24.6 C
Udupi
Saturday, March 15, 2025
spot_img
spot_img
HomeBlogಕಾನೂನು ಸುಧಾರಣೆಯ ಮೈಲುಗಲ್ಲಿನಲ್ಲಿ ಮಹತ್ವದ ಬೆಳವಣಿಗೆ: ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆ ರದ್ದು

ಕಾನೂನು ಸುಧಾರಣೆಯ ಮೈಲುಗಲ್ಲಿನಲ್ಲಿ ಮಹತ್ವದ ಬೆಳವಣಿಗೆ: ಐಪಿಸಿ, ಸಿಆರ್‌ಪಿಸಿ, ಸಾಕ್ಷ್ಯ ಕಾಯ್ದೆ ರದ್ದು

ನವದೆಹಲಿ: ಜುಲೈ 1ರ ಸೋಮವಾರದಂದು ಕಾನೂನು ಸುಧಾರಣೆಯ ಮೈಲುಗಲ್ಲು ಎನ್ನಬಹುದಾದ ಮಹತ್ವದ ಬೆಳವಣಿಗೆಯೊಂದು ದೇಶದಲ್ಲಿ ಘಟಿಸಲಿದ್ದು, ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಭಾರತೀಯ ದಂಡಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ರದ್ದಾಗಿ ಅವುಗಳ ಬದಲಿಗೆ ಕ್ರಮವಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು ಜು.1ರಿಂದ ಜಾರಿಗೆ ಬರಲಿವೆ ಎಂದು ವರದಿಯಾಗಿದೆ.

ಆಧುನಿಕ ನ್ಯಾಯ ವ್ಯವಸ್ಥೆ ಜಾರಿಗೆ ಬರಲಿದ್ದು ಹೊಸ ವ್ಯವಸ್ಥೆಯಲ್ಲಿ ಶೂನ್ಯ ಎಫ್‌ಐಆರ್‌, ಆನ್‌ಲೈನ್‌ನಲ್ಲೇ ಪೊಲೀಸರಿಗೆ ದೂರು ನೀಡುವುದು, ಎಸ್‌ಎಂಎಸ್‌ ಮೂಲಕ ಸಮನ್ಸ್‌ ಜಾರಿ, ಅಪರಾಧ ಸ್ಥಳದ ಕಡ್ಡಾಯ ವಿಡಿಯೋ ಚಿತ್ರೀಕರಣ ಮುಂತಾದ ನಿಯಮಗಳು ಇರಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಕಾನೂನುಗಳನ್ನು ಭಾರತೀಯರೇ ಭಾರತೀಯರಿಗಾಗಿ ರೂಪಿಸಿ, ಭಾರತೀಯ ಸಂಸತ್ತು ಇವುಗಳನ್ನು ಅಂಗೀಕರಿಸಿದೆ. ತನ್ಮೂಲಕ ಬ್ರಿಟಿಷ್‌ ಕಾಲದ ಕ್ರಿಮಿನಲ್‌ ಕಾಯ್ದೆಗಳಿಗೆ ವಿದಾಯ ಹೇಳಲಾಗಿದೆ. ಬ್ರಿಟಿಷ್‌ ಕಾಯ್ದೆಗಳಲ್ಲಿ ಶಿಕ್ಷೆಗೆ ಮಹತ್ವ ನೀಡಲಾಗಿದ್ದರೆ, ಹೊಸ ಕಾಯ್ದೆಗಳಲ್ಲಿ ನ್ಯಾಯಕ್ಕೆ ಮಹತ್ವ ನೀಡಲಾಗಿದೆ. ಕಾನೂನು ಕ್ಷೇತ್ರದಲ್ಲಿ ಇವು ಆಮೂಲಾಗ್ರ ಬದಲಾವಣೆ ತರಲಿವೆ. ಹೊಸ ಕಾಯ್ದೆಗಳ ಆತ್ಮ, ದೇಹ ಹಾಗೂ ಸ್ಫೂರ್ತಿ ಎಲ್ಲವೂ ಭಾರತೀಯವಾಗಿವೆ’ ಎಂದು ಹೇಳಿದ್ದಾರೆ.

ಇನ್ನು ಜಾರಿಗೆ ಬರಲಿರುವ ಹೊಸ ಕಾಯ್ದೆಗಳ ಪ್ರಕಾರ, ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣೆ ಮುಗಿದು 45 ದಿನದೊಳಗೆ ಕೋರ್ಟ್‌ಗಳು ತೀರ್ಪು ನೀಡಿ ಕೋರ್ಟ್‌ನಲ್ಲಿ ಮೊದಲ ವಿಚಾರಣೆ ನಡೆದು 60 ದಿನದೊಳಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳ ಸಂತ್ರಸ್ತರ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನದೊಳಗೆ ಬರಬೇಕು.

