ಭಾಗ – 653
ಭರತೇಶ್ ಶೆಟ್ಟಿ ,ಎಕ್ಕಾರು

ಕೌಶಿಕ ತರ್ಕಿಸಿ ಒಂದು ಮಹತ್ವದ ತೀರ್ಮಾನ ಮಾಡಿದನು. ತ್ರಿಶಂಕುವಿನ ತಂದೆ ವೃದ್ಧನಾಗಿದ್ದಾನೆ. ಹಾಗಾಗಿ ಮಹಾರಾಜನ ಮಗ ಸತ್ಯವ್ರತನಿಗೆ ಆತನ ರಾಜ್ಯದ ಪಟ್ಟಕಟ್ಟುವ ವ್ಯವಸ್ಥೆ ಮಾಡಿಸಬೇಕು ಎಂದು ತೀರ್ಮಾನಿಸಿದನು. ತನಗೆ ಉಪಕಾರ ಮಾಡಿದ ತ್ರಿಶಂಕುವನ್ನು ಆತನ ರಾಜ್ಯಕ್ಕೆ ಮಹಾರಾಜನನ್ನಾಗಿಸುವಲ್ಲಿ ಎದುರಾದ ಸಮಸ್ಯೆಗಳನ್ನು ಪರಿಹರಿಸಿ ತನ್ನ ಕೃತಜ್ಞತೆಯ ಕಾರ್ಯ ಪೂರೈಸಿದನು.
ಇದಾಗಿ ಕೆಲ ವರ್ಷದ ಬಳಿಕ ಸತ್ಯವ್ರತನಿಗೊಂದು (ತ್ರಿಶಂಕು) ಮಹದಾಸೆ ಮನಮಾಡಿತು. ಏನೆಂದರೆ ತಾನು ಶತ ಮಹಾಯಾಗಗಳನ್ನು ವಿರಚಿಸಿ ಸಶರೀರನಾಗಿ ಸ್ವರ್ಗಕ್ಕೆ ಹೋಗಬೇಕು ಎಂಬ ಮಹತ್ವಾಕಾಂಕ್ಷೆ ಆತನದ್ದು. ಹೀಗೆ ಯೋಚಿಸುತ್ತಿದ್ದ ತ್ರಿಶಂಕು ಮಹಾಯಜ್ಞ ಮಾಡಿಸಬೇಕೆಂದು ಉದ್ದೇಶಿಸಿದನು. ತನ್ನಲ್ಲಿ ಆರಂಭದಲ್ಲಿ ಮುನಿಸು ಹೊಂದಿದ್ದರೂ ಬಳಿಕ ಉಪಶಮನವಾಗಿದ್ದ ಕುಲಗುರುಗಳಾದ ವಸಿಷ್ಠರ ಬಳಿಗೆ ಹೋದನು. ತನ್ನ ಮನದಾಸೆಯನ್ನು ವಿವರಿಸಿ ನೆರವೇರಿಸಿಕೊಡಬೇಕೆಂದು ಬೇಡಿದನು. ಆತನ ಬಯಕೆ ತಿಳಿದು ವಿವೇಚಿಸಿದ ಬ್ರಹ್ಮರ್ಷಿ ವಸಿಷ್ಠರು, ಇನ್ನೂ ಕೆಲ ಸಮಯ ಕಾಯಬೇಕು. ಈಗ ಕಾಲ ಕೂಡಿ ಬಂದಿಲ್ಲ. ಅಂತಹ ಅಸಾಮಾನ್ಯ ಮುಹೂರ್ತವೂ ಶೀಘ್ರದಲ್ಲಿ ಇಲ್ಲ. ಹಾಗಾಗಿ ತಾಳ್ಮೆಯಿಂದ ಆ ತನಕ ಕಾದು ಯೋಗ ಕೂಡಿ ಬಂದಾಗ ಯೋಚಿಸೋಣ. ಸದ್ಯಕ್ಕೆ ಅಸಾಧ್ಯವಾದುದೆಂದು ಹೇಳಿ ಹಿಂದೆ ಕಳುಹಿಸುತ್ತಾರೆ. ತನ್ನ ಆಶಾಭಂಗವಾಗಬಾರದು, ವಸಿಷ್ಠರಲ್ಲದಿದ್ದರೆ ಇನ್ಯಾರಾದರೂ ತನ್ನ ಬಯಕೆ ಈಡೇರಿಸಬಲ್ಲವರು ಸಿಕ್ಕಿಯಾರು