
ಬೆಂಗಳೂರು: ಇತ್ತೀಚೆಗಷ್ಟೇ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದು ಇದೀಗ
ಪ್ರಸ್ತುತ 2024-25ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ಮಕ್ಕಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ಪ್ರತಿ ಶನಿವಾರದಂದು ವಿದ್ಯಾರ್ಥಿಗಳಿಗೆ 40 ನಿಮಿಷದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನ ನಡೆಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದ್ದು ಈ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಪಿಯುಸಿ ಮುಗಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಭಯ ಪಡದೆ ಧೈರ್ಯದಿಂದ ಎದುರಿಸಬಹುದಾಗಿದೆ. ಕನ್ನಡ ಮಾಧ್ಯಮ ಮಕ್ಕಳು ಬದುಕು ಕಟ್ಟಿಕೊಳ್ಳಲು ಇಂಗ್ಲಿಷ್ ಬಾರದೇ ಪರದಾಡುತ್ತಿದ್ದು ಸದ್ಯ ಈ ಮಹತ್ವದ ಹೆಜ್ಜೆ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಸಹಾಯವಾಗಲಿದೆ.
ಸಂಭಾಷಣೆ, ನಾಟಕ, ಪಾತ್ರಾಭಿನಯ, ಕಥೆ ಹೇಳುವುದು, ಪರಿಸ್ಥಿತಿ ವಿವರಣೆ, ಅನುಭವಗಳ ಹಂಚಿಕೆ ಈ ಎಲ್ಲಾ ಚಟುವಟಿಕೆಗಳು ಸ್ಪೋಕನ್ ಇಂಗ್ಲೀಷ್ ತರಗತಿಗಳಲ್ಲಿ ಇರಲಿದ್ದು ಸ್ಪೋಕನ್ ಇಂಗ್ಲೀಷ್ ಪ್ರಸ್ತಾವನೆಯನ್ನ ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಅಳವಡಿಸಲಾಗಿದೆ.
ಸ್ಪೋಕನ್ ಇಂಗ್ಲೀಷ್ ಕೈಪಿಡಿಯನ್ನ ಪದವೀಧರ ಶಿಕ್ಷಕರು, ಅಂಗ್ಲಭಾಷೆಯ ಶಿಕ್ಷಕರ ತಂಡ ತಯಾರಿಸಲಿದ್ದು ಇದು ವಿದ್ಯಾರ್ಥಿಗಳು ನಿರರ್ಗಳವಾಗಿ ಅಂಗ್ಲಭಾಷೆಯನ್ನ ಮಾತನಾಡಲು ಅನುಕೂಲವಾಗಲಿದೆ. ಇನ್ನು ಪ್ರತಿ ಶನಿವಾರ ಎಲ್ಲಾ ವಿದ್ಯಾರ್ಥಿಗಳು ಬರೀ ಇಂಗ್ಲೀಷನಲ್ಲೇ ಮಾತನಾಡಬೇಕೆಂಬುದನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.