“ಧರಿಸಿರುವ ಚಪ್ಪಲಿಯ ಒಳಗೆ ಕಲ್ಲು ಹೊಕ್ಕಾಗ, ಮೆತ್ತನೆಯ ಹುಲ್ಲು ಹಾಸಿನ ಮೇಲೆ ಕೂಡ ನಡೆಯಲು ಕಷ್ಟ”
ಪ್ರಜ್ವಲಾ ಶೆಣೈ, ಕಾರ್ಕಳ

ಜೀವನ ಪಥದಲ್ಲಿ ಅದೆಷ್ಟೋ ಮಹತ್ವಾಕಾಂಕ್ಷೆಗಳ ಕನಸನ್ನು ಕಾಣುತ್ತಾ ಬದುಕು ಸಾಗಿಸುತ್ತೇವೆ. ಆಕಾಶಕ್ಕೆ ಏಣಿ ಇಟ್ಟು ನಕ್ಷತ್ರಗಳನ್ನು ಎಣಿಸುತ್ತಾ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಗೆಲುವಿನ ಉತ್ತುಂಗಕ್ಕೆ ಹಾರ ಬಯಸುತ್ತೇವೆ. ಈ ನಮ್ಮ ಪ್ರಯತ್ನಕ್ಕೆ ಆಪ್ತರು ಕೈ ಜೋಡಿಸಬೇಕೆಂದು ಒಳಗಿಂದೊಳಗೆ ಹಾತೊರೆಯುತ್ತೇವೆ. ಆದರೆ ನಮ್ಮೆಲ್ಲಾ ಆಸೆಗಳು, ಹಾರೈಕೆಗಳು ಕಾರ್ಯಗತವಾಗಲು ಸಾಧ್ಯವೇ ಎಂದು ಯೋಚಿಸುತ್ತೇವೆ. ಅದಾಗದಿದ್ದಾಗ ವ್ಯರ್ಥ ಪ್ರಯತ್ನ ವೆಂದುಕೊಂಡು ಮನಸ್ಸನ್ನು ಕುಗ್ಗಿಸಿಕೊಳ್ಳುತ್ತೇವೆ.
ಆಕಾಶದೆತ್ತರಕ್ಕೆ ಏರುವ ಮೊದಲು ಅಲ್ಲಿಂದ ಜಾರಿ ಬಿದ್ದಾಗ ಆಗುವ ಆಘಾತದ ಬಗ್ಗೆ ಮೊದಲು ಯೋಚಿಸು.ಎಂದು ಭಯ ಭೀತಿ ಹುಟ್ಟಿಸುವವರರೇ ಎಲ್ಲೆಲ್ಲೂ ಕಾಣಸಿಗುತ್ತಾರೆ.ಇಂತಹವರ ಮಾತಿನಿಂದ ನಾವು ಸ್ವಲ್ಪ ವಿಚಲಿತರಾಗುತ್ತೇವೆ. ನಾವು ಸಾಗುವ ದಾರಿಯ ಬಗ್ಗೆ ನಮಗೇ ಅನಿಶ್ಚಿತತೆ ಕಾಡುತ್ತದೆ. ನಿರ್ಧರಿತ ಗುರಿ ಮುಟ್ಟ ಬೇಕಾದರೆ ಒಂದಷ್ಟು ಸವಾಲುಗಳನ್ನು, ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.ಹಾಗೆಂದು ಸೋಲಿಗೆ ಅಂಜಿ ಸುಮ್ಮನೆ ಕುಳಿತರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ.
ಈ ಕ್ಷಣ ಶಾಶ್ವತವಲ್ಲ….
