
ಬೆಂಗಳೂರು: ಕೆಲವು ಪಿಯು ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಅನಧಿಕೃತ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಅವಕಾಶ ನೀಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂತಹ ಕಾಲೇಜುಗಳ ವಿರುದ್ಧ ಪದವಿಪೂರ್ವ ಶಿಕ್ಷಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ನೀಟ್, ಜೆಇಇ, ಸಿಇಟಿ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳ ತರಬೇತಿ ಹೆಸರಿನಲ್ಲಿ ಪಿಯು ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಲಾಗುವುದು ಎಂದು ಇಲಾಖೆಯ ನಿರ್ದೇಶಕ ಭರತ್ ಎಸ್ ತಿಳಿಸಿದ್ದಾರೆ.
ತಪ್ಪಿತಸ್ಥ ಕಾಲೇಜುಗಳಿಗೆ ಮೊದಲು ಸ್ಪಷ್ಟೀಕರಣಕ್ಕೆ ಅವಕಾಶ ನೀಡಿ, ಬಳಿಕ ಮಾನ್ಯತೆ ಹಾಗೂ ಪಿಯು ಕೋರ್ಸ್ ನಡೆಸುವ ಅನುಮತಿಯನ್ನು ಹಿಂಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಪೋಷಕರು ಮತ್ತು ವಿದ್ಯಾರ್ಥಿಗಳು ಪ್ರವೇಶಕ್ಕೂ ಮುನ್ನ ಕಾಲೇಜಿನ ಅಧಿಕೃತ ಅನುಮೋದನೆ, ವಿಭಾಗಗಳು ಹಾಗೂ ಪ್ರವೇಶ ಸಾಮರ್ಥ್ಯವನ್ನು ಇಲಾಖೆಯ ಜಾಲತಾಣದಲ್ಲಿ ಪರಿಶೀಲಿಸುವಂತೆ ಇಲಾಖೆ ಸಲಹೆ ನೀಡಿದೆ.
ಹೊಸ ಕೋರ್ಸ್, ಹೆಚ್ಚುವರಿ ವಿಭಾಗ ಅಥವಾ ಸ್ಥಳಾಂತರಕ್ಕೆ ಸಂಬಂಧಿಸಿದ ಮೌಖಿಕ ಭರವಸೆಗಳನ್ನು ನಂಬಬಾರದು, ಅಧಿಕೃತ ಮಾಹಿತಿ ಇಲಾಖೆಯ ವೆಬ್‌ಸೈಟ್‌ನಲ್ಲಷ್ಟೇ ಲಭ್ಯವಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.




























