
ಮೈಸೂರು: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದಲ್ಲಿ ನಡೆದ ಸುವರ್ಣ ಮಹೋತ್ಸವ ಉಪನ್ಯಾಸದಲ್ಲಿ ಮಾತನಾಡಿ ದೇಶದ ಸಮಗ್ರ ಅಭಿವೃದ್ಧಿಗೆ ಸಾಮಾಜಿಕ ಸಾಮರಸ್ಯ ಮತ್ತು ಭಾವನಾತ್ಮಕ ಏಕತೆ ಬಹಳ ಮುಖ್ಯ ಎಂದು ಹೇಳಿದ್ದಾರೆ.
ಸಮಾಜವು ಜಾತಿ ಮತ್ತು ಧರ್ಮದ ಸೀಮಿತ ಮನೋಭಾವದಿಂದ ಹೊರಬರಬೇಕು ಎಂದು ಕರೆ ನೀಡಿದ ಅವರು, ಜಾತಿ ಆಧಾರಿತ ರಾಜಕೀಯ ಅಂತ್ಯಗೊಳ್ಳಬೇಕಾದರೆ ಮೊದಲು ಸಮಾಜವೇ ಜಾತಿಯನ್ನು ಮರೆತಿರಬೇಕು. ಅಂತರಜಾತಿ ವಿವಾಹ ಮತ್ತು ಪರಸ್ಪರ ಒಡನಾಟ ಹೆಚ್ಚಬೇಕು ಎಂದರು.
ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಪ್ರಗತಿ ಅಲ್ಲ, ಅದು ಸಮಾಜದ ಕೊನೆಯ ವ್ಯಕ್ತಿಗೂ ತಲುಪಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಉಲ್ಲೇಖಿಸಿದ ಅವರು, ಸಾಮಾಜಿಕ ಸಮಾನತೆ ಮತ್ತು ಭ್ರಾತೃತ್ವ ಅತ್ಯಗತ್ಯ. ಜನಸಂಖ್ಯಾ ನಿಯಂತ್ರಣಕ್ಕಿಂತ ಜನಸಂಖ್ಯಾ ಅಸಮತೋಲನದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ ಎಂದರು.
ಸರ್ಕಾರವು ದೀರ್ಘಾವಧಿಯ ಜನಸಂಖ್ಯಾ ನೀತಿಗಳನ್ನು ರೂಪಿಸಬೇಕು. ಏಕರೂಪ ನಾಗರಿಕ ಸಂಹಿತೆ ದೇಶಾದ್ಯಂತ ಹಂತಹಂತವಾಗಿ ಜಾರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಭಾರತದ ಅಸ್ತಿತ್ವವು ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಜೋಡಿಕೊಂಡಿದೆ. ಎಲ್ಲಾ ಧರ್ಮಗಳ ಉದ್ದೇಶ ಒಂದೇ ಆಗಿದ್ದು, ಧರ್ಮಗಳ ನಡುವಿನ ಸಾಮರಸ್ಯ ಮಾನವಕುಲದ ಉಳಿವಿಗೆ ಅಗತ್ಯ ಎಂದು ಮೋಹನ್ ಭಾಗವತ್ ಹೇಳಿದರು.





