ಯಾವುದೇ ವ್ಯಕ್ತಿ ಒಂದೇ ಬಾರಿಗೆ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸೋಲೇ ಗೆಲುವಿನ ಸೋಪಾನ ಅನ್ನುವುದು ನಾಣ್ಣುಡಿ .ಗೆಲುವು ಎನ್ನುವುದು ಸೋಲು,ಕಷ್ಟ, ಸವಾಲು ಮತ್ತು ಪ್ರಯತ್ನಗಳ ಪ್ರತಿಫಲ. ಗೆದ್ದಾಗ ಬೀಗುವುದು, ಸೋತಾಗ ಕುಗ್ಗುವುದು ಮನುಷ್ಯ ಸಹಜವಾದ ಸ್ವಭಾವ. ಆದರೆ ಸೋಲು- ಗೆಲುವು ಯಾವುದೂ ಶಾಶ್ವತವಲ್ಲ ಎನ್ನುವ ಪ್ರಣವ ಮಂತ್ರ ಸದಾ ನಮ್ಮ ಮನಸ್ಸಿನಲ್ಲಿ ಜಾಗೃತವಾಗಿರಬೇಕು. ನಾವು ಪ್ರತಿ ಬಾರಿ ಸೋತಾಗಲೂ ಒಂದು ಅನುಭವದ ಪಾಠವನ್ನಂತೂ ಖಂಡಿತ ಕಲಿಯುತ್ತೇವೆ. ಈ ಅನುಭವದಿಂದಲೇ ನಾವು ಮಾನಸಿಕವಾಗಿ ಗಟ್ಟಿಯಾಗುತ್ತಾ ಸಾಗುತ್ತೇವೆ. ಕಾಲಚಕ್ರದ ಮಾಯೆಯಂತೆ ಜೀವನದ ಪ್ರತಿ ಹಂತದಲ್ಲೂ ಕಷ್ಟ, ಸುಖ, ಸೋಲು, ಗೆಲುವು,ನಿರೀಕ್ಷೆ, ಹತಾಶೆ, ಸಂತೋಷ, ನಿರಾಸೆ ಎಂಬ ಸ್ಥಿತಿಗಳು ಇದ್ದೇ ಇರುವುದು. ಏನೇ ಆದರೂ ಯಾವುದೂ ನಿಂತ ನೀರಂತೆ ಸ್ಥಿರವಲ್ಲ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಅಸಾಧ್ಯವಾದದ್ದನ್ನು ಸಾಧಿಸ ಹೊರಟಾಗ ದಾರಿಯಲ್ಲಿ ಅಪಹಾಸ್ಯ ಮಾಡುವ, ಕುಹಕವಾಡುವ,ಕಾಲೆಳೆಯುವ ಮಂದಿ ಇದ್ದೇ ಇರುತ್ತಾರೆ. ಇದರಿಂದ ಧೃತಿಗೆಟ್ಟು ಅವರಿಗೆ ಸ್ಪಂದಿಸದೆ ಸಾಧನೆಯ ಮೂಲಕ ಉತ್ತರಿಸುವುದೇ ಪರಮಸಾಧನ. ಇಂತಹ ದೃಢ ನಿರ್ಧಾರ ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಉದ್ವೇಗ ಹತೋಟಿಯಲ್ಲಿರಲಿ….
ಸಣ್ಣಪುಟ್ಟ ವಿಷಯಕ್ಕೆಲ್ಲ ಮನಸ್ಸು ಕೆಡಿಸಿಕೊಂಡು ಉದ್ವೇಗಕ್ಕೆ ಒಳಗಾಗುವವರನ್ನು ನಾವು ಕಾಣುತ್ತೇವೆ. ಮಾತಿನ ಹಿಡಿತ ತಪ್ಪಿ ಮನಸ್ಸು ಆಕ್ರೋಶದ ಸ್ಥಿತಿಗೆ ಏರುತ್ತದೆ. ಮಾತಿನ ಲಯತಪ್ಪಿ, ಅರ್ಥವಿಲ್ಲದ ಅಸಂಬದ್ಧ ನುಡಿಗಳು ಕೇಳಿ ಬರುತ್ತವೆ. ಮನಸ್ಸು ಸ್ಥಿಮಿತ ಕಳೆದುಕೊಂಡು ಕೋಪದಲ್ಲಿ ಪ್ರತಿಕ್ರಿಯಿಸಿ ಎದುರಾಳಿಗೆ ಹಾನಿ ಉಂಟು ಮಾಡುವ ಹಂತಕ್ಕೂ ತಲುಪಬಹುದು. ಇನ್ನೂ ಕೆಲವರು ಉದ್ವೇಗಕ್ಕೆ ಒಳಗಾದಾಗ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯುವುದು, ಗೋಡೆಗೆ ತಲೆಚಚ್ಚಿಕೊಳ್ಳುವುದು, ವಸ್ತುಗಳನ್ನು ನೆಲಕ್ಕೆ ಬಡಿಯುವುದನ್ನು ಕಾಣುತ್ತೇವೆ.
