕತ್ವಕ್ಕಾಗಿ ಮತ್ತು ಮೋದಿ ನಾಯಕತ್ವದಲ್ಲೇ ಎಂದಿದ್ದಾರೆ.
ಇಂಡಿಯಾ ಒಕ್ಕೂಟದ ಭ್ರಷ್ಟವಾದ, ಕುಟುಂಬವಾದ ಹಾಗೂ ಅಧಿಕಾರಕ್ಕಾಗಿನ ಹೊಂದಾಣಿಕೆಯನ್ನು ರಾಷ್ಟ್ರದ ಜನರು ತಿರಸ್ಕರಿಸಿದ್ದು, ಕರ್ನಾಟಕದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಜನ ಮನ್ನಣೆ ನೀಡಲಿದ್ದಾರೆ. ಸಿದ್ದರಾಮಯ್ಯನವರೇ ಲೋಕಸಭಾ ಚುನಾವಣಾ ಫಲಿತಾಂಶ ನಿಮ್ಮ ವಿಫಲ ನಾಯಕತ್ವಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.
ಒಂದೇ ವರ್ಷದಲ್ಲಿ ನಿಮ್ಮ ಸರ್ಕಾರದ ವಿರುದ್ಧ ಜನಮತವಿದೆ ಎಂಬುದನ್ನು ಎಕ್ಸಿಟ್ ಫೋಲ್ ಸಾರಿ ಹೇಳುತ್ತಿದೆ. ಅಧಿಕಾರಕ್ಕೆ ಬಂದು ವರ್ಷ ಕಳೆಯುವಷ್ಟರಲ್ಲಿ ಹಗರಣಗಳ ಸರಮಾಲೆ ಹೊತ್ತುಕೊಂಡಿದ್ದು, ಫಲಿತಾಂಶ ಹೊರಬಂದರ ನಂತರ ಸರಕಾರದ ನಡೆಯೇನು? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.