
ಕಡಬ: ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಸಮೀಪದ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಮೃತ ಅರ್ಪಿತಾ (15) ಅವರ ತಂದೆ ಹರೀಶ್ ಪಿ.ಕೆ ದೂರು ನೀಡಿದ್ದಾರೆ. ಈ ದೂರಿನ ಅನ್ವಯ, ಮೇ 8ರಂದು ಅರ್ಪಿತಾ, ಸುನೀತಾ (21), ಅಕ್ಷತಾ ಹಾಗೂ ಶ್ರೇಯಾ ಸೇರಿ ಕೆಲವರು ಹೊಳೆಗೆ ಸ್ನಾನಕ್ಕೆ ತೆರಳಿದ್ದರು. ಸಂಜೆ ವೇಳೆಗೆ ಈಜುತ್ತಿದ್ದಾಗ ಅರ್ಪಿತಾ ಮತ್ತು ಸುನೀತಾ ನೀರಿನ ಆಳ ತಿಳಿಯದೆ ಮುಳುಗಿದ್ದಾರೆ ಎಂದು ತಿಳಿಸಲಾಗಿದೆ.
ಜೊತೆಯಲ್ಲಿದ್ದವರು ಅವರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ಸ್ಥಳೀಯ ನಿವಾಸಿ ಜಾರ್ಜ್ ಅವರು ನೀರಿನಲ್ಲಿ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ ಎನ್ನಲಾಗಿದೆ.
ಮೃತದೇಹಗಳನ್ನು ಕಡಬ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





