ಇದು ಮನೋ ಉದ್ವೇಗದ ಪರಾಕಾಷ್ಟೆ ಹಾಗೂ ಅಸಹಾಯಕತೆಯ ಪ್ರತೀಕ.ಇದೆಲ್ಲದರ ಫಲಿತಾಂಶ ಮಾತ್ರ ಅತ್ಯಂತ ಘೋರ. ಇನ್ಯಾರಿಗೋ ಪ್ರತಿಕ್ರಿಯಿಸಲು ಹೋಗಿ ನಮಗೆ ನಾವೇ ಶಿಕ್ಷೆ ನೀಡಿಕೊಳ್ಳುತ್ತೇವೆ. ನಮಗಾದ ನೋವಿನಿಂದ ಕುಗ್ಗಿದಾಗ ನಾವು ನಡೆಯುವ ಹೆಜ್ಜೆ ತಪ್ಪಬಾರದು. ಇಂತಹ ವರ್ತನೆಗಳು ಗೆಲುವಿನ ಮೊದಲ ಶತ್ರು .ನಮ್ಮನ್ನು ಉದ್ವೇಗಕ್ಕೆ ಒಳಪಡಿಸಲೆಂದೇ ಅನೇಕರು ಕಾಯುವರು. ಇವರ ಜಾಲಕ್ಕೆ ನಾವು ಬಿದ್ದರೆ ಇನ್ನೆಂದೂ ಗೆಲುವಿನ ಮುಖ ನೋಡಲು ಸಾಧ್ಯವಿಲ್ಲ. ಬದುಕಿನಲ್ಲಿ ಅದೆಂತಹ ಸಂದರ್ಭವೇ ಬರಲಿ, ಅದನ್ನು ತಾಳ್ಮೆಯಿಂದ ಸಮಚಿತ್ತದಿಂದ ನಿಭಾಯಿಸುವ ಕಲೆಗಾರಿಕೆಯನ್ನು ನಾವು ಬೆಳೆಸಿಕೊಳ್ಳಬೇಕು.
ನಮ್ಮವರು ಯಾರೆಂದು ಗುರುತಿಸಿ…
ಯಾರು ನಮ್ಮವರು? ಈ ಪ್ರಶ್ನೆ ಜೀವನದುದ್ದಕ್ಕೂ ಕಾಡುತ್ತಲೇ ಇರುತ್ತದೆ. ನಮ್ಮ ನೋವುಗಳನ್ನು ಸೂಕ್ಷ್ಮತೆಗಳನ್ನು ಬದುಕಿನ ರಹಸ್ಯಗಳನ್ನು ಯಾರಲ್ಲಿ ಹೇಳಿಕೊಳ್ಳಬೇಕು ಎಂಬುವುದೇ ಬಹಳಷ್ಟು ಬಾರಿ ತಿಳಿಯುವುದೇ ಇಲ್ಲ. ನಮಗೆ ಆತ್ಮೀಯ ಎನ್ನುವ ಸಂಬಂಧಗಳು ಕೂಡ ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಮಿತ್ರರು ಶತ್ರುಗಳಾಗಬಹುದು. ಅನುಕಂಪ ತೋರಿದವರಂತೆ ಮಾತನಾಡುವವರೆಲ್ಲ ನಮ್ಮವರೆಂದುಕೊಳ್ಳುವುದು ಕೂಡ ಅಪಾಯಕಾರಿ. ಅನಗತ್ಯವಾಗಿ ನಮ್ಮ ಕಷ್ಟಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಹೋಗಬಾರದು. ಎಲ್ಲರೊಂದಿಗೆ ನಮ್ಮ ಆಪ್ತ ವಿಚಾರಗಳನ್ನು ಹೇಳಬಾರದು. ಯಾರು ಯಾವಾಗ ಹೇಗೆ ತಿರುಗಿ ಬೀಳುತ್ತಾರೆ ಎನ್ನುವುದು ಇಂದಿಗೂ ವಿಸ್ಮಯ. ಎಷ್ಟೋ ಬಾರಿ ಪ್ರಾಣ ಸ್ನೇಹಿತರಾದವರೇ ದೊಡ್ಡ ಶತ್ರುಗಳಾಗಬಹುದು. ಜೀವನದಲ್ಲಿ ಸಂಬಂಧಗಳು ಆಗಾಗ ಬದಲಾಗುತ್ತಿರುತ್ತವೆ. ಎಲ್ಲರನ್ನೂ ಅಪನಂಬಿಕೆಯಿಂದ ಕಾಣಬೇಕೆಂದಲ್ಲ. ಯಾರನ್ನೂ ನಂಬಬಾರದು ಎಂದೂ ಅಲ್ಲ. ನಮ್ಮವರು ಯಾರೆಂದು ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧರಿಸಬೇಕು. ನಮ್ಮ ಜೀವನದ ಪ್ರತಿ ವಿಚಾರದಲ್ಲೂ ಅಂತಿಮ ನಿರ್ಧಾರ ನಮ್ಮದೇ ಆಗಿರಬೇಕು. ಗೆದ್ದಾಗ ಬೆನ್ನು ತಟ್ಟಿದಂತೆ ಮಾಡಿ, ಪ್ರಪಾತಕ್ಕೆ ತಳ್ಳುವವರು ಇರುತ್ತಾರೆ ಎನ್ನುವ ಮುಂಜಾಗ್ರತೆ ಸದಾ ನಮ್ಮಲ್ಲಿ ಜಾಗೃತವಾಗಿರಬೇಕು.
ಸವಾಲುಗಳನ್ನು ಎದುರಿಸಿ…
ಸಾಲು ಸಾಲು ಸವಾಲುಗಳು ನಮ್ಮ ಮುಂದೆ ಕಲ್ಲು ಮುಳ್ಳಿನ ಹಾದಿಯಂತೆ ತಯಾರಾಗಿರುತ್ತದೆ. ಸಮಸ್ಯೆಗಳನ್ನು ಎದುರಿಸದೆ ಗೆಲುವು ನಮ್ಮದಾಗಿಸಲು ಸಾಧ್ಯವಿಲ್ಲ. ಸಮಸ್ಯೆಗಳ ಮೂಲ ಯಾವುದು? ಎನ್ನುವುದನ್ನು ಮೊದಲು ಅರಿಯಬೇಕು. ನಾವು ಧರಿಸಿರುವ ಚಪ್ಪಲಿಯ ಒಳಗೆ ಒಂದು ಸಣ್ಣ ಕಲ್ಲು ಹೊಕ್ಕಾಗ ಮೆತ್ತನೆಯ ಹುಲ್ಲು ಹಾಸಿನ ಮೇಲೆ ನಡೆದರೂ ಕಷ್ಟ ತಪ್ಪದು. ಹೊರಗಿನ ಸವಾಲುಗಳಿಗಿಂತ ನಮ್ಮೊಳಗಿನ ಋಣಾತ್ಮಕ ಭಾವಗಳೇ ನಮ್ಮನ್ನು ಸೋಲಿಸುವುದು ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಬರುವ ಸೋಲು, ಗೆಲುವು ಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಸತತ ಪ್ರಯತ್ನಗಳ ಮೂಲಕ ಸವಾಲುಗಳನ್ನು ಎದುರಿಸೋಣ. ಗೆಲುವಿನ ಹಾದಿ ನಮ್ಮದಾಗಿಸೋಣ. ಅಲ್ಲವೇ ?….
