
ಹೆಬ್ರಿ :ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಪಾದರು ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು. ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಗುಣ ಅವರಲ್ಲಿತ್ತು. ಭಗವಂತನು ತನ್ನ ಶಕ್ತಿಯನ್ನು ಭಕ್ತರಿಗೆ ನೀಡುವಂತೆ ರಾಮದೇವರ ಗುಣ ರಾಮದೇವರ ಉಪಾಸಕರಾದ ಪೇಜಾವರ ಶ್ರೀಗಳಲ್ಲಿ ಇತ್ತು. ಅವರು ನಡೆದಾಡುವ ಗ್ರಂಥಾಲಯವಿದ್ದಂತೆ. ಅವರಲ್ಲಿರುವ ಅದ್ಬುತವಾದ ಜ್ಞಾನಶಕ್ತಿ, ಶಾಸ್ತ್ರ ಪ್ರೌಢಿಮೆ ಎಲ್ಲರನ್ನೂ ಬೆರಗುಗೊಳಿಸುವಂತಿತ್ತು. ಪ್ರತಿನಿತ್ಯವೂ ಹತ್ತಾರು ಪತ್ರಿಕೆಗಳನ್ನು ಓದುತ್ತಿದ್ದ ಅವರು ನಮ್ಮ ಹಿಂದೂ ಧರ್ಮಕ್ಕೆ ಕಳಂಕವನ್ನು ಸೃಷ್ಟಿಸುವ ವಿಚಾರಗಳು ಬಂದರೆ ಕೂಡಲೇ ಪ್ರತ್ಯುತ್ತರ ನೀಡಿ ಸಮಾಜದಲ್ಲಿ ಐಕ್ಯತೆಯನ್ನು ಬಯಸಿದ್ದರು.ಸನಾತನ ಧರ್ಮದ ಏಳಿಗೆಗಾಗಿಯೇ ಸದಾ ದುಡಿಯುತ್ತಿದ್ದ ಅಪರೂಪದ ಮಹಾನ್ ಚೇತನ ಪೇಜಾವರ ಶ್ರೀಗಳು ಎಂದು ಉಡುಪಿ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಹೆಬ್ರಿ ಗಿಲ್ಲಾಳಿ ಶ್ರೀ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ನಡೆದ ಪೇಜಾವರ ಶ್ರೀಗಳ ಪಂಚಮ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ಮಾಡಿ ಎಲ್ಲರಿಗೂ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.ಉಡುಪಿ ಸಂಸ್ಕೃತ ಕಾಲೇಜಿನ ಅಲಂಕಾರ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಅಮೃತೇಶ ಆಚಾರ್ಯ ಮತ್ತು ವಿದ್ವಾನ್ ಎಂ. ರಾಘವೇಂದ್ರ ಅಡಿಗ ಗುರುಸಂಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೇಜಾವರ ಶ್ರೀ ಗಳಲ್ಲಿದ್ದ ಶಿಷ್ಯವಾತ್ಸಲ್ಯ ಮತ್ತು ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. ಗೋಶಾಲೆಯ ಟ್ರಸ್ಟಿಗಳಾದ ಎಂ. ರವಿ ರಾವ್, ವಿಷ್ಣುಮೂರ್ತಿ ನಾಯಕ್, ವಿಷ್ಣುಮೂರ್ತಿ ಆಚಾರ್ಯ, ಶ್ರೀಕಾಂತ್ ಭಟ್ ಅಜೆಕಾರು, ಭಕ್ತ ವೃಂದದವರು ಉಪಸ್ಥಿತರಿದ್ದರು. ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ಜಪ, ಪಾರಾಯಣ, ಪವಮಾನ ಹೋಮ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಊರ, ಪರವೂರ ಅನೇಕ ದಾನಿಗಳ, ಶ್ರೀಪಾದರ ಶಿಷ್ಯರ ಸಹಕಾರದಿಂದ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.































































































































