
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರ ಶೇಖರ ಸ್ವಾಮೀಜಿ ಮುಸ್ಲಿಮರಿಗೆ ನೀಡಿರುವ ಮತದಾನದ ಹಕ್ಕು ಹಿಂಪಡೆಯಬೇಕು ಎಂಬ ಹೇಳಿಕೆ ನೀಡಿದ್ದು ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ‘ಸ್ವಾಮೀಜಿಗಳು ರಾಜಕಾರಣದಿಂದ ದೂರ ಇರಬೇಕು. ವಿವಾದಾತ್ಮಕ ಹೇಳಿಕೆ ಕೊಟ್ಟು ದೇಶದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಮಾಡಬಾರದು’ ಎಂದು ಮನವಿ ಮಾಡಿದರು.
ಸ್ವಾಮೀಜಿಗಳು ಇಂಥ ವಿವಾದಾತ್ಮಕ ಹೇಳಿಕೆ ನೀಡಬಾರದು. ಸಮಾಜದ ಶಾಂತಿ ಕೆಡಿಸುವ ಕೆಲಸ ಮಾಡಬಾರದು. ಅವರು ರಾಜಕಾರಣದಿಂದ ದೂರ ಇರುವುದು ಒಳಿತು. ಮತದಾನ ಎಂಬುದು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಬಂದಿರುವ ಹಕ್ಕು. ಒಬ್ಬ ವ್ಯಕ್ತಿ ಜನಿಸಿದರೆ ಸಂವಿಧಾನದಿಂದ ಸಿಗುವ ಹಕ್ಕುಗಳಲ್ಲಿ ಇದು ಕೂಡ ಒಂದು’ ಎಂದು ಹೇಳಿದರು.



















