
ಉಡುಪಿ: ಕಾರ್ಮಿಕ ಇಲಾಖೆಯ ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ಸೃಷ್ಟಿಸಿ ಸರಕಾರ ಹಾಗೂ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಲಾಭ ಪಡೆಯುತ್ತಿದ್ದವರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದು ಈಗಾಗಲೇ 2,46,951 ಕಾರ್ಡ್ ನಕಲಿ ಎಂದು ಪಟ್ಟಿ ಮಾಡಿ ಈ ಎಲ್ಲ ಕಾರ್ಡ್‌ಗಳನ್ನು ಅಮಾನತುಗೊಳಿಸಿದೆ.
ಈವರೆಗೆ ಉಭಯ ಜಿಲ್ಲೆಯಲ್ಲಿ 1,286 ನಕಲಿ ಕಾರ್ಡ್ ಗಳನ್ನು ಅಮಾನತುಗೊಳಿಸಲಾಗಿದೆ.
ರಾಜ್ಯದಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು ಈ ಪೈಕಿ 2,46,951 ಕಾರ್ಡ್ ನಕಲಿ ಎಂದು ಪಟ್ಟಿ ಮಾಡಿ ಅಮಾನತುಗೊಳಿಸಿದೆ.
ಕಾರ್ಮಿಕ ಕಾರ್ಡ್ ಹೊಂದಿದವರಿಗೆ ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಹೀಗೆ 15ಕ್ಕೂ ಹೆಚ್ಚು ವಿಭಾಗದಲ್ಲಿ ಆರ್ಥಿಕ ನೆರವು ಸರಕಾರದಿಂದ ಒದಗಿಸಲಾಗುತ್ತಿದೆ.
ನಕಲಿ ಕಾರ್ಮಿಕರ ಕಾರ್ಡಿನ ರದ್ದು ವಿವರ:
ಬೆಂ.ಗ್ರಾಮಾಂತರ 402,
ಬೆಂ.ನಗರ 2,967,
ಬಾಗಲಕೋಟೆ 2,039,
ಬೆಳಗಾವಿ 1,136,
ಬಳ್ಳಾರಿ 1,498,
ಬೀದರ್ 25,759,
ವಿಜಯಪುರ 2,097,
ಚಾಮರಾಜನಗರ 743,
ಚಿಕ್ಕಬಳ್ಳಾಪುರ 1,242,
ಚಿಕ್ಕಮಗಳೂರು 1,173,
ಚಿತ್ರದುರ್ಗ 859,
ದಕ್ಷಿಣ ಕನ್ನಡ 1,076,
ದಾವಣಗೆರೆ 3,659,
ಧಾರವಾಡ 3,503,
ಗದಗ 3,051,
ಕಲಬುರಗಿ 2,280,
ಹಾಸನ 2,266,
ಹಾವೇರಿ 1,69,180,
ಕೊಡಗು 175,
ಕೋಲಾರ 1988,
ಕೊಪ್ಪಳ 2083,
ಮಂಡ್ಯ 396,
ಮೈಸೂರು 1,316,
ರಾಯಚೂರು 383,
ರಾಮನಗರ 2748,
ಶಿವಮೊಗ್ಗ 6,900,
ತುಮಕೂರು 1,210,
ಉಡುಪಿ 210,
ಉತ್ತರ ಕನ್ನಡ 4,155.
ಈ ಕುರಿತು ಮಾತನಾಡಿದ ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಶಾ ಅಲ್ತಫ್ ಅಹಮ್ಮದ್, ಕಾರ್ಮಿಕರು ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ. ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ಪಡೆದ ಕಾರ್ಡ್ ಎಲ್ಲೇ ಕೆಲಸ ಮಾಡಿದರೂ ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲು ಕಾರ್ಮಿಕ ಇಲಾಖೆ ಯೋಜನೆ ಸಿದ್ಧಪಡಿಸಿದೆ.
ಕಾರ್ಮಿಕ ಕಾರ್ಡ್‌ಗಳ ದುರುಪಯೋಗ ಸಲ್ಲದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.



