ಹೊಸ ಕಾಯ್ದೆಗಳಲ್ಲಿ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ವ್ಯಾಖ್ಯಾನ ಮಾಡಲಾಗಿದ್ದು ದೇಶದ್ರೋಹ ಪದವನ್ನು ಬದಲಿಸಿ ವಿಶ್ವಾಸದ್ರೋಹ ಪದ ಸೇರಿಸಲಾಗಿದೆ. ಎಲ್ಲಾ ರೀತಿಯ ಶೋಧ ಹಾಗೂ ಜಪ್ತಿ ಕಾರ್ಯಾಚರಣೆಯ ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಲಾಗಿದೆ. ಮಹಿಳೆ ಹಾಗೂ ಮಕ್ಕಳ ವಿರುದ್ಧದ ಅಪರಾಧಗಳ ಬಗ್ಗೆ ಹೊಸ ಅಧ್ಯಾಯ ಸೇರಿಸಲಾಗಿದ್ದು, ಮಕ್ಕಳ ಮಾರಾಟ ಹಾಗೂ ಖರೀದಿಯನ್ನು ಗಂಭೀರ ಅಪರಾಧದ ಪಟ್ಟಿಗೆ ಸೇರಿಸಲಾಗಿದೆ. ಅಪ್ರಾಪ್ತರ ಮೇಲಿನ ಸಾಮೂಹಿಕ ಅತ್ಯಾಚಾರಕ್ಕೆ ಮರಣ ದಂಡನೆ ಅಥವಾ ಜೀವಾವಧಿ ಜೈಲುಶಿಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.

ಐಪಿಸಿಯಲ್ಲಿ ಪರಸ್ಪರ ವೈರುಧ್ಯ ಅಥವಾ ಸಮಾನತೆಯಿದ್ದ ಸೆಕ್ಷನ್‌ಗಳನ್ನು ಭಾರತೀಯ ನ್ಯಾಯಸಂಹಿತೆಯಲ್ಲಿ ತೆಗೆದು ಸರಳೀಕರಣಗೊಳಿಸಲಾಗಿದೆ. ಐಪಿಸಿಯಲ್ಲಿ 511 ಸೆಕ್ಷನ್‌ಗಳಿದ್ದರೆ, ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೇವಲ 358 ಸೆಕ್ಷನ್‌ಗಳಿವೆ.

ಐಪಿಸಿಯಲ್ಲಿ ಮದುವೆಯ ಸುಳ್ಳು ಭರವಸೆ, ಅಪ್ರಾಪ್ತರ ಮೇಲಿನ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯೆ, ಸರಗಳವು ಇತ್ಯಾದಿ ಪ್ರಕರಣಗಳನ್ನು ದಾಖಲಿಸಿಕೊಂಡರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಸೆಕ್ಷನ್‌ಗಳಿರಲಿಲ್ಲ. ಹೊಸ ಕಾಯ್ದೆಯಲ್ಲಿ ಅವುಗಳಿಗೆ ನಿರ್ದಿಷ್ಟ ಸೆಕ್ಷನ್‌ ಸೇರಿಸಲಾಗಿದೆ. ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ನಡೆಸಿ ಮಹಿಳೆಯನ್ನು ತ್ಯಜಿಸುವುದರ ವಿರುದ್ಧ ಪ್ರತ್ಯೇಕ ಸೆಕ್ಷನ್‌ ಸೇರಿಸಲಾಗಿದೆ.

ಈ ಹೊಸ ಕಾಯ್ದೆಯಡಿ ಜನರು ಪೊಲೀಸ್‌ ಠಾಣೆಗೇ ಹೋಗದೆ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕವೂ ದೂರು ನೀಡಬಹುದು. ಹಾಗೆಯೇ, ಶೂನ್ಯ ಎಫ್‌ಐಆರ್‌ ಸೌಕರ್ಯದಡಿ ಜನರು ಯಾವುದೇ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಬಹುದು. ಪೊಲೀಸ್‌ ಠಾಣೆಯ ವ್ಯಾಪ್ತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಪೊಲೀಸರಿಂದ ಬಂಧನಕ್ಕೊಳಗಾದವರು ತಮ್ಮ ಆಯ್ಕೆಯ ವ್ಯಕ್ತಿಗೆ ಬಂಧನದ ಬಗ್ಗೆ ಮಾಹಿತಿ ನೀಡುವ ಅವಕಾಶವನ್ನು ಹಕ್ಕಿನ ರೂಪದಲ್ಲಿ ನೀಡಲಾಗಿದ್ದು ಇದರಿಂದಾಗಿ, ಬಂಧಿತರಿಗೆ ತಕ್ಷಣ ತಮ್ಮವರಿಂದ ನೆರವು ಲಭಿಸಲಿದೆ. ಇದಲ್ಲದೆ, ಯಾರನ್ನೇ ಬಂಧಿಸಿದರೂ ಪೊಲೀಸ್‌ ಠಾಣೆ ಹಾಗೂ ಜಿಲ್ಲಾ ಪೊಲೀಸ್‌ ಮುಖ್ಯ ಕಾರ್ಯಾಲಯದಲ್ಲಿ ಅದರ ವಿವರವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page