ಎಂದು ಕೆಲವು ಮಹರ್ಷಿಗಳನ್ನು ಸಂಪರ್ಕಿಸಿದ ತ್ರಿಶಂಕುವಿನ ಆಸೆ ಪೂರೈಸುವಂತಾಗಲಿಲ್ಲ. ಆದರೂ ಛಲ ಬಿಡದ ತ್ರಿಶಂಕು ಮುನಿ ಕೌಶಿಕನ ಬಳಿಗೆ ಬಂದು ಸಮಾಚಾರವನ್ನೆಲ್ಲ ತಿಳಿಸಿದನು. ತನ್ನ ಸಂಸಾರಕ್ಕೆ ಮಹದುಪಕಾರ ಮಾಡಿದ ರಾಜನಿಗಾಗಿ ಆ ಕುರಿತು ಹಲವು ವಿಧಾನದಿಂದ ವಿವೇಚಿಸಿದರೂ ಸುಲಭ ಸಾಧ್ಯವಿಲ್ಲ ಎಂದರಿತು, ಕೌಶಿಕ ಕೂಡ ಮೊದಲಿಗೆ ಈಗ ಅಸಾಧ್ಯವೆಂದು ಹೇಳಿದನು. ಆಗ ತ್ರಿಶಂಕು ಹೇಗಾದರೂ ವಿಶೇಷ ಪ್ರಯತ್ನದಿಂದ ಗುರಿ ಸಾಧಿಸ ಬೇಕು ಎಂದು ಪಣ ತೊಟ್ಟಿದ್ದೇನೆ. ಆದರೆ ನೀವೂ ನನ್ನ ಕುಲಗುರುಗಳಾದ ವಸಿಷ್ಠರಂತೆಯೆ ಕೈ ಎತ್ತಿ ಬಿಟ್ಟಿರಾ? ಸರಿ ನಿಮಗೂ ಆಗದಿದ್ದರೆ ಬೇರೆ ಯಾರಲ್ಲಾದರೂ ಆಗಬಹುದೊ ಎಂದು ಪ್ರಯತ್ನಿಸಿ ನೋಡುತ್ತೇನೆ ಎಂದು ಅಲ್ಲಿಂದ ಹೊರಡಲು ಸಿದ್ಧನಾದನು. ವಸಿಷ್ಠರ ಮೇಲಿನ ಸಿಟ್ಟೋ? ಅಥವಾ ಸತ್ಯವ್ರತ – ತ್ರಿಶಂಕುವಿನ ಮೇಲಿನ ಪ್ರೀತಿಯೋ! ಯಾವುದೊ ಒಂದು ಕಾರಣದಿಂದ ಕೌಶಿಕನ ಮನಸ್ಸು ಬದಲಾಯಿತು. ಯಾಗ ಮಾಡಿಸಲು ಒಪ್ಪಿ ಬಿಟ್ಟನು ಕೌಶಿಕ. ತ್ರಿಶಂಕುವಿನ ಆಸೆ ಪೂರೈಸಲು ಯಜ್ಞ ಆರಂಭಿಸಿದನು. ಯಜ್ಞ ಸಾಗಿ ಹವಿರ್ಭಾಗ ಸ್ವೀಕರಿಸಲು ದೇವತೆಗಳನ್ನು ಆಮಂತ್ರಿಸಿದಾಗ, ಅವರು ಬರಲಿಲ್ಲ. ಇದರಿಂದ ಆಕ್ರೋಷಕ್ಕೊಳಗಾದ ಕೌಶಿಕ ತಾನು ಈ ತನಕ ಸಾಧಿಸಿರುವ ತನ್ನ ಪೂರ್ಣ ತಪೋಬಲವನ್ನು ಧಾರೆ ಎರೆದು ಆ ಶಕ್ತಿ ಮುಖೇನ ತ್ರಿಶಂಕುವನ್ನು ಸಶರೀರಿಯಾಗಿ ಸ್ವರ್ಗಕ್ಕೆ ಕಳುಹಿಸಿದನು. ಹೀಗೆ ತ್ರಿಶಂಕು ಸ್ವರ್ಗವನ್ನೇರುವಾಗ ಸ್ವರ್ಗ ಪ್ರವೇಶಿಸುವುದನ್ನು ಕಂಡ ಇಂದ್ರ ನಿನಗೆ ಸ್ವರ್ಗದಲ್ಲಿ ಸ್ಥಾನವಿಲ್ಲವೆಂದು ಬಹಿಷ್ಕರಿಸಿ ತಳ್ಳಿಬಿಟ್ಟನು. ಇಂದ್ರನ ಘಾತದಿಂದ ತ್ರಿಶಂಕು ತಲೆಕೆಳಗಾಗಿ ಭೂಮಿಯ ಕಡೆಗೆ ಬೀಳ ತೊಡಗಿದನು. ಇದನ್ನರಿತ ಕೌಶಿಕ ತ್ರಿಶಂಕುವನ್ನು ತಪಶಕ್ತಿಯಿಂದ ಅಲ್ಲಿಯೆ ನಿಲ್ಲಿಸಿ ತ್ರಿಶಂಕುವಿಗಾಗಿ ಮತ್ತೊಂದು ಸ್ವರ್ಗವನ್ನು ವಿರಚಿಸಿದನು. ಆಗ ಇಂದ್ರಾದಿಗಳು ಹೆದರಿ ಕೌಶಿಕನ ಬಳಿಗೆ ಬಂದು ಮೊರೆಯಿಟ್ಟು, ಈ ರೀತಿ ಮಾಡಬಾರದು. ಮಾಡಿದರೆ ಲೋಕಕ್ಕೆ ಅಹಿತಕರ ಪರಿಣಾಮವಾದೀತು. ಕೃಪೆದೋರಿ ಏನು ಮಾಡುತ್ತಿರುವಿರಿ ಎಂದು ಅರೆಕ್ಷಣ ಯೋಚಿಸಬೇಕೆಂದು ಬೇಡಿಕೊಂಡರು. ತನ್ನ ಪ್ರಯತ್ನದಿಂದ ಹಿಂದೆ ಸರಿಯಲಾರೆ, ನೀವು ಭಂಗ ತರಬಾರದೆಂದು ಹೇಳಿ, ದೇವತೆಗಳ ಬೇಡಿಕೆಯನ್ನು ಕೌಶಿಕ ತಿರಸ್ಕರಿಸುತ್ತಾನೆ. ಆಕಾಶದಲ್ಲಿ ಧ್ರುವ ನಕ್ಷತ್ರವಿರುವವರೆಗೆ ತ್ರಿಶಂಕು ಸಶರೀರಿಯಾಗಿ ಅಲ್ಲಿಯೇ ನಿಲ್ಲಲಿ, ಇದಕ್ಕೆ ಎಲ್ಲರೂ ಒಪ್ಪಬೇಕೆಂದು ಕೌಶಿಕ ಆದೇಶ ಮಾಡುತ್ತಾನೆ. ಅಂದಿನಿಂದ ತ್ರಿಶಂಕು ಯಜ್ಞಪುರುಷ ಸಂಚರಿಸುವ ಮಾರ್ಗದಿಂದ ಹೊರಭಾಗದಲ್ಲಿ ಪ್ರತ್ಯೇಕವೂ, ಕೃತಕವೂ ಆದ ಸ್ವರ್ಗದಲ್ಲಿ ನೆಲೆಯಾದನು. ಆತನ ಸುತ್ತಲೂ ನಕ್ಷತ್ರಗಳು ಸಂಚರಿಸತೊಡಗಿದವು. ಆಕಾಶದಲ್ಲಿ ಅಗ್ನಿಪಥದ ಹೊರಗೆ ತ್ರಿಶಂಕು ನಕ್ಷತ್ರ ಪುಂಜಗಳ ಜೊತೆ ಬಾಗಿದ ತಲೆಯೊಡನೆ ಉಜ್ಜ್ವಲವಾಗಿ ಹೊಳೆಯತೊಡಗಿದನು. ಆದರೂ ವಿಧಿ ತ್ರಿಶಂಕುವನ್ನು ವಿಪರೀತವಾಗಿ ಕಾಡಿದ್ದು ಮಾತ್ರ ಸತ್ಯ. ಶಾಪದಿಂದ ಚಂಡಾಲನಾಗಿ ಜೀವಿಸುತ್ತಿದ್ದರೂ, ಕೌಶಿಕನ ಹೆಂಡತಿ ಮತ್ತು ಮಗನನ್ನು ಕ್ಷಾಮಕಾಲದಲ್ಲಿ ಕಷ್ಟಪಟ್ಟು ಕಾಪಾಡಿದ ಎಂಬ ಕಾರಣಕ್ಕಾಗಿ ಹಠ ಸಾಧನೆಯಿಂದ ಕೌಶಿಕ ಸ್ವರ್ಗಕ್ಕೆ ಸಶರೀರಿಯಾಗಿ ಕಳುಹಿಸಲು ಪ್ರಯತ್ನಿಸಿದರೂ, ಈ ತೆರನಾದ ಒಂದು ಸೃಷ್ಟಿಯಾಗಿ ತ್ರಿಶಂಕು ಸ್ವರ್ಗವೆಂದು ಖ್ಯಾತವಾಯಿತು. ದೈವಶಕ್ತಿಯನ್ನು ಮೀರಿಸಿದ ಪೌರುಷಕ್ಕೆ ಇಲ್ಲಿ ಪ್ರಯತ್ನ ನಡೆದಿದೆ. ಪೌರುಷ ಪರಮ ರೂಪದಂತೆ ಇರುವ ಕೌಶಿಕ ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದನಾದರೂ ಅತ್ತ ಗುರಿ ಸೇರಲೂ ಆಗದೆ, ಇತ್ತ ಮರಳಿ ಬರಲೂ ಆಗದೆ ಪಥ ಮಧ್ಯದಲ್ಲಿ ಸಿಲುಕಿಕೊಳ್ಳುವಂತಾಯಿತು. ಇಲ್ಲೂ ಒಂದು ವಿಚಾರವನ್ನು ಅರಿತುಕೊಳ್ಳುವುದಕ್ಕಿದೆ. ಏನೆಂದರೆ ಓರ್ವ ಸಮರ್ಥ ಗುರುವಿನ ನಿರ್ದೇಶನ ಕೇಳಿ ತಿಳಿದು ಪಾಲಿಸಬೇಕು. ಇಲ್ಲದೇ ಹೋದರೆ ತ್ರಿಶಂಕುವಿನಂತೆ ಆಚೆ ಮೇಲೆಯೂ ಅಲ್ಲ, ಈಚೆ ಕೆಳಗೂ ಅಲ್ಲ ಎಂಬಂತಾಗಿ ಅತಂತ್ರ ಸ್ಥಿತಿಯಲ್ಲಿ ಬದುಕಾಗುತ್ತದೆ. ಅದಕ್ಕಾಗಿ ಧರ್ಮಾತ್ಮರೂ, ಕ್ಷತ್ರಿಯರೂ ಆದ ನಿಮಗೂ ಸಮರ್ಥರಾದ ಗುರುಗಳು ಬೇಕು ಎಂದು ಗಂಧರ್ವ ಸೂಚಿಸಿದನು.
ಇಷ್ಟೆಲ್ಲಾ ಮಾತು – ಕಥೆ ಕೇಳಿದ ಅರ್ಜುನ “ಹೇ ಗಂಧರ್ವ ಮಹಾಶಯಾ! ಗುರುಗಳು ಬೇಕು, ಮತ್ತು ಯಾಕೆ ಬೇಕು ಎಂಬ ವಿಚಾರ ಅರ್ಥವಾಯಿತು. ಆದರೆ ಅಂತಹ ಗುರುಗಳು ವನವಾಸಿಗಳಾದ ನಮಗೆ ಸಿಗಲು ಸಾಧ್ಯವೇ? ಸಿಗುವರಾದರೂ ಎಲ್ಲಿದ್ದಾರೆ? ಸಿಕ್ಕರೂ ಅಲೆಮಾರಿಗಳಾದ ನಮ್ಮ ಕೋರಿಕೆ ಒಪ್ಪಿಯಾರೆ? ಎಂದು ಅರ್ಜುನ ಮರು ಪ್ರಶ್ನಿಸಿದನು.
ಮುಂದುವರಿಯುವುದು…































































































































